ಕನಕಪುರ: ರೈತ ಸೇವಾ ಸಹಕಾರ ಸಂಘದಲ್ಲಿ ನಡೆದಿದ್ದ ಅವ್ಯವಹಾರದ ತನಿಖೆ ಚುರುಕುಗೊಳಿಸಿರುವ ಪೊಲೀಸರು, 4 ಕೆ.ಜಿ.ಗೂ ಹೆಚ್ಚು ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಸಂಗಮ ರಸ್ತೆಯಲ್ಲಿರುವ ರೈತ ಸೇವಾ ಸಹಕಾರ ಸಂಘದಲ್ಲಿ ಗ್ರಾಹಕರು ಅಡಮಾನವಿಟ್ಟಿದ್ದ ಸುಮಾರು 8 ಕೆ.ಜಿ.ಗೂ ಹೆಚ್ಚು ತೂಕದ ಚಿನ್ನಾಭರಣದ ಮೇಲೆ ಸಾಲ ಪಡೆದು ಅವ್ಯವಹಾರ ನಡೆಸಿದ್ದಾರೆ ಎಂಬ ಶಂಕೆ ಇದೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಅಕ್ರಮವಾಗಿ ಬೇರೆ ಬೇರೆ ಬ್ಯಾಂಕ್ ಮತ್ತು ಫೈನಾನ್ಸ್ ಸಂಸ್ಥೆಗಳಲ್ಲಿ ಅಡಮಾನವಿಟ್ಟು ಅವ್ಯವಹಾರ ನಡೆಸಿರುವ ಪ್ರಕರಣದಲ್ಲಿ ಪೊಲೀಸರು, ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಸಿಬ್ಬಂದಿ ಕೀರ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ರೂವಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಕ ರವಿಕುಮಾರ್ ಮತ್ತು ಸಿಬ್ಬಂದಿ ವೆಂಕಟಪ್ಪ ಶಿವರುದ್ರಯ್ಯ, ಮಂಜುನಾಥ್ ಹಾಗೂ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನ ಸಿಬ್ಬಂದಿ ಕೀರ್ತಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಅಡಮಾನವಿಟ್ಟು ಸಾಲ: ರೈತ ಸೇವಾ ಸಹಕಾರ ಸಂಘದಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣವನ್ನು ಸಂಘದ ಸಿಇಒ ರವಿಕುಮಾರ ಫೈನಾನ್ಸ್ ಸಂಸ್ಥೆಗಳಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದ ಸುಮಾರು ನೂರಕ್ಕೂ ಹೆಚ್ಚು ಚೀಟಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅದರ ಆಧಾರದ ಮೇಲೆ ಚಿನ್ನಾಭರಣ ಅಡಮಾನವಿಟ್ಟು ಕೊಂಡಿದ್ದ ಫೈನಾನ್ಸ್ ಸಂಸ್ಥೆಗಳು ಮತ್ತು ಬ್ಯಾಂಕ್‌ನಿಂದ ನಾಲ್ಕು ಕೆ.ಜಿ.ಗೂ ಹೆಚ್ಚಿನ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರಿಂದ ತನಿಖೆ: ಇನ್ನುಳಿದಂತೆ ಒಂದು ಪೈನಾನ್ಸ್ ಸಂಸ್ಥೆಯಲ್ಲಿ ಅಡಮಾನವಿಟ್ಟಿರುವ ಚಿನ್ನಾಭರಣವನ್ನು ಪೋಲಿಸ್ ಇಲಾಖೆ ವಶಕ್ಕೆ ಪಡೆಯುವುದು ಬಾಕಿ ಇದೆ. ಈ ಸಂಸ್ಥೆಯಲ್ಲೇ ಸುಮಾರು 2ರಿಂದ 3 ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ಅಡಮಾನ ವಿಟ್ಟು ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಒಂದು ಸಂಸ್ಥೆಯಲ್ಲಿ ಬಾಕಿ ಇರುವ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದ ನಂತರವೇ ರೈತ ಸೇವಾ ಸಹಕಾರ ಸಂಘದಲ್ಲಿ ಎಷ್ಟು ತೂಕದ ಎಷ್ಟು ಮೌಲ್ಯದ ಚಿನ್ನಾಭರಣ ಅಡಮಾನವಿಟ್ಟು ಅವ್ಯವಹಾರ ನಡೆಸಿದ್ದಾರೆ ಎಂಬ ಖಚಿತ ಮಾಹಿತಿ ಸಿಗಲಿದೆ.
ರೈತ ಸೇವಾ ಸಹಕಾರ ಸಂಘದಲ್ಲಿ ಸದಸ್ಯರು ಇಟ್ಟಿದ್ದ ಠೇವಣಿ ಹಣವನ್ನು ದುರ್ಬಳಕೆಯಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೀರ್ತಿ ಪೊಲೀಸ್ ಕಸ್ಟಡಿಗೆ : ಬೂದಿಕೇರಿ ರಸ್ತೆಯಲ್ಲಿರುವ ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್‌ನಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಇದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕೀರ್ತಿ, ರೈತ ಸೇವಾ ಸಹಕಾರ ಸಂಘದ ಸಿಇಒ ರವಿಕುಮಾರ್ ಅವರೊಂದಿಗೆ ಶಾಮೀಲಾಗಿ ಹಲವಾರು ಸ್ನೇಹಿತರು ಹೆಸರಿನಲ್ಲಿ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನಲ್ಲಿ ಚಿನ್ನಾಭರಣ ಅಡಮಾನವಿಟ್ಟು ಸಾಲ ಕೊಡಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಸಿಬ್ಬಂದಿ ಕೀರ್ತಿಯನ್ನು ವಶಕ್ಕೆ ಪಡೆದಿದ್ದಾರೆ