Advertisement

ಕಂದಾವರ ಗ್ರಾ.ಪಂ.ನಲ್ಲಿಅಕ್ರಮ: ತನಿಖೆಗೆ ಆಗ್ರಹ

12:59 PM Oct 01, 2018 | |

ಮಹಾನಗರ: ಕಂದಾವರ ಗ್ರಾಮ ಪಂಚಾಯತ್‌ನಲ್ಲಿ ಕೆಲವು ಯೋಜನೆಗಳಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ದಲಿತ ಮುಖಂಡ ಎಸ್‌.ಪಿ. ಆನಂದ್‌ ಆಗ್ರಹಿಸಿದರು.

Advertisement

ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಜರಗಿದ ದಲಿತ ಕುಂದು- ಕೊರತೆ ಸಭೆಯಲ್ಲಿ ಅವರು ಮಾತನಾಡಿ, ದಲಿತರ ಮೀಸಲಾತಿ, ಅಡುಗೆ ಅನಿಲ ಪಟ್ಟಿ, ಹೊಲಿಗೆ ಯಂತ್ರ ನೀಡುವಲ್ಲಿ ಅಕ್ರಮವಾಗಿದೆ. ಈ ಬಗ್ಗೆ ಗ್ರಾ.ಪಂ. ಮುಖ್ಯಸ್ಥರು ಸ್ಪಂದಿಸುತ್ತಿಲ್ಲ. ಕೂಡಲೇ ಪೊಲೀಸ್‌ ಅಧಿಕಾರಿಗಳು ಕ್ರಮ ಜರಗಿಸುವಂತೆ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ನಾಗರಿಕ ಹಕ್ಕು ಹಾಗೂ ಜಾರಿ ನಿರ್ದೇಶನಾಲಯದ ದ.ಕ. ಜಿಲ್ಲಾ ಎಸ್ಪಿ ಡಾ| ಸಿ.ಬಿ. ವೇದಮೂರ್ತಿ, ಈ ಬಗ್ಗೆ ಸಂಬಂಧಪಟ್ಟ ಪಿಡಿಒ ಮುಖೇನ ಮಾಹಿತಿ ತರಿಸಿ, ತನಿಖೆ ನಡೆಸಲಾಗುವುದು ಎಂದರು. 

ಮೂಲಸೌಕರ್ಯ ಇಲ್ಲ
ಗಂಜಿಮಠದ ಗಣೇಶ್‌ ನಗರ ವ್ಯಾಪ್ತಿಯ ದಲಿತ ಕಾಲನಿಯ 35 ಸೆಂಟ್ಸ್‌ ಜಾಗದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಬಿಡುಗಡೆಯಾಗಿದ್ದು, ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಆದರೆ ಇಲ್ಲಿ ಮೂಲಸೌಕರ್ಯಕ್ಕೆ ಗಮನ ನೀಡಲಾಗಿಲ್ಲ ಎಂದು ಎಸ್‌.ಪಿ. ಆನಂದ್‌ ದೂರಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಡಾ| ವೇದಮೂರ್ತಿ, ಖುದ್ದಾಗಿ ಭೇಟಿ ಮಾಡಿ ಪರಿಶೀಲಿಸುವುದಾಗಿ ಹೇಳಿದರು.

ಮೂಲ ದಾಖಲೆ ನೀಡುತ್ತಿಲ್ಲ
ಬೆಳ್ತಂಗಡಿ ಧರ್ಮಸ್ಥಳ ಮೂಲದ ಮೂವರು ವಿದ್ಯಾರ್ಥಿಗಳಿಗೆ ನರ್ಸಿಂಗ್‌ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮೂರು ತಿಂಗಳು ತರಬೇತಿ ನೀಡಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 1.35 ಲಕ್ಷ ರೂ. ಕಟ್ಟಲು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಹಣ ಕಟ್ಟಲು ಸಾಧ್ಯವಿಲ್ಲ, ಎಂದು ಹೇಳಿದ್ದಕ್ಕೆ ಎಸೆಸೆಲ್ಸಿ, ಪಿಯುಸಿಯ ಮೂಲ ದಾಖಲೆಗಳನ್ನು ನೀಡುವುದಿಲ್ಲ ಎಂದು ಬೆದರಿಸಿದ್ದಾರೆ ಎಂದು ಆನಂದ್‌ ತಿಳಿಸಿದರು.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೂ ಮನವಿ ಮಾಡಲಾಗಿದ್ದು, ಇಲಾಖೆಯಿಂದ ನೋಟಿಸ್‌ ನೀಡಲಾಗಿದೆ. ಕೂಡಲೇ ಪೊಲೀಸ್‌ ಇಲಾಖೆ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಮೂಲ ದಾಖಲೆ ಸಿಗುವಂತಾಗಬೇಕು ಎಂದು ಆಗ್ರಹಿಸಿದರು. ಡಾ| ವೇದಮೂರ್ತಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

Advertisement

ದಲಿತ ಮುಖಂಡ ಅಶೋಕ್‌ ಕೊಂಚಾಡಿ ಮಾತನಾಡಿ, ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಕೋರ್ಸ್‌ಗೆ ಸೇರಿಸಿಕೊಳ್ಳುತ್ತಿರುವ ಆಡಳಿತ ಮಂಡಳಿ ವಿದ್ಯಾರ್ಥಿಗಳ ಅಂಕಪಟ್ಟಿ ಸಹಿತ ನಾನಾ ದಾಖಲೆ ಹಿಡಿದಿಟ್ಟುಕೊಳ್ಳುತ್ತದೆ. ಆರ್ಥಿಕ ಸಮಸ್ಯೆ ಸೇರಿದಂತೆ ಯಾವುದೇ ಕಾರಣದಿಂದ ಕಾಲೇಜು ಮುಂದುವರಿಸಲು ಅಸಾಧ್ಯವಾದಾಗ ಆ ಮೂಲ ದಾಖಲೆ ನೀಡಲು ಹಿಂದೇಟು ಹಾಕುತ್ತಿದೆ, ಮಾತ್ರವಲ್ಲದೆ ಹಣ ಕಟ್ಟಬೇಕೆಂದು ಒತ್ತಾಯಿಸುತ್ತಿದೆ. ಈ ಬಗ್ಗೆ ಕಾಲೇಜುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಇದಕ್ಕೆ ಸಂಬಂಧಿಸಿದಂತೆ ಡಿಸಿಪಿ ಉಮಾಪ್ರಶಾಂತ್‌ ಅವರು ಸಭೆಯಲ್ಲಿ ಹಾಜರಿದ್ದ ನಾರ್ಕೊಟಿಕ್‌ ಮತ್ತು ಆರ್ಥಿಕ ಠಾಣಾ ಇನ್‌ಸ್ಪೆಕ್ಟರ್‌ ಮಹಮ್ಮದ್‌ ಶರೀಫ್‌ ಅವರಿಗೆ ಸ್ಥಳ ಪರಿಶೀಲನೆ ನಡೆಸಿ, ನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುವವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು.

ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್‌ ಭಜಂತ್ರಿ ಹಿಂದಿನ ಸಭಾ ವರದಿ ಓದಿದರು. ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ರಾಮರಾವ್‌, ಉತ್ತರ ವಿಭಾಗದ ಎಸಿಪಿ ರಾಜೇಂದ್ರ, ಇನ್‌ಸ್ಪೆಕ್ಟರ್‌ಗಳಾದ ರಫೀಕ್‌, ರವಿ ನಾಯ್ಕ, ಶಿವಪ್ರಸಾದ್‌, ಕಂಕನಾಡಿನ ನಗರ ಠಾಣಾ ಎಸ್‌ಐ ಪ್ರದೀಪ್‌ ಟಿ.ಆರ್‌.ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಕಾನೂನು ಉಲ್ಲಂಘನೆ 
ಹಳೆ ಬಂದರು, ಧಕ್ಕೆ ವ್ಯಾಪ್ತಿಯಲ್ಲಿ ಬೆಳಗ್ಗೆ 4ರಿಂದ 5ಗಂಟೆಗೆ ಬಾರ್‌, ವೈನ್‌ ಶಾಪ್‌ ಓಪನ್‌ ಆಗುತ್ತಿದೆ. ಇದರಿಂದ ಆ ಭಾಗದಲ್ಲಿ ಸಂಚರಿಸುವ ಮಹಿಳೆಯರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ರೀತಿ ಕಾನೂನು ಮೀರಿ ಕಾರ್ಯಾಚರಿಸುತ್ತಿರುವ ಮದ್ಯದಂಗಡಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ವ್ಯಕ್ತಿಯೊಬ್ಬರು ಆಗ್ರಹಿಸಿದರು.

ನಾಪತ್ತೆ ಪ್ರಕರಣ ಯಾವ ಹಂತದಲ್ಲಿದೆ?
ದಲಿತ ಮುಖಂಡ ಶೇಖರ್‌ ಬೆಳ್ತಂಗಡಿ ಮಾತನಾಡಿ, ಹಲವು ಸಮಯದ ಹಿಂದೆ ಜಪ್ಪಿನಮೊಗರು ಬೇಕರಿಯೊಂದರಿಂದ ನಂದಕುಮಾರ್‌ ನಾಪತ್ತೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಬೇಕರಿ ಮಾಲಕರ ವಿರುದ್ಧವೂ ದೂರು ನೀಡಲಾಗಿತ್ತು. ಆದರೆ ನಂದಕುಮಾರ್‌ ಪತ್ತೆಯಾಗಿಲ್ಲ ಮತ್ತು ಪ್ರಕರಣ ಯಾವ ಹಂತದಲ್ಲಿದೆ ಎಂಬ ಮಾಹಿತಿಯೂ ಇಲ್ಲ. ಈ ಹಿಂದಿನ ಸಭೆಯಲ್ಲೂ ದೂರು ನೀಡಲಾಗಿತ್ತು. ನಮಗೆ ಸ್ಪಷ್ಟ ಮಾಹಿತಿ ಬೇಕಿದೆ ಎಂದರು. ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪ ಪೊಲೀಸ್‌ ಆಯುಕ್ತೆ ಉಮಾಪ್ರಶಾಂತ್‌ ಇದಕ್ಕೆ ಉತ್ತರಿಸಿ, ಈ ಬಗ್ಗೆ ಸಂಬಂಧಪಟ್ಟ ಠಾಣೆಯ ಅಧಿಕಾರಿಗಳ ಮುಖೇನ ಮಾಹಿತಿ ಸಂಗ್ರಹಿಸಿ, ತನಿಖೆಗೆ ಸೂಚನೆ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next