Advertisement

ಪಿಎಸ್‌ಐ ನೇಮಕ ಅಕ್ರಮ: ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

10:08 PM Jul 22, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕ ಅಕ್ರಮ ಪ್ರಕರಣದ ಏಳು ಮಂದಿ ಆರೋಪಿಗಳಿಗೆ ಜಾಮೀನು ನಿರಾಕರಿಸಿ ಹೈಕೋರ್ಟ್‌ ಆದೇಶಿಸಿದೆ.

Advertisement

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಕೆ.ಸಿ.ದಿಲೀಪ್‌ ಕುಮಾರ್‌, ಎಚ್‌.ಆರ್‌. ಪ್ರವೀಣ್‌ ಕುಮಾರ್‌, ಸಿ.ಎನ್‌.ಶಶಿಧರ್‌, ಆರ್‌.ಶರತ್‌ಕುಮಾರ್‌, ಎಚ್‌.ಯು.ರಘವೀರ್‌, ಕೆ.ಸೂರ್ಯ ನಾರಾಯಣ್‌ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತು ತಲೆಮರೆಸಿಕೊಂಡಿರುವ ಆರೋಪಿಯಾದ ಬ್ಯಾಡರಹಳ್ಳಿ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ನವೀನ್‌ ಪ್ರಸಾದ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ.

ಅರ್ಜಿಗಳ ಸಂಬಂಧ ಜು.20ರಂದು ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ತೀರ್ಪು ಪ್ರಕಟಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಜಾಮೀನು ಅರ್ಜಿಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಿಐಡಿ ಪರ ರಾಜ್ಯ ಸರ್ಕಾರಿ ಅಭಿಯೋಜಕ ವಿ.ಎಸ್‌. ಹೆಗ್ಡೆ ಇದು ಸಾಧಾರಣ ಅಪರಾಧವಲ್ಲ. ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿ, ಇನ್ಸ್‌ಪೆಕ್ಟರ್‌ಗಳು, ಹಣ ಸಂಗ್ರಹಿಸಿರುವ ದಲ್ಲಾಳಿಗಳು ಮತ್ತು ಕೆಲ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ. ಇದರಿಂದ ಪ್ರಕರಣದ ಗಂಭೀರತೆ ತಿಳಿಯುತ್ತದೆ. ಇನ್ನಷ್ಟು ಆಳವಾಗಿ ತನಿಖೆ ನಡೆಯಬೇಕಿದೆ ಎಂದು ಹೇಳಿತ್ತು.

ಅಲ್ಲದೆ, ತನಿಖೆ ಪ್ರಗತಿಯಲ್ಲಿದ್ದು, ಅರ್ಜಿದಾರರ ಕೃತ್ಯದ ಸಾಬೀತುಪಡಿಸುವ ಸಾಕಷ್ಟು ಸಾಕ್ಷ್ಯಾಧಾರಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿವೆ. ಈ ಹಂತದಲ್ಲಿ ಅವರಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿ ಉಂಟಾಗುತ್ತದೆ. ಹಾಗಾಗಿ, ಆರೋಪಿಗಳಿಗೆ ಜಾಮೀನು ನೀಡಬಾರದು. ಅರ್ಜಿಗಳನ್ನು ದಂಡ ಸಹಿತ ವಜಾಗೊಳಿಸಬೇಕು ಎಂದು ಸಿಐಡಿ ನ್ಯಾಯಪೀಠವನ್ನು ಕೋರಿದ್ದರು.

Advertisement

ಹೈಕೋರ್ಟ್‌ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು, ಇದೊಂದು ಕೊಲೆಗಿಂತ ದೊಡ್ಡ ಅಪರಾಧ ಕೃತ್ಯವಾಗಿದೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ. ಈ ಪ್ರಕರಣ ಸಮಾಜದ ಪಾಲಿನ ಭಯೋತ್ಪಾದನೆಯಾಗಿದೆ. ಪ್ರಕರಣದಲ್ಲಿ 50 ಸಾವಿರ ಅಭ್ಯರ್ಥಿಗಳು ಸಂತ್ರಸ್ತರಾಗಿದ್ದಾರೆ.

ಸಂತ್ರಸ್ತರಿಗೆ ನ್ಯಾಯಕೊಡಿಸುವ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಗೊಳಪಡಿಸುವ ಕೆಲಸ ಆಗಬೇಕು. ಪೊಲೀಸ್‌ ಇಲಾಖೆ ಗೌರವ ಉಳಿಸುವ ರೀತಿಯಲ್ಲಿ ಸಮರ್ಪಕ ತನಿಖೆ ನಡೆಸಬೇಕು. ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ಹಗರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಸಿಐಡಿಗೆ ತಾಕೀತು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next