Advertisement
ಧಾರ್ಮಿಕ ಕೇಂದ್ರದ ಎದುರಿನಲ್ಲೇ ಬದಲಿ ಹಾದಿಈ ಮದ್ಯದಂಗಡಿಗೆ ಈಗ ಬದಲಿ ಹಾದಿ ಮಾಡಿರುವುದು ಸ್ವಾಮಿ ಗುರುನಾರಾಯಣ ಮಂದಿರದ ಆವರಣದ ಬದಿಯಲ್ಲಿಯೇ. ಹೊಸ ಆದೇಶದ ಪ್ರಕಾರ ಪ್ರಾರ್ಥನಾ ಕೇಂದ್ರಗಳ ಆಸುಪಾಸಿನಿಂದಲೂ ಸಾಕಷ್ಟು ದೂರದಲ್ಲಿ ಮದ್ಯದಂಗಡಿಗಳಿರಬೇಕು ಅನ್ನುವ ಸ್ಪಷ್ಟ ನಿರ್ದೇಶವಿದ್ದರೂ ಅದನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ದೇಗುಲದ ಭಕ್ತರು ದೂರಿದ್ದಾರೆ.
ಈ ಮದ್ಯದಂಗಡಿಗೆ ಯಾವುದೇ ತೊಂದರೆ ಇಲ್ಲದೆ ಪಾನಪ್ರಿಯರು ಎಂದಿನಂತೆ ಹೋಗಿದ್ದಾರೆ. ಇದೇ ಕಟ್ಟಡಕ್ಕೆ ಸುತ್ತುಬಳಸಿ ಹೊಸ ಹಾದಿಯನ್ನು ದಿಢೀರ್ ಆಗಿ ಜೂನ್ 30ರಂದು ನಿರ್ಮಿಸಲಾಗಿದೆ. ಈ ಹಾದಿಯಲ್ಲಿ ಚರಂಡಿಯೊಂದು ಇದ್ದು ಅದಕ್ಕೆ ಅಡ್ಡಲಾಗಿ ಅಡಕೆ ಮರದ ತುಂಡುಗಳನ್ನು ಹಾಕಿ ಸಂಕ ನಿರ್ಮಿಸಲಾಗಿದೆ. ಹೆದ್ದಾರಿ ಬದಿಯಲ್ಲೇ ಈ ರೀತಿ ರಾಜಾರೋಷವಾಗಿ ಮದ್ಯದ ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಅಬಕಾರಿ ಇಲಾಖಾಧಿಕಾರಿಗಳನ್ನು ಕೇಳಿದಾಗ ಅಂಗಡಿಯವರು ಈ ಹಿಂದೆಯೇ ನಿರ್ದಿಷ್ಟ ದೂರದಲ್ಲಿ ಇರುವುದನ್ನು ಖಚಿತ ಪಡಿಸಿ ಪರವಾನಿಗೆ ಪಡೆಯಲು ಅರ್ಜಿ ನೀಡಿದ್ದಾರೆ ಅನ್ನುವ ಸಬೂಬುಗಳನ್ನು ಹೇಳುತ್ತಿದ್ದಾರೆ. ಈ ಬಗ್ಗೆ ನೆಲ್ಯಾಡಿ ಮತ್ತು ಆಸುಪಾಸಿನ ಗ್ರಾಮಸ್ಥರು, ಮಹಿಳೆಯರೂ, ವಿವಿಧ ಸಂಘಟನೆಗಳು ಸಾರ್ವಜನಿಕವಾಗಿ ದೂರನ್ನು ಸಂಬಂದಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ನೀಡಲು ನಿರ್ಧರಿಸಿದ್ದಾರೆ. ಸೂಕ್ತ ಸ್ಪಂದನೆ ಕೂಡಲೇ ದೊರೆಯದಿದ್ದಲ್ಲಿ ಬೀದಿಗಿಳಿದು ಪ್ರತಿಭಟಿಸುವ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ. ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ , ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ರವಿಚಂದ್ರ ಗೌಡ ಹೊಸವೊಕ್ಲು, ನೆಲ್ಯಾಡಿ ವಲಯ ಹಿಂದೂ ಜಾಗರಣಾ ವೇದಿಕೆ ಸಂಚಾಲಕರು ರವಿಪ್ರಸಾದ್ ಶೆಟ್ಟಿ ಬಾರ್ ಮಾಲಕರು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗಿದೆ ಅಂದಿದ್ದಾರೆ.