Advertisement

Illegal liquor; ಅಕ್ರಮ ಮದ್ಯ; ಮೌನಕ್ಕೆ ಜಾರಿದ ಅಬಕಾರಿ ಇಲಾಖೆ

04:26 PM Dec 03, 2023 | Team Udayavani |

ಹೊಸಕೋಟೆ: ತಾಲೂಕಿನ ವಿವಿಧೆಡೆ ಅಕ್ರಮ ಮದ್ಯ ಮಾರಾಟ ದಂಧೆ ರಾಜಾರೋಷವಾಗಿ ನಡೆ ಯುತ್ತಿದ್ದರೂ ಅಬ ಕಾರಿ ಇಲಾಖೆ ನಿದ್ರೆಗೆ ಜಾರಿದೆ. ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ದಿನದ 24 ಗಂಟೆ ಯೂ ಅಕ್ರಮ ಮದ್ಯ ಸಿಗುತ್ತಿದ್ದು ಮಹಿಳೆಯರು ಇಲಾಖೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.ಅಬಕಾರಿ ಇಲಾಖೆ ನೀಡಿರುವ ನಿಯಮಗಳನ್ನು ಇಲ್ಲಿನ ಕೆಲ ಬಾರ್‌ಗಳು ಗಾಳಿಗೆ ತೂರಿದ್ದು ಅಕ್ಕಪಕ್ಕದ ಅಂಗಡಿ ಮತ್ತು ಮನೆಗಳಿಗೂ ತುಂಬಾ ತೊಂದರೆಯಾಗುತ್ತಿದೆ.

Advertisement

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಅಕ್ರಮ ಮದ್ಯ ಅಂಗಡಿಗಳಿಗೆ ಮದ್ಯ ಸರಬರಾಜು ಆಗುತ್ತಿದ್ದು ಅಬಕಾರಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಮೌನಕ್ಕೆ ಜಾರಿದ್ದಾರೆ.

ಮನೆಗಳಲ್ಲಿ ಮಾರಾಟ: ಪ್ರತಿ ಚಿಲ್ಲರೆ ಅಂಗಡಿ, ದಿನಸಿ ಅಂಗಡಿ ರಸ್ತೆ ಬದಿಯ ಡಬ್ಬ ಅಂಗಡಿಗಳಲ್ಲಿ, ನಿರ್ಜನ ಪ್ರದೇಶದಲ್ಲಿ ಚೀಲಗಳಲ್ಲಿ, ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದ ದಿನಸಿ ಖರೀದಿ ಸಲು ಹೋಗುವ ಮಹಿಳೆಯರೂ ಗುಟ್ಟಾಗಿ ಮದ್ಯ ಖರೀದಿಸುತ್ತಿದ್ದಾರೆ. ಒಂದು ವೇಳೆ ಒಬ್ಬ ವ್ಯಕ್ತಿಗಿಂತ ಹೆಚ್ಚಿನ ಮದ್ಯ ಬೇಕಾದರೆ ಕ್ಷಣಾರ್ಧದಲ್ಲಿ ತಂದು ಮಾರಾಟ ಮಾಡುವ ಸ್ಥಿತಿಯಿದೆ. ಇನ್ನು ಕೆಲ ಮದ್ಯದ ಅಂಗಡಿಗಳಿಂದ ಚೀಪ್‌ ಲಿಕ್ಕರ್‌ ಖರೀದಿಸಿಹೋಟೆಲ್‌, ಮನೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಕಾಟಾಚಾರಕ್ಕೆ ದಾಳಿ: ಹೆದ್ದಾರಿ ಪಕ್ಕದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಅಕ್ರಮ ಮದ್ಯ ಮಾರಾಟ ಖರೀದಿಗೆ ಮುಗಿ ಬೀಳುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಇನ್ನೂ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಅಲ್ಲಲ್ಲಿ ದಾಳಿ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ ಕೇವಲ ಬೆರಳೆಣಿಕೆ ಪ್ರಕರಣ ಮಾತ್ರ ದಾಖಲಾಗುತ್ತಿವೆ.

ದಾಳಿ ನಡೆಸುತ್ತಿಲ್ಲ: ಕೆಲ ಸಂಘದ ಸದಸ್ಯರು, ಪ್ರಗತಿ ಪರ ಸಂಘಟನೆಗಳು ಮದ್ಯ ಅಂಗಡಿ ತೆರವಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಗ್ರಾಮೀಣ ಭಾಗದಲ್ಲಿ ನೆಪ ಮಾತ್ರಕ್ಕೆ ಕಡೆ ದಾಳಿ ನಡೆಸಿ ಹಣ ಪಡೆದು ಸುಮ್ಮನಾಗುತ್ತಾರೆ. ಅಧಿಕಾರಿಗಳು ಮಾತ್ರ ಬಾರ್‌ ಮಾಲಿಕರಿಂದ ತಮಗೆ ಬರುವ ಮಾಮೂಲಿ ಪಡೆದು ಸುಮ್ಮನಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Advertisement

ಅಕ್ರಮ ಮದ್ಯ ಮಾರಾಟ ಮಾಹಿತಿ ನೀಡಿದರೆ ಕ್ರಮ: ನಾನು ಬಂದು 1 ತಿಂಗಳು ಆಗಿದೆ. ದೇವನಹಳ್ಳಿ ಮತ್ತು ಹೊಸಕೋಟೆ ಎರಡೂ ಕಡೆ ನೋಡಿಕೊಳ್ಳುತ್ತಿದ್ದೇನೆ. ನನ್ನ ಅವಧಿಯಲ್ಲಿ 10-12 ಪ್ರಕರಣ ದಾಖಲಿಸಲಾಗಿದೆ. ಹಳ್ಳಿಗಳಲ್ಲಿ ಮದ್ಯ ಮಾರಾಟ ಸರ್ವೆ ಸಾಮಾನ್ಯ. ಗ್ರಾಪಂ ಸದಸ್ಯರೇ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ. ಜನರ ಸಹಕಾರದೊಂದಿಗೆ ಅಕ್ರಮ ಮದ್ಯ ಮಾರಾಟದ ಮಾಹಿತಿ ನೀಡಿದರೆ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಹೊಸಕೋಟೆ ತಾಲೂಕು ಅಬಕಾರಿ ಇಲಾಖೆ ಸಿಪಿಐ ಸುನೀಲ್‌ ತಿಳಿಸಿದ್ದಾರೆ.

ಚಿಲ್ಲರೆ ಅಂಗಡಿಗಳಲ್ಲೂ ಅಕ್ರಮ ಮದ್ಯ ಮಾರಾಟ : ಕೆಲವು ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದೆ ಬೆಳಗ್ಗೆಯೇ ಮದ್ಯ ಸೇವಿಸಿ ರಸ್ತೆ ಬದಿಗಳಲ್ಲೇ ಬಿದ್ದಿರುತ್ತಾರೆ. ಅನೇಕರು ರೋಗ ಪೀಡಿತರಾಗಿ ಆಸ್ಪತ್ರೆ ಸೇರಿದರೆ ಕೆಲವರು ಸಾವನ್ನಪ್ಪಿದ್ದಾರೆ. ಇದರಿಂದ ಹೊಸಕೋಟೆ ತಾಲೂಕಿನಾದ್ಯಂತ 14 ವೈನ್‌ ಶಾಪ್‌, 18-19 ಬಾರ್‌- ರೆಸ್ಟೋರೆಂಟ್‌, 12 ಲಾಡ್ಜಿಂಗ್ ಬಾರ್‌ ಶಾಪ್‌, 3 ಎಂಎಸ್‌ ಐಎಲ್‌ ಒಳಗೊಂಡಂತೆ 2 ಪಬ್‌ ಇವೆ. ಒಟ್ಟು 51-52 ಮದ್ಯದ ಅಂಗಡಿ ಪರವಾನಗಿ ಪಡೆದು ಕೊಂಡಿವೆ. ಆದರೆ, ಪರವಾನಗಿ ಇಲ್ಲದೇ ಅನೇಕ ಡಾಬಾ, ಕಿರಾಣಿ ಅಂಗಡಿ, ಮನೆ, ಚಿಲ್ಲರೆ ಅಂಗಡಿಗಳಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಏನಿಲ್ಲ ಅಂದರೂ 4-5 ಅಕ್ರಮ ಮದ್ಯದಂಗಡಿ ತಲೆ ಎತ್ತಿವೆ.

ರಸ್ತೆ ಪಕ್ಕದಲ್ಲಿರುವ ಚಿಲ್ಲರೆ ಅಂಗಡಿಗಳಲ್ಲಿ ರಾಜಾರೋಷವಾಗಿ ದಿನ ನಿತ್ಯವೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಅನೇಕರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕುಟುಂಬಗಳು ಬೀದಿ ಪಾಲಾಗುತ್ತವೆ. – ಪ್ರೇಮಾ, ಸ್ಥಳೀಯ ವಾಸಿ

– ಕಾಂತರಾಜು

Advertisement

Udayavani is now on Telegram. Click here to join our channel and stay updated with the latest news.

Next