ಉಳ್ಳಾಲ: ಅಕ್ರಮವಾಗಿ ಕೇರಳ ಕಡೆಗೆ ಲಾರಿ ಮೂಲಕ ಜಾನುವಾರು ಸಾಗಿಸುತ್ತಿದ್ದ ನಾಲ್ವರ ತಂಡವನ್ನು ಬಂಧಿಸಿರುವ ಉಳ್ಳಾಲ ಪೊಲೀಸರು, ಲಾರಿ ಸಹಿತ 10 ಜಾನುವಾರುಗಳನ್ನು ತಲಪಾಡಿ ಟೋಲ್‌ಗೇಟ್ ಬಳಿ ಸೋಮವಾರ ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ಮೂಲದ ರೂಪೇಯ್ ಮಾರ್ಡಿ, ಸುಮಿತ್, ದಶರಥ್ ಹಾಗೂ ಜಾನ್ ಬಂಧಿತರು. ನೆಲ್ಯಾಡಿ ನಿವಾಸಿ ಸೆಬಾಸ್ಟಿಯನ್ ಎಂಬಾತ ಜಾನುವಾರುಗಳನ್ನು ಲಾರಿಯಲ್ಲಿ ಕಳುಹಿಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಟೋಲ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಕೇರಳ ನೋಂದಾಯಿತ ಈಚರ್ ಲಾರಿಯಲ್ಲಿ ಎಮ್ಮೆ ಮತ್ತು ಕೋಣ ಸಹಿತ ಒಟ್ಟು 10 ಜಾನುವಾರುಗಳನ್ನು ಅಕ್ರಮವಾಗಿ ಹಾಗೂ ಅಮಾನುಷವಾಗಿ ಸಾಗಿಸಲಾಗುತ್ತಿತ್ತು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾನುವಾರುಗಳನ್ನು ಪಜೀರು ಗೋವನಿತಾಶ್ರಯ ವಶಕ್ಕೆ ಒಪ್ಪಿಸಲಾಗಿದೆ.
ಇನ್‌ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಎಎಸ್‌ಐ ರಾಧಾ ಕೃಷ್ಣ , ಪರಮೇಶ್ವರ್ ಹಾಗೂ ತಲಪಾಡಿ ಚೆಕ್ ಪೋಸ್ಟ್ ಸಿಬಂದಿ ರವೀಂದ್ರ ಹಾಗೂ ಹೋಂ ಗಾರ್ಡ್ ರಹಿಮಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು