ಕುಂದಾಪುರ: ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸ್ತಾನ ಟೋಲ್ ಗೇಟ್ ಬಳಿ ಜು.12 ಬೆಳಗಿನ ಜಾವ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಪ್ರಕರಣದಲ್ಲಿ ಬುಧವಾರ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.
ಲಕ್ಷಾಂತರ ರೂ. ಮೌಲ್ಯದ ಜಾನುವಾರುಗಳನ್ನು ರಕ್ಷಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆರೋಪಿಗಳ ವಿಚಾರಣೆ ವೇಳೆ ಜಾನುವಾರು ಸಾಗಾಟದ ಜಾಲದ ಹಿಂದೆ ಪೊಲೀಸರ ಕೈವಾಡವಿರುವುದು ತಿಳಿದುಬಂತು. ಅದರಂತೆ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.
ಮಲ್ಪೆ ಕರಾವಳಿ ಕಾವಲುಪಡೆಯ ಸಿಬಂದಿ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆ ಸಿಬಂದಿ ವಿನೋದ್ ಗೌಡ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿನ ವಿವಿಧ ಠಾಣೆಯ ನಾಲ್ವರು ಪೊಲೀಸರ ಹೆಸರು ಕೇಳಿಬಂದಿದ್ದು ಅವರೆಲ್ಲಾ ತಲೆ ಮರೆಸಿಕೊಂಡಿದ್ದಾರೆ. ಇದರಲ್ಲಿ ಪೊಲೀಸ್ ಅಧಿಕಾರಿಯ ಗನ್ ಮ್ಯಾನ್ ಕೂಡ ಇದ್ದಾರೆ ಎನ್ನಲಾಗುತ್ತಿದೆ.
ಜು. 12 ಬೆಳಗ್ಗಿನ ಜಾವ ಕೋಟ ಪಿಎಸ್‌ಐ ನಿತ್ಯಾನಂದ ಗೌಡ ಅವರಿಗೆ ಸಿಕ್ಕ ಖಚಿತ ಮಾಹಿತಿಯಂತೆ, ಕಾರನ್ನು ಬೆಂಗಾವಲು ವಾಹನವಾಗಿಟ್ಟುಕೊಂಡು ಲಾರಿಯೊಂದರಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಸಾಸ್ತಾನ ಟೋಲ್ ಗೇಟ್ ಬಳಿ ಕಾರ್ಯಾಚರಣೆ ನಡೆಸಿದ್ದು ಆರೋಪಿಗಳಾದ ಕಾರಿನ ಚಾಲಕ ಶಿವಾನಂದ, ಜತೆಗಿದ್ದ ಮಾರುತಿ ನಾರಾಯಣ ನಾಯ್ಕ, ಲಾರಿ ಚಾಲಕ ಸೈನುದ್ದೀನ್, ಲಾರಿಯಲ್ಲಿದ್ದ ಗಣೇಶನ್, ಹಮೀದ್ ಸಿ.ಎಚ್., ಸಮೀರ್ ಅವರನ್ನು ಬಂಧಿಸಲಾಗಿತ್ತು. 65 ಸಾವಿರ ಮೌಲ್ಯದ 13 ಕೋಣ, 35 ಸಾವಿರ ಮೌಲ್ಯದ 7 ಎಮ್ಮೆಗಳನ್ನು ಪೊಲೀಸರ ತಂಡ ರಕ್ಷಿಸಿತ್ತು. 12 ಲಕ್ಷ ರೂ. ಮೌಲ್ಯದ ಲಾರಿ, 2 ಲಕ್ಷ ರೂ. ಮೌಲ್ಯದ ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿತ್ತು.
ವಿಚಾರಣೆ ವೇಳೆ ಬೆಳಕಿಗೆ
ಆರೋಪಿಗಳು 20 ಜಾನುವಾರು ಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಕಾಸರಗೋಡಿನ ಅಬ್ದುಲ್ ಅವರಿಗೆ ಮಾರಾಟ ಮಾಡಲು ಕಾಸರಗೋಡು ಜಿಲ್ಲೆಯ ಕಸಾಯಿಖಾನೆಗೆ ವಾಹನದಲ್ಲಿ ಸಾಗಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಯಿತು.
ತಮ್ಮ ಅಕ್ರಮ ಸಾಗಾಟಕ್ಕೆ ಪೊಲೀಸರು ಕೂಡ ಸಹಾಯ ನೀಡುವ ಬಗ್ಗೆ ಮಾಹಿತಿ ದೊರೆಯಿತು. ಆರೋಪಿಗಳು ನೀಡಿದ ಮಾಹಿತಿಯಂತೆ ಇಬ್ಬರು ಪೊಲೀಸರನ್ನು ಈಗಾಗಲೇ ಬಂಧಿಸಿ ಬುಧವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇಬ್ಬರಿಗೂ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ನಾಲ್ವರು ಪೊಲೀಸ್ ಸಿಬಂದಿ ತಲೆಮರೆಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆದಿದೆ. ಮಂಗಳವಾರ ಇತರ ನಾಲ್ವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದು ಅವರ ತನಿಖೆ ನಡೆಯುತ್ತಿದೆ.