Advertisement

ಅಕ್ರಮ ತಡೆಗೆ ಮತ್ತಿಬ್ಬರು ಐಎಎಸ್‌ ಅಧಿಕಾರಿಗಳ ಕಣ್ಗಾವಲು

06:09 PM Apr 16, 2021 | Team Udayavani |

ಮಸ್ಕಿ: ಉಪಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಿಲ್ಲ ಎನ್ನುವ ರಾಜಕೀಯ ಪಕ್ಷಗಳ ಆರೋಪ ಹೆಚ್ಚಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಇಬ್ಬರು ಹಿರಿಯ ಐಎಎಸ್‌ ಅಧಿ ಕಾರಿಗಳನ್ನು ಚುನಾವಣೆ ಆಯೋಗ ನೇಮಕ ಮಾಡಿದೆ. ಇದೇ ಮೊದಲ ಬಾರಿಗೆ ಮಸ್ಕಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡು ಪಕ್ಷಗಳ ನಡುವೆ ನೇರ ಜಿದ್ದಾ-ಜಿದ್ದಿ ಏರ್ಪಟ್ಟಿದ್ದು, ಆಯಾ ಪಕ್ಷದ ವರಿಷ್ಠರಿಗೂ ಇದು ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಮತದಾರರನ್ನು ಸೆಳೆಯಲು ಇಲ್ಲಿ ಕೇವಲ ಲೋಕಲ್‌ ಇಶ್ಯೂ ಮಾತ್ರ ಪ್ರಸ್ತಾಪವಾಗದೇ, ಹಣ ಬಲ, ತೋಳ್ಬಲದ ಪ್ರದರ್ಶನದ ಮುನ್ಸೂಚನೆ ಇತ್ತು.

Advertisement

ಇದಕ್ಕೆ ಪುಷ್ಠಿ ಎನ್ನುವಂತೆ ಕಳೆದ ಒಂದು ವಾರದಿಂದ ಹಣ ಹಂಚಿಕೆ, ಲಿಕ್ಕರ್‌ ಹಂಚಿಕೆ ಹೆಸರಲ್ಲಿ ಜಗಳ, ತಗಾದೆಗಳು ನಡೆದವು. ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬಡಿದಾಟಗಳು ಶುರುವಾಗಿದ್ದವು. ಇದೇ ಕಾರಣಕ್ಕೆ ಕಾಂಗ್ರೆಸ್‌ನ ಮುಖಂಡರು ಆಡಳಿತ ಅಧಿಕಾರಿಗಳೆಲ್ಲರೂ ಬಿಜೆಪಿ ಪರವಾಗಿದ್ದಾರೆ. ಇಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆಪಾದಿಸಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಹಿರಿಯ ಐಎಎಸ್‌ ಅಧಿಕಾರಿಗಳಾದ ಆದಿತ್ಯ ಆಮ್ಲಾನ್‌ ಬಿಸ್ವಾಸ ಮತ್ತು ನಳಿನ್‌ಅತುಲ್‌ ಅವರನ್ನು ನೇಮಕ ಮಾಡಲಾಗಿದೆ.

ಡಿಸಿ ಆರ್‌.ವೆಂಕಟೇಶಕುಮಾರ್‌, ಚುನಾವಣಾ ವೀಕ್ಷಕರಾಗಿ ಹರಿಬಾಬು ಸೇರಿ ಸ್ಥಳೀಯ ಮಟ್ಟದಲ್ಲಿ ಚುನಾವಣೆ ಅಧಿಕಾರಿಗಳು ಪ್ರತ್ಯೇಕವಾಗಿ ಇದ್ದರೂ ಹೆಚ್ಚುವರಿ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಚುನಾವಣೆ ಕರ್ತವ್ಯ ನಿರತ ಅಧಿಕಾರಿಗಳು ಈಗ ಅಲರ್ಟ್‌ ಆಗಿದ್ದಾರೆ. ಹಲವು ಕಡೆ ಕೇಸ್‌: ಚುನಾವಣೆ ಮತದಾನ ದಿನಾಂಕ ಹತ್ತಿರವಾದಂತೆಲ್ಲ ಮಸ್ಕಿ ಕ್ಷೇತ್ರಾದ್ಯಂತ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದ ವಿಡಿಯೋಗಳು ಎಲ್ಲಡೆ ವೈರಲ್‌ ಆಗಿದ್ದವು.

ಹಣ ಹಂಚಿಕೆ ಮಾಡುತ್ತಿದ್ದವರನ್ನು ಖುದ್ದಾಗಿ ಠಾಣೆಗೆ ನೀಡಿದರೂ ಕೇಸ್‌ ದಾಖಲಿಸದೇ ಬಿಟ್ಟು ಕಳುಹಿಸಲಾಗಿತ್ತು. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಕಾಂಗ್ರೆಸ್‌ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ಹೀಗಾಗಿ ಇಲ್ಲಿನ ಪರಿಸ್ಥಿತಿ ಅರಿತ ಆಯೋಗ ಹೆಚ್ಚುವರಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಉಪಚುನಾವಣೆ ಕರ್ತವ್ಯಕ್ಕೆ ನೇಮಕವಾದ ಐಎಎಸ್‌ ಅಧಿಕಾರಿಗಳಾದ ಆದಿತ್ಯ ಆಮ್ಲಾನ್‌ ಬಿಸ್ವಾಸ್‌ ಹಾಗೂ ನಳಿನ್‌ಅತುಲ್‌ ಕಳೆದ ಮೂರ್‍ನಾಲ್ಕು ದಿನಗಳಿಂದ ನಿತ್ಯ ಸಂಚಾರ ನಡೆಸಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ ಚಾಟಿ ಬೀಸಿದ್ದು, ಹಣ ಹಂಚಿಕೆ ವಿಡಿಯೋ ಪತ್ತೆಯಾದ ಕಡೆಗೆಲ್ಲ ಹಣ ಹಂಚುತ್ತಿದ್ದವರನ್ನು ಪತ್ತೆ ಹಚ್ಚ ಕೇಸ್‌ ದಾಖಲಿಸಲಾಗಿದೆ. ಹಲವರನ್ನು ಬಂಧಿಸಲಾಗಿದೆ.

ಹೊರಗಿನಿಂದ ಬಂದು ಹಲವು ದಿನಗಳ ಕಾಲ ಇಲ್ಲಿಯೇ ಠಿಕಾಣಿ ಹೂಡಿದ್ದವರನ್ನು ಮಸ್ಕಿಯಿಂದ ಎತ್ತಂಗಡಿ ಮಾಡಿಸಲಾಗಿದೆ. ಗಡಿ ಪ್ರದೇಶದಲ್ಲೂ ಠಿಕಾಣಿ ಹೂಡಿದ್ದ ಬಿಜೆಪಿ, ಕಾಂಗ್ರೆಸ್‌ ಎರಡು ಪಕ್ಷದ ಪ್ರಭಾವಿ ನಾಯಕರಿಗೂ ಎಚ್ಚರಿಕೆ ನೀಡಿ ಜಿಲ್ಲೆಯ ಗಡಿಯಿಂದ ಹೊರ ಹಾಕಲಾಗಿದೆ. ಇದು ಮಸ್ಕಿಯಲ್ಲಿ ಸಂಚಲನ ಉಂಟು ಮಾಡಿದೆ.

Advertisement

ಕಡೆ ದಿನ ಎಚ್ಚರಿಕೆ: ಇನ್ನು ಮತದಾನ ಮುನ್ನ ಎರಡು ದಿನಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರುವಂತ ಘಟನೆಗಳು ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಹೆಚ್ಚುವರಿ ಅಧಿಕಾರಿಗಳು ಈಗ ನಿಗಾ ವಹಿಸಿದ್ದಾರೆ. ಹಣ, ಮದ್ಯ ಹಂಚಿಕೆ ವಿರುದ್ಧ ಅಲರ್ಟ್‌ ಆಗಿದ್ದು ಫ್ಲೆಯಿಂನಗ್‌ ಸ್ಕ್ವಾಡ್‌, ಪೊಲೀಸ್‌ ಸಿಬ್ಬಂದಿ ಸೇರಿ ಚುನಾವಣೆ ಕರ್ತವ್ಯಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ಬಳಸಿಕೊಂಡು ಅಕ್ರಮ ತಡೆಯದಂತೆ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿದೆ.

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next