Advertisement

ಅಕ್ರಮ ಭೂ ಮಂಜೂರಾತಿ

06:00 AM Dec 18, 2018 | Team Udayavani |

ಬೆಳಗಾವಿ: ಭೂ ಮಂಜೂರಾತಿ, ಒತ್ತುವರಿ ಭೂಮಿ ಸಕ್ರಮ ಸೇರಿ ಸರಕಾರಿ ಭೂಮಿ ಮಂಜೂರಾತಿ ಪ್ರಕ್ರಿಯೆಯಲ್ಲಿ ನಿಯಮಾವಳಿ ಗಾಳಿಗೆ ತೂರಿರುವುದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ. 837 ಎಕರೆ ಭೂಮಿ ಅಕ್ರಮವಾಗಿ ಮಂಜೂರು ಮಾಡಿರುವುದು, 1,055.19 ಎಕರೆ ಒತ್ತುವರಿಯನ್ನು ನಿಯಮ ಬಾಹಿರವಾಗಿ ಸಕ್ರಮಗೊಳಿಸಿರುವುದು ಹಾಗೂ 2.44 ಲಕ್ಷ ಎಕರೆ ಭೂಮಿಯ ಒತ್ತುವರಿ ತೆರವುಗೊಳಿಸಿದ್ದರೂ ಸರಕಾರದ ಸುಪರ್ದಿಗೆ ತೆಗೆದುಕೊಳ್ಳದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ಸೋಮವಾರ ಸದನದಲ್ಲಿ ಸರಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಕುರಿತ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವರದಿ ಮಂಡಿಸಲಾಗಿದೆ. ವರದಿ ಪ್ರಕಾರ, ಸರಕಾರಿ ಭೂಮಿ ಖಾಸಗಿಯವರಿಗೆ ಮಂಜೂರು ಮಾಡುವಲ್ಲಿ ನಿಯಮ ಉಲ್ಲಂಘಿಸಿದ್ದು, 837 ಎಕರೆ ಅಕ್ರಮ ವಾಗಿ ಮಂಜೂರು ಮಾಡಲಾಗಿದೆ. ಜತೆಗೆ 1,055.19 ಎಕರೆ ಅಕ್ರಮ ಸಾಗುವಳಿಯನ್ನು ನಿಯಮ ಬಾಹಿರವಾಗಿ ಸಕ್ರಮಗೊಳಿಸಲಾಗಿದೆ.

ಒತ್ತುವರಿ ತೆರವುಗೊಳಿಸಿದ ಅನಂತರವೂ 2.44 ಲಕ್ಷ ಎಕರೆ ಒತ್ತುವರಿ ಜಮೀನು ಸ್ವಾಧೀನಪಡಿಸಿಕೊಳ್ಳದೆ ಒತ್ತುವರಿದಾರರ ಸುಪರ್ದಿಯಲ್ಲೇ ಇದೆ. ಅರ್ಜಿಯೇ ಸಲ್ಲಿಸದ 11 ಮಂದಿಗೆ ಅಕ್ರಮವಾಗಿ 47.21 ಎಕರೆ ಮಂಜೂರು ಮಾಡಲಾಗಿದೆ. ಅರ್ಹರಲ್ಲದ 24 ಫಲಾನು ಭವಿಗಳಿಗೆ 117 ಎಕರೆ ಮಂಜೂರು ಮಾಡಲಾಗಿದೆ. ಮಾಹಿತಿ ಖಚಿತಪಡಿಸಿಕೊಳ್ಳದೆ 10 ಕಡೆ 390.38 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಸಿಎ ನಿವೇಶನ, ಬಿ ಖರಾಬು, ಗುಂಡುತೋಪು, ಕೆರೆ, ಶ್ಮಶಾನ ಇತ್ಯಾದಿ ಜಮೀನು ಮಂಜೂರು ಮಾಡಲು ಅವಕಾಶವಿಲ್ಲದಿದ್ದರೂ 283.16 ಎಕರೆ ಭೂಮಿಯನ್ನು ಕಂದಾಯ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ವ್ಯಾಪ್ತಿಯ 204.14 ಎಕರೆಯನ್ನು 86 ಫಲಾನುಭವಿಗಳಿಗೆ ಮಂಜೂರು ಮಾಡಿರುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ.

ಸರಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಮಂಜೂರು ಮಾಡುವ ವೇಳೆಯೂ 56 ಮಂದಿ ಅನರ್ಹ ಫಲಾನುಭವಿಗಳಿಗೆ 196 ಕೋಟಿ ರೂ. ರಿಯಾಯಿತಿ ನೀಡಿರುವುದು ಪ್ರಸ್ತಾವಿಸಲಾಗಿದೆ. ಹೊಸ ಒತ್ತುವರಿ ಗುರುತಿಸಿಲ್ಲ 2017ರ ಮಾರ್ಚ್‌ವರೆಗೆ ರಾಜ್ಯದಲ್ಲಿ 4,48,615 ಎಕರೆ ಭೂಮಿ ಒತ್ತುವರಿಯಾಗಿತ್ತು. ಬೆಂಗಳೂರು ನಗರದಲ್ಲಿ ಹೊರತುಪಡಿಸಿದಂತೆ ಆಗಸ್ಟ್‌ 2013ರ ಅನಂತರ ಆಗಿರುವ ಯಾವುದೇ ಹೊಸ ಒತ್ತುವರಿ ಗುರುತಿಸಿಲ್ಲ. ಒತ್ತುವರಿ ತೆರವುಗೊಳಿಸಿದ ಬಳಿಕ ಸ್ವಾಧೀನಪಡಿಸಿಕೊಳ್ಳಲಾದ 2,62,293 ಎಕರೆ ಭೂಮಿ ಪೈಕಿ 18,273.74 ಎಕರೆ ಭೂಮಿ ಮಾತ್ರ ಸಂರಕ್ಷಿಸಲಾಗಿದೆ. ಉಳಿದಂತೆ 2.44 ಲಕ್ಷ ಎಕರೆ ಭೂಮಿ ಯನ್ನು ಸಂರಕ್ಷಿಸುವ ಪ್ರಯತ್ನ ಮಾಡಿಲ್ಲ.

ನಾಲ್ಕು ಜಿಲ್ಲೆಗಳಲ್ಲಿ ಒತ್ತುವರಿಯಾಗಿದ್ದ 89.31 ಎಕರೆ ಭೂಮಿ ಒತ್ತುವರಿದಾರರಿಗೇ ಮಂಜೂರು ಮಾಡಲಾಗಿದೆ. ಈ ಬಗ್ಗೆ ಸಿಎಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಒತ್ತುವರಿ ಕುರಿತ ಪ್ರಕರಣಗಳ ತ್ವರಿತ ವಿಲೇವಾರಿಗೆ 2016ರಲ್ಲಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯಕ್ಕೆ ಕೇವಲ 69 ಪ್ರಕರಣ ವರ್ಗಾಯಿಸಲಾಗಿದೆ. 1,131 ಪ್ರಕರಣಗಳನ್ನು ವಿವಿಧ ಸಿವಿಲ್‌ ಹಾಗೂ ಕಂದಾಯ ನ್ಯಾಯಾಲಯಗಳಿಂದ ವರ್ಗಾವಣೆ ಮಾಡುವುದು ಬಾಕಿಯಿದೆ. ಹೀಗಾಗಿ 1,64,874.24 ಎಕರೆಗೆ ಸಂಬಂಧಿಸಿದ 47,348 ಪ್ರಕರಣಗಳ ವಿಲೇವಾರಿ ಬಾಕಿ ಉಳಿದುಕೊಂಡಿದೆ.

Advertisement

ಕಾಂಗ್ರೆಸ್‌ಗೆ 15 ಗುಂಟೆ
ಕಂದಾಯ ನಿಯಮಗಳಲ್ಲಿ ರಾಜಕೀಯ ಪಕ್ಷಗಳಿಗೆ ಭೂಮಿ ಮಂಜೂರು ಮಾಡಲು ಅವಕಾಶವಿಲ್ಲ. ಆದರೂ ಚೆನ್ನ ಪಟ್ಟಣ ತಾಲೂಕು-ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಬೋಳಪ್ಪನ ಹಳ್ಳಿಯಲ್ಲಿ 10 ಗುಂಟೆ, ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಮಂಗಳವಾರ ಪೇಟೆ ಯಲ್ಲಿ 5 ಗುಂಟೆ ಮಂಜೂರು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next