Advertisement

ಅಕ್ರಮ ಗೋ ಸಾಗಾಟಕ್ಕೆ ಹೊಸ ಮಾರ್ಗ: ಇನ್ನೋವಾ ಕಾರಿಗೆ ಮದುವೆ ದಿಬ್ಬಣದ ಅಲಂಕಾರ!

04:51 PM Jan 12, 2022 | Team Udayavani |

ಶಿರ್ವ: ಮದುವೆ ದಿಬ್ಬಣದ ಅಲಂಕಾರ ಮಾಡಿದ ಇನ್ನೋವಾ ಕಾರು ಮತ್ತು ಪಿಕಪ್‌ ವಾಹನದಲ್ಲಿ ಗೋವುಗಳನ್ನು ತುಂಬಿಸಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಶಿರ್ವ ಠಾಣಾಧಿಕಾರಿ ಶ್ರೀ ಶೈಲ ಮುರಗೋಡ ನೇತೃತ್ವದಲ್ಲಿ ಪೊಲೀಸರು ಎಡ್ಮೇರು ಬಳಿ ವಶಕ್ಕೆ ಪಡೆದು 13 ಗೋವುಗಳನ್ನು ರಕ್ಷಣೆ ಮಾಡಿದ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ.

Advertisement

ಶಿರ್ವ ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಬುಧವಾರ ಮುಂಜಾನೆ 4.30ರ ವೇಳೆಗೆ ಮೂಡುಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಅಂಗಾರಕಟ್ಟೆಯಿಂದ ಎಡ್ಮೇರು ಕಡೆಗೆ ಬರುತ್ತಿದ್ದ ಗೋಸಾಗಾಟದ ವಾಹನಗಳನ್ನು ಕೋಚರಪ್ಪು ಸೇತುವೆ ಬಳಿ ತಡೆ ಹಿಡಿದಿದ್ದರು. ಪೊಲೀಸರನ್ನು ಕಂಡ 2 ವಾಹನಗಳಲ್ಲಿದ್ದ 8 ಜನ ಆರೋಪಿಗಳು ವಾಹನಗಳನ್ನು ರಸ್ತೆಯಲ್ಲಿಯೇ ಬಿಟ್ಟು ಕಾಡಿನಲ್ಲಿ ಪರಾರಿಯಾಗಿದ್ದರು.

ವಾಹನಗಳು ಪರಿಶೀಲಿಸಿದಾಗ ಪಿಕಪ್‌ ವಾಹನದಲ್ಲಿ 13 ದನಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿದ್ದು, ಇನ್ನೋವಾ ಕಾರಿನಲ್ಲಿ 2 ಗಂಡು ಕರುಗಳನ್ನು ಕಟ್ಟಿ ಹಾಕಿ ಸಾಗಿಸುತ್ತಿದ್ದರು. 2 ವಾಹನಗಳಲ್ಲಿ ಒಟ್ಟು 15 ಗೋವುಗಳಿದ್ದು ,2 ಗಂಡು ಕರುಗಳು ಉಸಿರುಗಟ್ಟಿ ಮೃತಪಟ್ಟಿವೆ. ಇನ್ನೋವಾ ಕಾರು ಮತ್ತು ಪಿಕಪ್‌ ವಾಹನವನ್ನು ಶಿರ್ವ ಪೊಲೀಸರು ವಶಪಡಿಸಿಕೊಂಡಿದ್ದು, ಗೋವುಗಳನ್ನು ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಮಹಜರು ನಡೆಸಿ ಶಿರ್ವ ಠಾಣೆಗೆ ಸ್ಥಳಾಂತರಿಸಿದ್ದಾರೆ.

Advertisement

ಪೊಲೀಸರನ್ನು ಯಾಮಾರಿಸಲು ಗೋಕಳ್ಳರು ಇನ್ನೋವಾ ಕಾರಿಗೆ ಮದುವೆ ದಿಬ್ಬಣದ ಅಲಂಕಾರ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಕಾರ್ಯಾಚರಣೆಯಲ್ಲಿ ಶಿರ್ವ ಠಾಣೆಯ ಪೊಲೀಸ್‌ ಸಿಬಂದಿಗಳಾದ ಪ್ರಸಾದ್‌,ಸಂತೋಷ್‌,ರಘು,ಸಂದೀಪ್‌,ದಿನೇಶ್‌, ರಾಮರಾಜಪ್ಪ ನಾಯ್ಕ, ವಿನೋದ್‌,ಧರ್ಮಪ್ಪ .ಕೆ.ಎನ್‌  ಪಾಲ್ಗೊಂಡಿದ್ದರು. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next