ಕಲಬುರಗಿ: 545 ಪಿಎಸ್ಐ ನೇಮಕಾತಿ ಸಂಬಂಧ ನಡೆದ ಸಿಇಟಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಆಗ್ರಹಿಸಿದೆ.
ಅಕ್ರಮ ಪರೀಕ್ಷೆಯಲ್ಲಿ ಪ್ರಭಾವಿ ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಎನಿಸಿಕೊಂಡವರೆಲ್ಲರೂ ಭಾಗಿಯಾಗಿದ್ದರಿಂದ ಪ್ರಕರಣ ಸಿಓಡಿ ಬದಲು ಸಿಬಿಐ ತನಿಖೆಗೆ ವಹಿಸಿದರೆ ಎಲ್ಲವೂ ಬಯಲಿಗೆ ಬರುವುದರಿಂದ ರಾಜ್ಯ ಸರ್ಕಾರ ಈ ಕೂಡಲೇ ಸಿಬಿಐ ತನಿಖೆ ವಹಿಸಲು ಮುಂದಾಗಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರಾಗಿರುವ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದಾಗ ಗೃಹ ಸಚಿವ ಆರಗ ಜ್ಞಾನೇಂದ್ರ ಅಲ್ಲಗಳೆದಿದ್ದರು. ಅಲ್ಲದೇ ತಳಬುಡವಿಲ್ಲದ ಆರೋಪ ಎಂದಿದ್ದರು. ದಾಖಲೆಗಳ ಸಮೇತ ಅಧಿವೇಶನದಲ್ಲಿ ಪಸ್ತಾಪಿಸಿದ್ದರಿಂದ ನಂತರ ಸಿಓಡಿಗೆ ತನಿಖೆ ವಹಿಸಲಾಗಿದೆ. ಆದರೆ ಪರೀಕ್ಷೆಯ ಅಕ್ರಮದಲ್ಲಿ ದೊಡ್ಡ ಕುಳಗಳು ಭಾಗಿಯಾಗಿದ್ದರಿಂದ ಜತೆಗೆ ಆಳ, ಅಗಲ ಬಹಳಷ್ಟು ವಿಸ್ತಾರಗೊಂಡಿದ್ದರಿಂದ ಸಿಬಿಐ ತನಿಖೆ ನಡೆಸಿ ಮುಂದೆ ಇಂತಹ ಘಟನೆ ಆಗದಂತೆ ಅದರಲ್ಲೂ ಭ್ರಷ್ಟಾಚಾರ ತೊಲಗಿಸಲು ಮುಂದಾಗಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ತಮ್ಮ ಹೆಸರು ಬರೆಯಲಿಕ್ಕೆ ಬಾರದವರು ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುವುದು ಇಡೀ ವ್ಯವಸ್ಥೆ ಬುಡಮೇಲು ಮಾಡುವಂತಿದೆ. ಆದ್ದರಿಂದ ರಾಜ್ಯ ಸರ್ಕಾರ ಹಿಂದೆ ಮುಂದೆ ನೋಡದೆ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಖಂಡ್ರೆ ಆಗ್ರಹಿಸಿದರು.
ಶೇ. 40 ಪರ್ಸೆಂಟೆಜ್ ಬಿಜೆಪಿ ಬೃಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಾನು ತಿನ್ನೋದಿಲ್ಲ. ತಿನ್ನಲು ಸಹ ಬಿಡುವುದಿಲ್ಲ ಎಂದಿದ್ದರು. ಆದರೆ ರಾಜ್ಯ ಸರ್ಕಾರ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಈ ಹಿಂದೆ ರಾಜ್ಯ ಐಟಿಬಿಟಿ, ಕಲೆ ಸಾಂಸ್ಕೃತಿಕತೆಗೆ ರಾಜಧಾನಿ ಎಂಬುದಾಗಿ ಹೆಸರು ಪಡೆದಿರುವುದು 56 ಇಂಚಿನ ಎದೆಯಳತೆಯ ಮೋದಿಗೆ ಕಾಣುತ್ತಿಲ್ಲವೇ ಎಂದು ಖಂಡ್ರೆ ವ್ಯಂಗ್ಯವಾಡಿದರು.
ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ತಮ್ಮ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅವರದ್ದೇ ಸರ್ಕಾರ ಇರುವುದರಿಂದ ಯಾವುದೇ ಸಂಸ್ಥೆಯಿಂದ ತನಿಖೆ ಮಾಡಲಿ ಎಂದರು.
ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್ ನೆಲೋಗಿ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಮೇಯರ್ ಶರಣು ಮೋದಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಮುಂತಾದವರಿದ್ದರು.