Advertisement

ಬರಿದಾಗುತ್ತಿದೆ ಸೋಮೇಶ್ವರ ಬೆಟ್ಟದ ಒಡಲು

04:02 PM May 06, 2022 | Team Udayavani |

ಜಗಳೂರು: ತಾಲೂಕಿನ ಜಮ್ಮಾಪುರ ಮತ್ತು ಅರಿಶಿಣಗುಂಡಿ ಗ್ರಾಮಗಳ ಮಧ್ಯೆ ಇರುವ ಶ್ರೀ ಸೋಮೇಶ್ವರ ಬೆಟ್ಟದಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ಜಮ್ಮಾಪುರದಲ್ಲಿ ಅಂದಾಜು 500ಕ್ಕೂ ಹೆಚ್ಚು ಲಾರಿ ಲೋಡ್‌ ಮಣ್ಣನ್ನು ರಾತ್ರಿ ಹೊತ್ತು ಗುಡ್ಡದ ಒಡಲನ್ನು ಬಗೆದು ಎಗ್ಗಿಲ್ಲದೇ ಸಾಗಿಸಿದ್ದಾರೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂದು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಏ. 29ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಗಳೂರು ಪಟ್ಟಣಕ್ಕೆ ಭೇಟಿ ನೀಡುವ ಮೂರು ದಿನ ಮುಂಚೆ ಅಂದರೆ ಏ. 26, 27 ಮತ್ತು 28ರಂದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಒಂದು ಜೆಸಿಬಿ ಮತ್ತು 10ಕ್ಕೂ ಹೆಚ್ಚು ಟ್ರಾಕ್ಟರ್‌ಗಳನ್ನು ಬಳಸಿ ನಿರಂತರವಾಗಿ ಗಣಿಗಾರಿಕೆ ಮಾಡಲಾಗಿದೆ ಎಂದು ಜಮ್ಮಾಪುರ ಗ್ರಾಮದ ಬಾಲರಾಜ್‌ ದೂರಿದ್ದಾರೆ.

ಅರಿಶಿಣಗುಂಡಿ, ತೋರಣಗಟ್ಟೆ, ಜಮ್ಮಾಪುರ, ಲಿಂಗಣ್ಣನಹಳ್ಳಿ, ಮರೇನಹಳ್ಳಿ, ಬೊಮ್ಮಕ್ಕನಹಳ್ಳಿ ಗ್ರಾಮಗಳಿಗೆ ಜಮ್ಮಾಪುರ ಗ್ರಾಮದ ಐತಿಹಾಸಿಕ ಕೆರೆಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಅಂದಾಜು ಒಂದು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸಮೃದ್ಧವಾದ ಅಡಕೆ ತೋಟಗಳು ತಲೆ ಎತ್ತಿವೆ. ಈ ಕೆರೆಯ ನೀರು ಸಾವಿರಾರು ಕುಟುಂಬಗಳಿಗೆ ಕುಡಿಯುವ ನೀರಿನ ಮೂಲವೂ ಆಗಿದೆ. ಇದಕ್ಕೆ ಕೆರೆಯ ಪಕ್ಕದಲ್ಲಿರುವ ಸೋಮೇಶ್ವರ ಬೆಟ್ಟವೇ ಕಾರಣ. ಅನೇಕ ಗ್ರಾಮಗಳಿಗೆ ರಕ್ಷಣೆಯಾಗಿ ನಿಂತಿರುವ ಈ ಬೆಟ್ಟದಲ್ಲಿ ಅಕ್ರಮವಾಗಿ ನಿರಂತರವಾಗಿ ನಡೆಯುತ್ತಿದ್ದರೂ ತಾಲೂಕು ಆಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ರಾತ್ರಿಯೆಲ್ಲ ಬಗೆದ ಮಣ್ಣನ್ನು ಜಮ್ಮಾಪುರ ಗ್ರಾಮದ ಹಳ್ಳದ ಪಕ್ಕದಲ್ಲಿರುವ ಗೋಮಾಳದಲ್ಲಿ ಶೇಖರಿಸಲಾಗುತ್ತದೆ. ಅಲ್ಲದೆ ಯಂತ್ರ ಬಳಸಿ ಯಾರಿಗೂ ಅನುಮಾನ ಬಾರದಂತೆ ಮಟ್ಟ ಮಾಲಾಗುತ್ತದೆ. ಯಾರಾದರೂ ಪ್ರಶ್ನೆ ಮಾಡಿದರೆ ಅಭಿವೃದ್ಧಿ ಕಾರ್ಯಕ್ಕೆ ಮಣ್ಣು ಬಳಕೆ ಮಾಡಿಕೊಳ್ಳಬಹುದು ಎಂಬ ಸಿದ್ಧ ಉತ್ತರ ನೀಡಲು ಗಣಿಗಾರಿಕೆಯಲ್ಲಿ ತೊಡಗಿರುವವರು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಣ್ಣು ಗಣಿಗಾರಿಕೆ ಮಾಡಿರುವ ವ್ಯಕ್ತಿ ಚಿತ್ರದುರ್ಗ ಮೂಲದವರಾಗಿದ್ದಾರೆ. ಸಂಬಂಧಿಸಿದರವರು ಕೂಡಲೇ ಅಕ್ರಮ ಮಣ್ಣು ಗಣಿಗಾರಿಕೆಗೆ ಬ್ರೇಕ್‌ ಹಾಕಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಮಣ್ಣು ಗಣಿಗಾರಿಕೆ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಅಕ್ರಮ ಗಣಿಗಾರಿಕೆ ತಡೆಯುವಂತೆ ಪೊಲೀಸ್‌ ಇಲಾಖೆಗೆ ಆದೇಶ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಗಣಿಗಾರಿಕೆ ಮಾಡಲು ಬಿಡುವುದಿಲ್ಲ. – ಎಸ್‌.ವಿ. ರಾಮಚಂದ್ರ, ಜಗಳೂರು ಶಾಸಕರು

Advertisement

ಜಮ್ಮಾಪುರ ಬೆಟ್ಟದಲ್ಲಿ ರಾತ್ರಿಯಲ್ಲಾ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲೇ ವೈವಿಧ್ಯಮಯ ಬೆಟ್ಟವಾಗಿದ್ದು ಗಣಿಗಾರಿಕೆ ಮಾಡಲು ಬಿಟ್ಟರೆ ನಾವು ಸರ್ವನಾಶವಾಗುತ್ತೇವೆ. ಗಣಿಗಾರಿಕೆ ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. – ಬಾಲರಾಜ್‌, ರೈತರು, ಜಮ್ಮಾಪುರ

Advertisement

Udayavani is now on Telegram. Click here to join our channel and stay updated with the latest news.

Next