Advertisement

ಅಕ್ರಮ ಕಟ್ಟಡಗಳ ಪರವಾನಿಗೆ ರದ್ದು

03:40 AM Jun 02, 2018 | Team Udayavani |

ಪುತ್ತೂರು: ಡಬಲ್‌ ಟ್ಯಾಕ್ಸ್‌ ಪಾವತಿಸಿ ಬಚಾವಾಗುತ್ತಿದ್ದ ಕಟ್ಟಡ ಮಾಲೀಕರೇ, ಇನ್ನು ಮುಂದೆ ಇದು ನಡೆಯದು. ನಗರಸಭೆ ವಿಧಿಸಿದ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದರೆ, ಪರವಾನಿಗೆಯೇ ರದ್ದಾಗಲಿದೆ. ಇಂತಹ ಆದೇಶವನ್ನು ಪುತ್ತೂರು ನಗರಸಭೆ ಹೊರಡಿಸಿದೆ. ಮೇ 30ರಂದು ಒಂದೇ ದಿನ 75 ಕರೆಗಳು ನಗರಸಭೆಗೆ ಬಂದಿದ್ದವು. ಎಲ್ಲರ ದೂರು ಒಂದೇ: ಚರಂಡಿ ಅಥವಾ ತೋಡು ಬ್ಲಾಕ್‌ ಆಗಿದೆ. ಚರಂಡಿ ಅಥವಾ ತೋಡನ್ನು ಅತಿಕ್ರಮಿಸಿರುವುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪುತ್ತೂರು ನಗರಸಭೆ, ಅನಧಿಕೃತ ಕಟ್ಟಡ ನಿರ್ಮಾಣದಾರರಿಗೆ ತಾಕೀತು ಮಾಡಿದೆ. ಕರ್ನಾಟಕ ಪುರಸಭಾ ಅಧಿನಿಯಮ 1964ರ ಕಲಂ 187ರಂತೆ ಕಟ್ಟಡ ನಿರ್ಮಾಣ ಪೂರ್ವದಲ್ಲಿ ನಗರಸಭೆ ಅನುಮತಿ ಪಡೆಯುವುದು ಕಡ್ಡಾಯ. ಇದನ್ನು ಉಲ್ಲಂಘಿಸಿ, ಅನುಮತಿ ಪಡೆಯದೇ ಅನಧಿಕೃತ ಕಟ್ಟಡ ಅಥವಾ ಆವರಣ ಗೋಡೆ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಗಮನಕ್ಕೆ ಬಂದರೆ, ಕಟ್ಟಡವನ್ನು ಕೆಡವಲಾಗುವುದು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

Advertisement

ಅನುಮೋದಿತ ನಕಾಶೆಯಂತೆ ಕಟ್ಟಡಗಳು ಇರುವುದನ್ನು ನಗರಸಭೆ ಪರವಾನಿಗೆ ಹೊಂದಿರುವ ಎಂಜಿನಿಯರ್‌ ಮೂಲಕ ದೃಢಪಡಿಸಿಕೊಳ್ಳಬೇಕು. ನಿಗದಿತ ಸೆಟ್‌ ಬ್ಯಾಕ್‌, ಕಟ್ಟಡದ ಮಹಡಿಗಳ ಸಂಖ್ಯೆ, ಕಟ್ಟಡದ ಎತ್ತರ, ರಸ್ತೆ ವಿಸ್ತರಣೆ ಜಾಗ ಮೊದಲಾದವನ್ನು ಅನುಮೋದಿತ ನಕಾಶೆಯಂತೆ ಚಾಚೂ ತಪ್ಪದೇ ಪಾಲಿಸಬೇಕು. ಪರವಾನಿಗೆ ಅವಧಿ ಮುಗಿಯುವ ಹಂತದಲ್ಲಿದ್ದರೆ, 30 ದಿನ ಮೊದಲು ನವೀಕರಿಸಿಕೊಳ್ಳಬೇಕು. ಕಟ್ಟಡ ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಸುರಕ್ಷತಾ ಕ್ರಮ ಕಡ್ಡಾಯವಾಗಿ ಪಾಲಿಸ ಬೇಕು ಎಂದು ತಿಳಿಸಲಾಗಿದೆ.

ಪರವಾನಿಗೆ ರದ್ದು
ಕಟ್ಟಡ ನಿರ್ಮಾಣ ಮಾಡುತ್ತಿರುವ ನಿವೇಶನದ ಸುತ್ತಮುತ್ತ ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಕಟ್ಟಡ ಸಾಮಗ್ರಿಗಳನ್ನು ಸಂಗ್ರಹಿಸಿ ಇಡುತ್ತಿರುವುದು ಹಾಗೂ ಕಟ್ಟಡದ ಎದುರು ಚರಂಡಿಗೆ ಮಣ್ಣು ಹಾಕಿ ಬಂದ್‌ ಮಾಡಿರುವುದು ಕಂಡುಬಂದಿದೆ. ಮುಂದೆ ಇಂತಹ ಪ್ರಕರಣ ಕಂಡುಬಂದರೆ, ನಗರಸಭೆ ವತಿಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು. ಅಂತಹ ಕಟ್ಟಡದ ಪರವಾನಿಗೆ ರದ್ದು ಪಡಿಸಲಾಗುವುದು.

ಶೀಟ್‌ ಗೂ ಅನುಮತಿ
ಕಟ್ಟಡದ ಛಾವಣಿ ಸೋರುತ್ತಿದ್ದಲ್ಲಿ ಶೀಟ್‌ ಅಳವಡಿಸುವ ಸಂದರ್ಭ, ನಗರ ಸಭೆ ಅನುಮತಿ ಪಡೆದುಕೊಳ್ಳಬೇಕು. ಕಟ್ಟಡ ವಿಸ್ತರಣೆ ಸಂದರ್ಭ ಹಾಗೂ ಹಳೆ ಕಟ್ಟಡ ದುರಸ್ತಿ ಬಗ್ಗೆಯೂ ನಗರಸಭೆಯ ಪೂರ್ವಾನುಮತಿ ಪಡೆಯಲು ಸೂಚಿಸಿದೆ.

ಇನ್ನು ಅವಕಾಶವಿಲ್ಲ
ಕಟ್ಟಡ ನಿರ್ಮಾಣದ ವೇಳೆ ಅಕ್ರಮ ನಡೆಸಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಅಕ್ರಮ ಕಟ್ಟಡ ನಿರ್ಮಾಣ ಮಾಡಿ, ಡಬಲ್‌ ತೆರಿಗೆ ಪಾವತಿಸುತ್ತಿದ್ದರು. ಇದು ತಿಳಿವಳಿಕೆ ಇಲ್ಲದವರಿಗಾಗಿ ತಂದ ಕಾನೂನಾಗಿತ್ತು. ಇದನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಮಾತ್ರವಲ್ಲ ಡಬಲ್‌ ಟ್ಯಾಕ್ಸ್‌ ಮೂಲಕ ನಗರಸಭೆಯೇ ಅಕ್ರಮ ಕಟ್ಟಡಗಳಿಗೆ ಪ್ರೋತ್ಸಾಹ ನೀಡಲು ಅನುವು ಮಾಡಿಕೊಟ್ಟಂತಾಗಿದೆ. ಮುಂದೆ ಇದಕ್ಕೆ ಅವಕಾಶವಿಲ್ಲ. 
– ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next