Advertisement

ನೇಮಕಾತಿಗಳ ಅಕ್ರಮ ಪರೀಕ್ಷೆ: ತ್ವರಿತ ನ್ಯಾಯಾಲಯ ಸ್ಥಾಪನೆಗೆ ಕಾಂಗ್ರೆಸ್ ಆಗ್ರಹ

03:50 PM Aug 12, 2022 | Team Udayavani |

ಕಲಬುರಗಿ: ಪಿಎಸ್ಐ, ಎಫ್‌ಡಿಎ, ಇಂಜನಿಯರ್ ಸೇರಿದಂತೆ ಇತರ ಇಲಾಖೆಗಳ ಹುದ್ದೆಗಳ ನೇಮಕಾತಿಗಳ ಸಂಬಂಧ ನಡೆದ ಪರೀಕ್ಷೆ ಗಳಲ್ಲಿ ವ್ಯಾಪಕ ಅಕ್ರಮ ನಡೆದಿರುವ ಕುರಿತು ಎಲ್ಲ ಆಯಾಮಗಳುಂದ ತನಿಖೆ ನಡೆಸಲು ತ್ವರಿತ ನ್ಯಾಯಾಲಯ ಸ್ಥಾಪಿಸುವಂತೆ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

Advertisement

ಪಿಎಸ್ಐ ನೇಮಕಾತಿ ಹಗರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ( ರುದ್ರಗೌಡ ಪಾಟೀಲ್) ಸ್ವತಃ ಸಿಐಡಿ ತನಿಖಾ ತಂಡದ ಎದುರು ಹಲವು ಹುದ್ದೆಗಳ ನೇಮಕಾತಿಯ ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಅಕ್ರಮ ಎಸಗಿರುವುದಾಗಿ ಹೇಳಿದ್ದರಿಂದ ಸರ್ಕಾರಿ ರಾಜ್ಯದ ಕೋಟ್ಯಂತರ ಯುವಕರಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲು ತ್ವರಿಯ ನ್ಯಾಯಾಲಯ ಸ್ಥಾಪಿಸುವಂತೆ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರು, ಪಿಎಸ್ ಐ ನೇಮಕಾತಿ ಅಕ್ರಮ ಸೇರಿದಂತೆ ಇತ್ತೀಚಿಗೆ ನಡೆದ ಕೆಪಿಟಿಸಿಎಲ್ ಹಾಗೂ ಪಿಡಬ್ಲ್ಯೂಡಿ ಇಲಾಖೆಯಡಿಯಲ್ಲಿನ ಎಇ ಹಾಗೂ ಜೆಇ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಮಾಹಿತಿ ಇದ್ದು ಎಲ್ಲ ಪರೀಕ್ಷೆಗಳ ಅಕ್ರಮ ಕುರಿತಂತೆ ಸಮಗ್ರ ವಿಚಾರಣೆ ನಡೆಸಲು ಸರ್ಕಾರ ತ್ವರಿತಗತಿ ನ್ಯಾಯಾಲಯ ಸ್ಥಾಪನೆ ಮಾಡುವ ಮೂಲಕ ನ್ಯಾಯ ಕಲ್ಪಿಸಬೇಕೆಂದರು.

ಮೊನ್ನೆ ನಡೆದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಜೆಇ ಗೆ ರೂ 30 ಲಕ್ಷ ಹಾಗೂ ಎಇಗೆ ರೂ 50 ಲಕ್ಷ ಲಂಚದ ಬೇಡಿಕೆ ಇಡಲಾಗಿದೆ ಎನ್ನಲಾಗುತ್ತಿದೆ. ಪಿಎಸ್ಐ ಅಕ್ರಮದ ರೀತಿಯಲ್ಲಿಯೇ ಕೆಪಿಟಿಸಿಎಲ್ ನೇಮಕಾತಿಯಲ್ಲಿಯೂ ಬ್ಲ್ಯೂಟೂತ್ ಮೂಲಕ ಅಕ್ರಮ ನಡೆದಿದೆ. ಸ್ಮಾರ್ಟ್ ವಾಚ್ ಮೂಲಕ ಅಕ್ರಮ ನಡೆಸಿದ ಆರೋಪದ ಮೇಲೆ ಗೋಕಾಕ್ ಒಬ್ಬ ಯುವಕನನ್ನು ಬಂಧಿಸಲಾಗಿದೆ. ಇಡೀ ಕೆಪಿಟಿಸಿಎಲ್ ನಲ್ಲಿ ಕನಿಷ್ಢ ರೂ 300 ಕೋಟಿಗೂ ಹೆಚ್ಚು ಭ್ರಷ್ಟಚಾರ ನಡೆದಿದೆ. ಹಾಗಾಗಿ ಎಲ್ಲ ಪರೀಕ್ಷೆಗಳ ಅಕ್ರಮದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯದ ಅವಶ್ಯ ಕತೆ ಇದೆ ಎಂದು ಪ್ರತಿಪಾದಿಸಿದರು.

ಎಸ್ ಡಿ ಎ ನೇಮಕಾತಿಗೆ ಸಂಬಂಧಿಸಿದಂತೆ 1323 ಹುದ್ದೆ ತುಂಬಲು ಸೆಪ್ಟೆಂಬರ್ 2021 ರಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯಲ್ಲಿ ಕೂಡಾ ಅಭ್ಯರ್ಥಿಗಳು ಬ್ಲೂಟೂಥ್ ಹಾಗೂ ಮೈಕ್ರೋಫೋನ್ ಬಳಸಿ ಅಕ್ರಮ ನಡೆಸಿದ್ದಾರೆ. ಕೇವಲ ಮೂವರು ಮಾತ್ರ ಡಿಬಾರ್ ಆಗಿದ್ದಾರೆ. ತನಿಖೆ ನಡೆದರೆ ಮತ್ತೆಷ್ಟು ಅಭ್ಯರ್ಥಿಗಳು ಈ ರೀತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಲಿದೆ ಎಂದು ಸರ್ಕಾರದ ಅಧಿಕಾರಿಗಳ ಮಾಹಿತಿ ಇದೆ ಎಂದು ಹೇಳಿದರು.

Advertisement

ಪ್ರತಿಯೊಂದು ಪರೀಕ್ಷೆಗಳಲ್ಲಿ ಹೀಗೆ ಅಕ್ರಮ ನಡೆದರೆ ಬಡವರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು.? ಇದೊಂದು ಅಸಮರ್ಥ ಸರ್ಕಾರವಿದ್ದು ಏನೇ ಅಕ್ರಮ ಮಾಡಿದರೂ ನಡೆಯುತ್ತಿದೆ ಎನ್ನುವುದು ಅಕ್ರಮ ಮಾಡುವವರಿಗೆ ಹಾಗೂ ಮಧ್ಯವರ್ತಿಗಳಿಗೆ ಗೊತ್ತಾಗಿದೆ. ಆದರೆ ಸುಮಾರು 3 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎನ್ನುವುದು ಗಮನಾರ್ಹ ಸಂಗತಿ. 40 % ವ್ಯವಹಾರದಲ್ಲಿ ವಿಧಾನಸೌಧವನ್ನೇ ವ್ಯಾಪಾರ ಸೌಧ ಮಾಡಿಕೊಂಡವರ ಬಗ್ಗೆ ಅಭ್ಯರ್ಥಿಗಳಿಗೆ ತೀವ್ರ ಅಸಮಧಾನವಿದೆ. ಸಿಎಂ ತಾವೊಬ್ಬ ಕಾಮನ್ ಮ್ಯಾನ್ ಎಂದು ಹೇಳುತ್ತಾರೆ ಇವರ ಅಸಮರ್ಥ ಆಡಳಿತದಿಂದಾಗಿ ಕಾಮನ್ ಮ್ಯಾನ್ ಸಂಕಟಪಡುತ್ತಿದ್ದಾರೆ. ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದ್ದು ಇದೊಂದು‌ ಲಂಚದ ಮಂಚದ ಸರ್ಕಾರವಾಗಿದೆ ಎಂದು ಟೀಕಿಸಿದರು.

ದೇಶದಲ್ಲಿ ಹಾಗೂ ರಾಜ್ಯದಲ್ಲಿ ನಿರುದ್ಯೋಗ ಏರಿಕೆಯಾಗುತ್ತಿದೆ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಣೆ ಎಂದು ಆರೋಪಿಸಿದ ಖರ್ಗೆ, ಪ್ರಧಾನಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ರಾಜ್ಯದ 40% ಸರ್ಕಾರವೂ ಕೂಡಾ ರಾಜ್ಯದಲ್ಲಿ ಹುದ್ದೆ ಸೃಷ್ಠಿಸಿ ನಿರುದ್ಯೋಗಿ ವಿದ್ಯಾವಂತರ ಬಾಳಿಗೆ ಬೆಳಕಾಗಬೇಕಾಗಿತ್ತು. ಆದರೆ ದುರಂತ ಎಂದರೆ ಕಳೆದ 50 ವರ್ಷದಲ್ಲೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕೃತಿ ಮಾಹಿತಿಯಾಗಿದೆ ಎಂದರು.

ಅಕ್ರಮ ಗಳಿಗೆ ಸಂಬಂಧಿಸಿದಂತೆ ನ್ಯಾಯ ಕಲ್ಪಿಸದಿದ್ದರೆ ಇತ್ತೀಚಿಗೆ ವಿದ್ಯಾರ್ಥಿ ಸಂಘಟನೆಯವರು ಎನ್ನಲಾದ ಯುವಕರು ಗೃಹ ಸಚಿವರ ಮನೆಯ ಮೇಲೆ ದಾಳಿ ನಡೆಸಿದಂತೆ ನಿರುದ್ಯೋಗಿ ಯುವಕರು ಸಿಎಂ ಕಚೇರಿಯ ಮೇಲೆ ದಾಳಿ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ
ರಾಜ್ಯ ಸರ್ಕಾರದ ಭ್ರಷ್ಟಾಚಾರ, ವರ್ಗಾವಣೆ ದಂದೆ, ಹಾಗೂ ಅಕ್ರಮ ಪರೀಕ್ಷೆಗಳ ಮೂಲಕ ಯುವಕ ಬಾಳಿಗೆ ಮುಳ್ಳಾಗಿರುವ ಸರ್ಕಾರದ ವಿರದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ಖರ್ಗೆ ಇದೇ ಸಂದರ್ಭದಲ್ಲಿ ಹೇಳಿದರು.

ಬಿಜೆಪಿ ಸರಕಾರದಲ್ಲಿ ರಾಷ್ಟ್ರ ಧ್ವಜ ಮತ್ತು ದೇಶ ಭಕ್ತಿಯನ್ನೂ ಮಾರಾಟಕ್ಕಿಟ್ಟಿದ್ದಾರೆ ಇವರಿಗೆ ದೇಶ ಭಕ್ತಿ ಮುಖ್ಯವಲ್ಲ. ಧ್ವಜ ಕೋಡ್ ನಿಯಮದಲ್ಲಿ ಬದಲಾವಣೆ ತಂದು ಪಾಲಿಯಸ್ಟರ್ ಧ್ವಜ ತಯಾರಿಕೆಗೆ ಅನುಮತಿ ನೀಡಿ ರಿಲಾಯನ್ಸ ಕಂಪೆನಿಗೆ ನೂರಾರು ಕೋಟಿ ಲಾಭ ಮಾಡಿ ಕೊಡುವ ಹುನ್ನಾರ ಹೊಂದಿದೆ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ ಖಾದಿ ಬಗ್ಗೆ ಮನ್ ಕಿ ಬಾತ್ ನಲ್ಲಿ ಮಾತಾಡುವ ಮೋದಿಗೆ ಖಾದಿ ಕಂಡರೆ ಅಲರ್ಜಿಯಾಗಿದೆ ಎಂದು ಕುಟುಕಿದರು.

ರಾಷ್ಟ್ರಧ್ವಜ ಮಾರಲು ಅಧಿಕಾರಿಗಳನ್ನು ಸೇಲ್ಸ್ ಎಜೆಂಟರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಒಂದು ವಾರ್ಡಗೆ 15 ಸಾವಿರ ಧ್ವಜ ಮಾರಾಟಕ್ಕೆ ಟಾರ್ಗೆಟ್ ನೀಡಿದ್ದಾರೆ. ಅದೇ ರೀತಿ ಗ್ರಾಮ ಪಂಚಾಯತನಿಂದ ಹಿಡಿದು ಎಲ್ಲಾ ಕಡೆ ಟಾರ್ಗೆಟ್ ನೀಡಲಾಗಿದೆ. ರೇಷನ್ ಬೇಕು ಅಂದ್ರೆ, ಸರಕಾರಿ ಸೌಲಭ್ಯ ಬೇಕು ಅಂದರೆ ಧ್ವಜ ಖರೀದಿ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಆರೋಪಿಸಿದ ಖರ್ಗೆ, ಬಿಜೆಪಿಯವರು ನಕಲಿ ದೇಶ ಭಕ್ತರು , ಇವರಿಗೆ ಉಚಿತ ಧ್ವಜ ಕೊಡಲು ಆಗುವುದಿಲ್ಲವೇ ? ಸ್ವಾತಂತ್ರ್ಯ ದಿನಾಚರಣೆ ಮುಗಿಯುವುದರೊಳಗೆ 3 ಸಾವಿರ ಕೋಟಿ ರೂಪಾಯಿ ಜನರ ದುಡ್ಡು ಒಬ್ಬ ಉದ್ಯಮಿಗೆ ಸಂಗ್ರಹಿಸಿ ಕೊಡುತ್ತಾರೆ. ದೇಶಕ್ಕಾಗಿ ಏನು ಮಾಡದ ಬಿಜೆಪಿಗರು ತಮ್ಮ ಲಾಭಕ್ಕಾಗಿ ರಾಷ್ಟ್ರ ಧ್ವಜವನ್ನೂ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಿಂದ ಧ್ವಜ ಖರೀದಿ
ರಾಷ್ಟ್ರಧ್ವಜದ ನಿಯಮಾವಳಿ ತಿದ್ದುಪಡಿ ಮಾಡಿದ್ದರಿಂದ ಪಾಲಿಯಸ್ಟರ್ ಬಟ್ಟೆಯಲ್ಲಿ‌ಧ್ಚಜ ಮುದ್ರಿಸಲಾಗಿದೆ. ಅದರಲ್ಲಿಯೂ ಕೂಡಾ ಲೋಪದೋಷಗಳಾಗಿವೆ. ಚಕ್ರವೂ ಮಧ್ಯೆ ಭಾಗದಲ್ಲಿರದೇ ಧ್ವಜ ಕೊನೆ ಇಲ್ಲವೇ ಪ್ರಾರಂಭದಲ್ಲಿಯೇ ಮುದ್ರಣಗೊಂಡಿದೆ. ಆದ್ದರಿಂದ ಕಾಂಗ್ರೆಸ್‌ ಪಕ್ಷದ ವತಿಯಿಂದ ರೂ‌ 2 ಲಕ್ಷ ಮೌಲ್ಯದ ಖಾದಿ ಬಟ್ಟೆಯಲ್ಲಿ ತಯಾರಿಸಲಾದ ಧ್ಚಜಗಳನ್ನೇ ಖರೀದಿ ಮಾಡಲಾಗುತ್ತಿದೆ ಎಂದರು.

ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಶಿವಾನಂದ ಪಾಟೀಲ, ಸುಭಾಷ್ ರಾಠೋಡ, ಸಂತೋಷ ಬಿಲಗುಂದಿ, ಡಾ ಕಿರಣ ದೇಶಮುಖ, ಈರಣ್ಣ ಝಳಕಿ, ಶಿವು ಹೊನಗುಂಟಿ‌ ಸೇರಿದಂತೆ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next