ಶಿವಮೊಗ್ಗ: ಆಧಾರ್ ಕಾರ್ಡ್ ನೋಂದಣಿಯಲ್ಲಿ ಅಕ್ರಮ ಮತ್ತು ನಿಯಮಗಳ ಉಲ್ಲಂಘನೆ ನಡೆಯುತ್ತಿದ್ದು, ಇದನ್ನು ಸರಿಪಡಿಸುವಂತೆ ಅಗ್ರಹಿಸಿ ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಆಧಾರ್ ಕಾರ್ಡ್ ನೋಂದಣಿಗೆ ಹೊರಗುತ್ತಿಗೆ ಪಡೆದಿರುವ ಏಜೆನ್ಸಿಗಳು ನೋಂದಣಿಗೆ ಬರುವ ಸಾರ್ವಜನಿಕರಿಂದ ಎಲ್ಲಾ ದಾಖಲೆಗಳನ್ನು ಮತ್ತು ಶುಲ್ಕಗಳನ್ನು ಪಡೆದಿದ್ದರೂ ಕಾರ್ಡ್‌ನ್ನು ಪಡೆಯುವ ವೇಳೆಯಲ್ಲೂ ಶುಲ್ಕ ಪಡೆಯುತ್ತಿವೆ. ಅಲ್ಲದೆ ಅರ್ಜಿ ತಿರಸ್ಕೃತಗೊಂಡಿದೆ ಎಂಬ ಮೌಖೀಕವಾಗಿ ಹೇಳಿ ಮತ್ತೂಮ್ಮೆ ನೋಂದಾಯಿಸಲು ಸೂಚಿಸುತ್ತಾರೆ. ಒಮ್ಮೆ ದಾಖಲಾತಿಗಳನ್ನೂ ನೀಡಿದ್ದರೂ ಮತ್ತೂಮ್ಮೆ ದಾಖಲಾತಿಗಳನ್ನು ಕೇಳುವುದು ನಿಯಮಬಾಹಿರವಾಗಿದೆ ಎಂದು ಆರೋಪಿಸಿದರು.
ಪ್ರತಿ ಬಾರಿಯೂ ನೋಂದಣಿಗೆ ಶುಲ್ಕ ವಸೂಲಿ ಮಾಡುತ್ತಿರುವುದು ಅಕ್ರಮವಾಗಿದೆ. ಅಲ್ಲದೆ ಆಧಾರ್ ನೋಂದಣಿಗೆ ಕೇಂದ್ರ ಸರ್ಕಾರ ರೂಪಿಸಿರುವ ನಿಯಮ-ನಿಬಂಧನೆಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಫಲಕದಲ್ಲಿ ಪ್ರಕಟಿಸಿಲ್ಲ. ಇದು ಅಕ್ರಮ ಮತ್ತು ಅಪ್ರಾಮಾಣಿಕತೆಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳು ಈ ಲೋಪವನ್ನು ಸರಿಪಡಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಹೋರಾಟ ಸಮಿತಿಯು ಮನವಿಯಲ್ಲಿ ಆಗ್ರಹಿಸಿದೆ.
ಅಲ್ಲದೆ ಗೋಪಿಶೆಟ್ಟಿ ಗ್ರಾಮದ ಸ.ನಂ.95ರ ಕೆರೆಯನ್ನು ಅವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದನ್ನು ಇದೇ ಸಂದರ್ಭದಲ್ಲಿ ಸಮಿತಿ ವಿರೋಧಿಸಿತು. ಪ್ರಕೃತಿಗೆ ಪೂರಕವಾಗಿ ಕೆರೆ ಅಭಿವೃದ್ಧಿಪಡಿಸಿದೆ. ದುಂದುವೆಚ್ಚ ಮಾಡಲಾಗುತ್ತಿದೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಬೇಲಿ ಹಾಕಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಸಮಿತಿ ಗೌರವಾಧ್ಯಕ್ಷರಾದ ಡಾ| ಎನ್.ಎಲ್. ನಾಯಕ್, ಅಧ್ಯಕ್ಷರಾದ ಡಾ| ಚಿಕ್ಕಸ್ವಾಮಿ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಶೋಕ್ ಯಾದವ್, ಡಾ| ಶೇಖರ್ ಗೌಳೇರ್, ಎಸ್.ವಿ. ವೆಂಕಟನಾರಾಯಣ, ಬಾಬುರಾವ್, ತಿಮ್ಮಣ್ಣ, ಪ್ರೊ| ಚಂದ್ರಶೇಖರ್, ಸಹನಾ ರಾವ್, ಸುಬ್ರಮಣ್ಯ, ಶಿವಕುಮಾರ್ ಕಸೆಟ್ಟಿ, ಟಿ. ದೇವೇಂದ್ರ ಇನ್ನಿತರರು ಇದ್ದರು.