ಕಲಬುರಗಿ: ವಿವಿಧ ನೇಮಕಾತಿಗಳ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿರುವುದು ಕಾಂಗ್ರೆಸ್ ಪಕ್ಷದ ಬಳವಳಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಈ ಹಿಂದೆ ನಡೆದ ಪೊಲಿಸ್ ಕಾನ್ಸ್‌ಟೇಬಲ್ ನೇಮಕ ಸೇರಿದಂತೆ ಇತರ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆಯಲ್ಲದೇ ಲೋಕಾಯುಕ್ತ ದುರ್ಬಲ ಗೊಳಿಸುವುದರ ಮುಖಾಂತರ ಭ್ರಷ್ಟಾಚಾರಕ್ಕೆ ನಾಂದಿ ಹಾಡಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳು ಸರಣಿ ಎನ್ನುವಂತೆ ನಡೆದಿವೆ. ಕೆಪಿಎಸ್‌ಸಿ ಹಗರಣ, 2015ರಲ್ಲಿ ಪೊಲೀಸ್ ನೇಮಕಾತಿಯಲ್ಲಿ ಗೋಲ್ಮಾಲ್, ಡಿನೋಟಿಫಿಕೇಶನ್ ಸೇರಿದಂತೆ ಹಲವರು ಅಕ್ರಮಗಳು ನಡೆದವು. ಆದರೆ ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಈಗ ಬೊಬ್ಬೆ ಹಾಕುತ್ತಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಇಲ್ಲದ್ದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂರು ಸಲ ಹೇಳುವ ಮೂಲಕ ಸತ್ಯ ಮಾಡಲು ಹೊರಟಿದ್ದಾರೆ. ಒಂದು ನೈತಿಕ ಆಧಾರದ ಮೇಲೆ ಟೀಕೆ ಮಾಡಿದರೆ ಜನ ನಂಬುತ್ತಾರೆ. ಆದರೆ ಇವರದ್ದು ತಳಬುಡವಿಲ್ಲದ ಟೀಕೆಯಾಗಿದೆ ಎಂದು ತಿರುಗೇಟು ನೀಡಿದರು.
ಪಿಎಸ್‌ಐ ನೇಮಕಾತಿಯ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ತನಿಖೆ ವಹಿಸಲಾಗಿದೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಕಾಂಗ್ರೆಸ್‌ನವರು ಮೊಸರಿನಲ್ಲಿ ಕಲ್ಲು ಹುಡುಕುವ ದಂಧೆ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ, ಮಾಧ್ಯಮ ಪ್ರಮುಖರಾದ ಬಾಬುರಾವ ಹಾಗರಗುಂಡಗಿ, ನಾಗರಾಜ ಮಹಾಗಾಂವಕರ್ ಮುಂತಾದವರಿದ್ದರು.