Advertisement
ಇತ್ತೀಚೆಗೆ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಮಾದಕ ವಸ್ತು ಮಾರಾಟ, ಆನ್‌ಲೈನ್ ವಂಚನೆ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡುಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸಿಸಿಬಿ ಪೊಲೀಸರು, ಅಕ್ರಮವಾಗಿ ವಾಸವಾಗಿರುವ ವಿದೇಶಿ ಪ್ರಜೆಗಳ ಪತ್ತೆಗೆ ಸಿದ್ಧತೆ ನಡೆಸಿದ್ದಾರೆ.
Related Articles
Advertisement
ವಿಳಾಸ ಬದಲು: ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳ ಮಾಹಿತಿ ಆಧರಿಸಿ ಈ ಹಿಂದೆ 200ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಲಾಗಿತ್ತು. ಆದರೆ, ಕೆಲ ವಿದೇಶಿಯರು ನಕಲಿ ಪಾಸ್‌ಪೋರ್ಟ್ ಮೂಲಕ ಮತ್ತೆ ನಗರಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿಯಿದೆ. ಇಂತಹವರ ಪತ್ತೆ ಕಷ್ಟ. ಕೆಲವೊಮ್ಮೆ ವಿದ್ಯಾರ್ಥಿ, ವ್ಯವಹಾರ ವೀಸಾದಡಿ ನಗರಕ್ಕೆ ಆಗಮಿಸುವ ವಿದೇಶಿಯರು ಪ್ರಾದೇಶಿಕ ಕಚೇರಿಯಲ್ಲಿ ನೊಂದಾಯಿಸುವ ವಿಳಾಸ ಹಾಗೂ ಹಾಲಿ ವಾಸಿಸುವ ವಿಳಾಸ ಬೇರೆ ಇರುತ್ತದೆ.
ಈ ನಡುವೆ ವಿದೇಶಿಗರ ವಿರುದ್ಧ ದಾಖಲಾಗುವ ಕಾನೂನು ಬಾಹಿರ ಚಟುವಟಿಕೆಗಳಿಂದ ಕೆಲ ವಿದೇಶಿಯರು ಇಲ್ಲಿಯೇ ವಾಸವಾಗಿದ್ದಾರೆ. ಒಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾದರೆ, ಅದು ಇತ್ಯರ್ಥವಾಗುವವರೆಗೂ ಆತ ತನ್ನ ದೇಶಕ್ಕೆ ತೆರಳುವಂತಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ಕೆಲವರು ಅಕ್ರಮವಾಗಿ ವಾಸ್ತವ್ಯ ಮುಂದುವರಿಸುವುದಲ್ಲದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.
ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ: ಮೂರು ವರ್ಷಗಳ ಹಿಂದೆ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಹೊರಗಟ್ಟುವ ಕುರಿತು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿತ್ತು. ಇದರೊಂದಿಗೆ ಆಗಾಗ್ಗೆ ಪತ್ತೆಯಾಗುವ ಮಾದಕ ವಸ್ತು ಸಾಗಣೆ, ಸ್ಥಳೀಯರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಸಿಕ್ಕಿ ಬೀಳುವ ವಿದೇಶಿಗರ ವೀಸಾ ಪರಿಶೀಲಿಸಿದಾಗ ಬಹುತೇಕ ಮಂದಿಯ ವೀಸಾ ಅವಧಿ ಮೀರಿರುತ್ತಿತ್ತು.
ಆ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ನಗರದಲ್ಲಿ ಅಕ್ರಮವಾಗಿ ವಾಸವಾಗಿರುವ ವಿದೇಶಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, 600ಕ್ಕೂ ಹೆಚ್ಚು ಮಂದಿ ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚಿದ್ದು, ಗಡಿಪಾರಿಗೂ ಚಿಂತನೆ ನಡೆಸಿದ್ದರು. ಆದರೆ, ನಂತರ ಸಿಸಿಬಿಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪತ್ತೆ ಕಾರ್ಯ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು.
ಇದಕ್ಕೆ ಸಿಬ್ಬಂದಿ ಕೊರತೆ, ಕಾರ್ಯದೊತ್ತಡ ಎಂಬೆಲ್ಲ ಕಾರಣಗಳನ್ನು ನೀಡಿ ಅಕ್ರಮ ವಿದೇಶಿಗರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ ಕಳೆದ ವರ್ಷ ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ (ಎಫ್ಆರ್‌ಆರ್‌ಓ) ಮಾಹಿತಿ ಮೇರೆಗೆ 107 ಮಂದಿಯನ್ನು ವೈಟ್‌ಫೀಲ್ಡ್, ಈಶಾನ್ಯ ಮತ್ತು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದು ಹೊರತುಪಡಿಸಿದರೆ, ಇತರೆ ಯಾವುದೇ ಪ್ರಗತಿ ಕಂಡಿಲ್ಲ.
ಸಿಬ್ಬಂದಿ ಕೊರತೆ: ಮೂಲಗಳ ಪ್ರಕಾರ ಸಿಸಿಬಿಯಲ್ಲಿ ರೌಡಿ ನಿಗ್ರಹ ಪಡೆ, ಮಹಿಳೆ ಮತ್ತು ಮಾದಕ ದ್ರವ್ಯ ದಳ, ವಿಶೇಷ ತನಿಖಾ ದಳ ಸೇರಿ ಐದು ವಿಭಾಗಗಳಿವೆ. ಆದರೆ, ಇವುಗಳಲ್ಲಿ ಕೇವಲ 50-60 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆಯೂ ಹೆಚ್ಚಿನ ಒತ್ತಡದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಬಾಂಗ್ಲಾ ಪ್ರಜೆಗಳ ಪತ್ತೆ ಕಷ್ಟ: ವಿದೇಶಿಗರು ಮಾತ್ರವಲ್ಲದೆ, ಬಾಂಗ್ಲಾದೇಶದಿಂದ ವಲಸೆ ಬಂದಿರುವ ನೂರಾರು ಮಂದಿ ಕೂಡ ನಗರದಲ್ಲಿ ವಾಸವಾಗಿದ್ದಾರೆ. ಆದರೆ, ಇವರ ಪತ್ತೆ ಕಾರ್ಯ ಕಷ್ಟದಾಯಕ. ಕೆಲ ವಲಸಿಗರು, ಸುಳ್ಳು ಮಾಹಿತಿ ನೀಡಿ ಜೀವನ ನಿರ್ವಹಣೆಗಾಗಿ ಕಟ್ಟಡಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದಾರೆ.
ಕೆಲವೊಮ್ಮೆ ಮಾಹಿತಿ ಆಧರಿಸಿ ದಾಳಿ ನಡೆಸಿದರೆ, ಪಶ್ಚಿಮ ಬಂಗಾಳ ಮೂಲದವರು ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಬಾಂಗ್ಲಾದೇಶದಿಂದ ಬರುವ ವಲಸಿಗರು, ರಸ್ತೆ ಮಾರ್ಗದಿಂದ ಗಡಿಪ್ರದೇಶಗಳನ್ನು ದಾಟುವುದರಿಂದ ಸೂಕ್ತ ದಾಖಲೆಗಳು ಸಿಗುವುದಿಲ್ಲ ಎಂದು ಪೊಲೀಸರು ಹೇಳಿದರು.
ಅಕ್ರಮ ವಿದೇಶಿಗರ ಪತ್ತೆ ಕಾರ್ಯಕ್ಕೆ ಸಿಸಿಬಿ ಮುಂದಾಗಿದ್ದು, ಸ್ಥಳೀಯ ಪೊಲೀಸರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳಲಿದ್ದೇವೆ. ಇದಕ್ಕೆ ಕಾಲಾವಕಾಶ ಬೇಕಿದೆ.-ಎಸ್.ಗಿರೀಶ್, ಕೇಂದ್ರ ಅಪರಾಧ ವಿಭಾಗದ ಡಿಸಿಪಿ * ಮೋಹನ್ ಭದ್ರಾವತಿ