Advertisement

ನೇರ ಗುತ್ತಿಗೆ ಕಾಮಗಾರಿಗಳಲ್ಲಿ ಅಕ್ರಮ?

12:34 PM Nov 25, 2018 | Team Udayavani |

ಬೆಂಗಳೂರು: ಸರ್ಕಾರಿ ಸಂಸ್ಥೆಯಾಗಿರುವ ಕೆಆರ್‌ಐಡಿಎಲ್‌ಗೆ ನೇರವಾಗಿ ಗುತ್ತಿಗೆ ನೀಡಿರುವ ಕಾಮಗಾರಿಗಳಲ್ಲಿ ನೂರಾರು ಕೋಟಿ ರೂ. ಅಕ್ರಮ ನಡೆದಿರುವ ಬಗ್ಗೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.

Advertisement

ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡುವ ವಿಚಾರದಲ್ಲಿ ನಿಯಮಗಳನ್ನು ಅನುಸರಿಸದ ಹಿನ್ನೆಲೆಯಲ್ಲಿ 240 ಕೋಟಿ ರೂ.ಗಳಷ್ಟು ಅಕ್ರಮ ನಡೆದಿರುವ ಬಗ್ಗೆ ಅನುಮಾನಗಳಿವೆ. 2014-15 ಮತ್ತು 2015-16ರ ಲೆಕ್ಕಪರಿಶೋಧನಾ ವರದಿಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ 239 ಕೋಟಿ ರೂ.ಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, 92 ಲಕ್ಷ ರೂ.ಗಳ ವಸೂಲಾತಿಗೆ ಸೂಚಿಸಲಾಗಿದೆ.

ಲೆಕ್ಕಪರಿಶೋಧಕರು ಸಿದ್ಧಪಡಿಸಿರುವ ಎರಡು ವರ್ಷಗಳ ವರದಿಯಂತೆ 2014-15ರಲ್ಲಿ ಅತಿಹೆಚ್ಚು ಮೊತ್ತದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಆದರೆ, 145.30 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಬಳಿ ಸೂಕ್ತ ದಾಖಲೆಗಳಿಲ್ಲ. ಜತೆಗೆ ನಿಯಮ ಮೀರಿ ಬಿಬಿಎಂಪಿಯಿಂದ ಕೆಆರ್‌ಐಡಿಎಲ್‌ಗೆ 52 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲಾಗಿದೆ. ಈ ಹಣ ವಸೂಲಿ ಮಾಡುವಂತೆ ಸೂಚಿಸಲಾಗಿದೆ.

ಅದೇ ರೀತಿ 2015-16ರಲ್ಲಿ 93.64 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಹ ಅಧಿಕಾರಿಗಳು ಸಲ್ಲಿಕೆ ಮಾಡಿಲ್ಲ. ಹೀಗಾಗಿ ಅಷ್ಟು ಮೊತ್ತಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದು, 39 ಲಕ್ಷ ರೂ.ಗಳು ಅಗತ್ಯವಿಲ್ಲದಿದ್ದರೂ ಹೆಚ್ಚುವರಿಯಾಗಿ ಕೆಆರ್‌ಐಡಿಎಲ್‌ಗೆ ಪಾವತಿಸಲಾಗಿದೆ. ಹೀಗಾಗಿ ಅಷ್ಟು ಮೊತ್ತವನ್ನು ಅಧಿಕಾರಿಗಳು ಅಥವಾ ಕೆಆರ್‌ಐಡಿಎಲ್‌ ಸಂಸ್ಥೆಯಿಂದ ವಸೂಲಿ ಮಾಡುವಂತೆ ಸೂಚಿಸಲಾಗಿದೆ.

ಕೆಟಿಪಿಪಿ ಕಾಯ್ದೆ ಉಲ್ಲಂಘನೆ: ಕೆಆರ್‌ಐಡಿಎಲ್‌ಗೆ ಕಾಮಗಾರಿಗಳ ಗುತ್ತಿಗೆ ನೀಡುವುದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಪ್ರಮುಖವಾಗಿ ಯಾವುದೇ ಕಾಮಗಾರಿ ನೀಡುವ ವೇಳೆ ಅನುಸರಿಸಬೇಕಾದ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ)ಯನ್ನು ಅನುಸರಿಸಿಲ್ಲ. ಕಾಮಗಾರಿಗೆ ಮುನ್ನ ಟೆಂಡರ್‌ ಕರೆಯದೆ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ ನೇರವಾಗಿ ಕಾಮಗಾರಿ ವಹಿಸಿಕೊಡಲಾಗಿದೆ.

Advertisement

ಬಿಬಿಎಂಪಿಗೆ ನಷ್ಟ: ಕೆಪಿಟಿಟಿ ಕಾಯ್ದೆಯಂತೆ ಟೆಂಡರ್‌ ಕರೆದು ಕಾಮಗಾರಿ ವಹಿಸಿಕೊಡದ ಕಾರಣ, ಪಾಲಿಕೆಗೆ ನಷ್ಟವಾಗಿದೆ. ಪ್ರಮುಖವಾಗಿ ಟೆಂಡರ್‌ನಲ್ಲಿ ಭಾಗವಹಿಸುವ ಸಂಸ್ಥೆ ಕೆಆರ್‌ಐಡಿಎಲ್‌ಗಿಂತಲೂ ಕಡಿಮೆ ಮೊತ್ತ ಬಿಡ್‌ ಮಾಡುವ ಸಾಧ್ಯತೆಗಳಿರುತ್ತವೆ. ಆದರೆ, ಅಧಿಕಾರಿಗಳು ನೇರವಾಗಿ ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡಿರುವುದರಿಂದ ಪಾಲಿಕೆಗೆ ನಷ್ಟವಾಗಿದೆ. ಇದರೊಂದಿಗೆ ಟೆಂಡರ್‌ ಆಹ್ವಾನಿಸಿದಾಗ ಟೆಂಡರ್‌ ನಮೂನೆಗಳ ಮಾರಾಟದಿಂದ ಬರುವ ಆದಾಯವೂ ಬಿಬಿಎಂಪಿ ಸಿಗದಂತಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆರಂಭ, ಪೂರ್ಣ ಎರಡೂ ವಿಳಂಬ: ಕೆಆರ್‌ಐಡಿಎಲ್‌ ಸಂಸ್ಥೆಗೆ ಪಾಲಿಕೆಯಿಂದ ರಸ್ತೆ ದುರಸ್ತಿ ಕಾಮಗಾರಿಯನ್ನು ವಹಿಸಲಾಗಿತ್ತು. ಜತೆಗೆ ವಿದ್ಯುತ್‌ ನಿರ್ವಹಣೆ, ಪೈಪ್‌ಲೈನ್‌ ಅಳವಡಿಕೆ, ಕೊಳವೆಬಾವಿ ಕೊರೆಯುವುದು, ಸೊಳ್ಳೆ ನಿಯಂತ್ರಣ, ಸೋಲಾರ್‌ ವಾಟರ್‌ ಹೀಟರ್‌ ಸರಬರಾಜು ಮತ್ತು ಅಳವಡಿಕೆ ಹೀಗೆ ಹಲವು ಕಾಮಗಾರಿಗಳನ್ನು ಟೆಂಡರ್‌ ಕರೆಯದೆ ನೇರವಾಗಿ ಕೆಆರ್‌ಐಡಿಎಲ್‌ಗೆ ವಹಿಸಿದ್ದರೂ, ಯಾವುದೇ ಕಾಮಗಾರಿಯನ್ನು ಕೆಆರ್‌ಐಡಿಎಲ್‌ ನಿಗದಿತ ಅವಧಿಯಲ್ಲಿ ಆರಂಭಿಸಿಲ್ಲ ಮತ್ತು ಪೂರ್ಣಗೊಳಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next