ಗಂಗಾವತಿ: ಪಂಪಾಸರೋವರದ ಜೀರ್ಣೋದ್ಧಾರ ನೆಪದಲ್ಲಿ ಅಕ್ರಮವಾಗಿ ಗರ್ಭಗುಡಿ ಅಗೆದು ಜಯಲಕ್ಷ್ಮೀ ಮೂರ್ತಿ ಹಾಗೂ ಶ್ರೀಚಕ್ರ ಸ್ಥಳಾಂತರ ಮಾಡಿರುವುದು ಹಲವು ಅನುಮಾನಗಳಿಗೆ ಆಸ್ಪದವಾಗಿದೆ. ಸರಕಾರ ಕೂಡಲೇ ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಒತ್ತಾಯಿಸಿದರು.
ರವಿವಾರ ಪಂಪಾ ಸರೋವರಕ್ಕೆ ಕಾಂಗ್ರೆಸ್ ಪಕ್ಷದ ನಿಯೋಗದೊಂದಿಗೆ ತೆರಳಿ ಜಯಲಕ್ಷ್ಮೀ ಗುಡಿ ಅಗೆದಿರುವ ಸ್ಥಳ ಮತ್ತು ಶ್ರೀಚಕ್ರ ಇತರೆ ಸ್ಮಾರಕಗಳನ್ನು ಇರಿಸಿದ್ದ ಜಾಗ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಬಿ. ಶ್ರೀರಾಮುಲು ಅವರು ಪಂಪಾ ಸರೋವರದ ಜೀರ್ಣೋದ್ಧಾರ ಮಾಡುತ್ತಿರುವುದು ಸ್ವಾಗತಾರ್ಹ ಆದರೂ ಗರ್ಭಗುಡಿ ಮೂಲ ಸ್ವರೂಪದಲ್ಲೇ ಇರುವಂತೆ ಪುರಾತತ್ವ ಇಲಾಖೆ ಪರವಾನಗಿ ಪತ್ರದಲ್ಲಿ ಸೂಚನೆ ನೀಡಿದೆ.
ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸುಪರ್ದಿಯಲ್ಲಿ ಕಾಮಗಾರಿ ನಡೆಯಬೇಕಿದ್ದು, ಅಧಿಕಾರಿಗಳ ಗೈರು ಹಾಜರಿಯಲ್ಲಿ ಇಡೀ ಕಾಮಗಾರಿ ನಡೆದಿದೆ. ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರ ಎಲ್ಲಿದ್ದಾರೆ. ಪಂಪಾ ಸರೋವರದ ಜೀರ್ಣೋದ್ಧಾರ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಪುರಾತತ್ವ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಯಾಕೆ ಕರ್ತವ್ಯಕ್ಕೆ ಹಾಜರಿಗಿದ್ದಿಲ್ಲ. ಮೇ 25ರಂದು ಪಂಪಾಸರೋವರದ ಜಯಲಕ್ಷ್ಮೀ ಗರ್ಭಗುಡಿ ಅಗೆದರೂ ಇದುವರೆಗೂ ನಿಯೋಜನೆಗೊಂಡ ಅಧಿಕಾರಿಗಳು ಯಾಕೆ ಸ್ಥಳಕ್ಕೆ ಬಂದಿಲ್ಲ. ಹಾಗಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಗಂಗಾವತಿಗೆ ಆಗಮಿಸಿದ್ದರೂ ಪಂಪಾಸರೋವರಕ್ಕೆ ಯಾಕೆ ಭೇಟಿ ನೀಡಿಲ್ಲ. ಆದ್ದರಿಂದ ಗರ್ಭಗುಡಿ ಅಗೆದ ಮತ್ತು ಸ್ಮಾರಕಗಳ ಅಕ್ರಮ ಸ್ಥಳಾಂತರ ಮಾಡಿದ ಕುರಿತು ಕೂಡಲೇ ತನಿಖೆ ನಡೆಸಬೇಕು. ಗರ್ಭಗುಡಿ ಅಗೆದವರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆನೆಗೊಂದಿ ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು, ಮಾಜಿ ಸಂಸದ ಶಿವರಾಮಗೌಡ, ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ, ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪುರ, ಆನೆಗೊಂದಿ ಗ್ರಾಪಂ ಅಧ್ಯಕ್ಷ ಬಾಳೆಕಾಯಿ ತಿಮ್ಮಪ್ಪ ನಾಯಕ, ಕಾಂಗ್ರೆಸ್ ಮುಖಂಡರಾದ ಶರಣೇಗೌಡ, ಅಮರೇಶ ಗೋನಾಳ, ರೆಡ್ಡಿ ಶ್ರೀನಿವಾಸ, ಕುಪ್ಪರಾಜು, ವಿಷ್ಣು ಆದಾಪುರ, ಸುರೇಶ ಗೌರಪ್ಪ, ಲಕ್ಷ್ಮೀನಾರಾಯಣ, ಪ್ರದೀಪ್, ವೆಂಕಟೇಶ, ಸುದರ್ಶನವರ್ಮಾ ಸೇರಿ ಅನೇಕರಿದ್ದರು.
ಸಚಿವ ಬಿ. ಶ್ರೀರಾಮುಲು ಅವರು ಪಂಪಾಸರೋವರವನ್ನು ವೈಯಕ್ತಿಕವಾಗಿ ಜಿರ್ಣೋದ್ಧಾರ ಮಾಡುತ್ತಿರುವ ಕುರಿತು ಯಾರೂ ಆಕ್ಷೇಪವೆತ್ತಿಲ್ಲ. ಆದರೆ ಕಾಮಗಾರಿ ಮಾಡುವವರು ಜಯಲಕ್ಷ್ಮೀ ಗರ್ಭಗುಡಿಯಲ್ಲಿ ಅಗೆಯುವುದನ್ನು ತಡೆಯಬಹುದಿತ್ತು. ಕೂಡಲೇ ಮೂಲ ಸ್ವರೂಪದಲ್ಲೇ ಗರ್ಭಗುಡಿ ದೇವತೆಯ ಜಗಲಿ ಜಾಗ ನಿರ್ವಹಿಸಿ ಆಷಾಢ ಬರುವ ಮುಂಚೆ ಶಾಸ್ತ್ರೋಕ್ತವಾಗಿ ಮೂರ್ತಿ ಪುನರ್ ಪ್ರತಿಷ್ಠಾಪನೆ ಮಾಡಬೇಕು. ಈ ಭಾಗದ ಜನರ ಪಂಪಾಸರೋವರದ ಜತೆ ಅವಿನಾವಭಾವ ಸಂಬಂಧವಿದ್ದು ಅವರ ಭಾವನೆಗಳಿಗೆ ಧಕ್ಕೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. –
ಲಲಿತಾರಾಣಿ ಶ್ರೀರಂಗದೇವರಾಯಲು, ರಾಜವಂಶಸ್ಥರು