ಅಕ್ರಮ ಗಣಿಗಾರಿಕೆ, ಜಾನುವಾರುಗಳ ಅಕ್ರಮ ಸಾಗಾಟ ಮತ್ತು ತಪಾಸಣೆ ವೇಳೆ ಪೊಲೀಸರ ಮೇಲೆ ಟ್ರಕ್ ಹತ್ತಿಸಿ ಹತ್ಯೆ ಮಾಡಿದ ಘಟನೆಗಳು ದೇಶವನ್ನೇ ಬೆಚ್ಚುವಂತೆ ಮಾಡಿವೆ. 24 ಗಂಟೆಗಳಲ್ಲಿ ಒಟ್ಟು 3 ಘಟನೆಗಳು ನಡೆದಿವೆ. ದುಷ್ಕರ್ಮಿಗಳು ಕರ್ತವ್ಯ ನಿರತ ಪೊಲೀಸರನ್ನು ಹತ್ಯೆ ಮಾಡಿರುವುದು ಎಲ್ಲೆಡೆ ಆಕ್ರೋಶಕ್ಕೂ ಕಾರಣವಾಗಿದೆ.
ಮಂಗಳವಾರವಷ್ಟೇ ಹರಿಯಾಣದ ಗುರುಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಹೋಗಿದ್ದ ಡಿವೈಎಸ್‌ಪಿ ಮೇಲೆ ವಾಹನವೊಂದನ್ನು ಹರಿಸಿ ಹತ್ಯೆ ಮಾಡಲಾಗಿತ್ತು. ಈ ಘಟನೆ ದೇಶದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದ್ದು, ಅಕ್ರಮ ಗಣಿಗಾರಿಕೆಯಲ್ಲಿ ತೊಡ ಗಿರುವವರ ಕ್ರೌರ್ಯವನ್ನು ಬಿಚ್ಚಿಟ್ಟಿದೆ. ನುಹ್ ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಅರಿತು ಡಿವೈಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಕಲ್ಲು ತುಂಬಿಕೊಂಡಿದ್ದ ಲಾರಿಯನ್ನು ಈ ಅಧಿಕಾರಿ ಮೇಲೆಯೇ ಚಾಲಕ ಹರಿಸಿದ್ದ. ಹೀಗಾಗಿ ತೀವ್ರವಾಗಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಇದೇ ಮಾದರಿಯ ಘಟನೆ, ಝಾರ್ಖಂಡ್‌ನಲ್ಲಿಯೂ ನಡೆದಿದೆ. ಚೆಕ್‌ಪಾಯಿಂಟ್‌ವೊಂದರಲ್ಲಿ ಪೊಲೀಸ್ ಅಧಿಕಾರಿ ಸಂಧ್ಯಾ ಟಪ್ನೊà ಅವರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಜಾನು ವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವೊಂದು ಇವರ ಮೇಲೆಯೇ ಹರಿದಿದೆ. ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಚೆಕ್‌ಪೋಸ್ಟ್ ನಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಆದರೆ ಜಾನುವಾರು ಹೊತ್ತು ತಂದಿದ್ದ ದುಷ್ಕರ್ಮಿ, ವಾಹನವನ್ನು ನಿಲ್ಲಿಸದೇ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮೇಲೆಯೇ ಹರಿಸಿದ್ದಾನೆ. ಇದು ಮಂಗಳವಾರ ತಡರಾತ್ರಿ ನಡೆದಿರುವ ಘಟನೆಯಾಗಿದೆ.
ಅತ್ತ ಗುಜರಾತ್ ಕೂಡ ಇಂಥದ್ದೇ ಘಟನೆಗೆ ಸಾಕ್ಷಿಯಾಗಿದ್ದು, ಆನಂದ್ ಜಿಲ್ಲೆಯ ಬೋರ್ಸಾದ್ ಪೊಲೀಸ್ ಠಾಣೆಯ ಕಾನ್‌ಸ್ಟೆàಬಲ್ ಮೇಲೆ ದುಷ್ಕರ್ಮಿಯೊಬ್ಬ ವಾಹನ ಹತ್ತಿಸಿ ಹತ್ಯೆ ಮಾಡಿದ್ದಾನೆ. ಇದೂ ಮಂಗಳವಾರ ತಡರಾತ್ರಿ ನಡೆದಿದ್ದು, ಇಲ್ಲಿಯೂ ವಾಹನ ತಪಾಸಣೆಗಾಗಿ ನಿಲ್ಲಿಸಲು ಹೋದಾಗ ಈ ಘಟನೆ ನಡೆದಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ನಡೆದಿರುವ ಈ ಮೂರು ಪ್ರಕರಣಗಳಿಂದಾಗಿ ಕರ್ತವ್ಯ ದಲ್ಲಿರುವ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆಯೂ ಮೂಡುವಂತೆ ಮಾಡಿದೆ. ಏಕೆಂದರೆ, ಈಗ ಹತ್ಯೆಯಾಗಿರುವ ಮೂವರೂ ಪೊಲೀಸರೇ ಆಗಿದ್ದಾರೆ. ರಕ್ಷಣೆ ನೀಡುವ ಪೊಲೀಸರನ್ನೇ ಹತ್ಯೆ ಮಾಡಿರುವ ದುಷ್ಕರ್ಮಿಗಳು ತಾವು ಕಾನೂನಿಗಿಂತ ಅತೀತ ಎಂಬ ದಾಷ್ಟತನಕ್ಕೆ ಬಂದಿದ್ದಾರೆ ಎಂದೇ ಹೇಳಬೇಕಾಗುತ್ತದೆ.
ಹರಿಯಾಣ, ಝಾರ್ಖಂಡ್ ಮತ್ತು ಗುಜರಾತ್ ಸರಕಾರಗಳು ಯಾವುದೇ ಕಾರಣಕ್ಕೂ ದುಷ್ಕರ್ಮಿಗಳನ್ನು ಬಿಡಬಾರದು. ಇವರೆ ಲ್ಲರನ್ನೂ ಬಂಧಿಸಿ, ಇವರಿಗೆ ಕಠಿನ ಶಿಕ್ಷೆಯಾಗುವಂತೆ ಮಾಡಲೇಬೇಕು. ಅಲ್ಲದೆ, ಪೊಲೀಸರ ಮೇಲೆಯೇ ಈ ರೀತಿಯ ಘಟನೆಗಳಾಗುತ್ತವೆ ಎಂದಾದರೆ, ಇತರ ಅಧಿಕಾರಿಗಳು ಮತ್ತು ಜನತೆ ಏನು ಮಾಡ ಬೇಕಾದೀತು ಎಂಬ ಪ್ರಶ್ನೆ ಎದುರಾಗುತ್ತದೆ. ಹಾಗೆಯೇ ಪೊಲೀಸೇತರ ಅಧಿಕಾರಿಗಳ ನೈತಿಕ ಸ್ಥೈರ್ಯವೂ ಕುಗ್ಗಿದಂತಾಗುತ್ತದೆ ಎಂಬುದರಲ್ಲಿ ಎರಡು ಮಾತೇ ಇಲ್ಲ.