ರಬಕವಿ-ಬನಹಟ್ಟಿ : ಸ್ಥಳೀಯ ಕೆರೆ ರಸ್ತೆಯ ಕಾಡಸಿದ್ಧೇಶ‍್ವರ ಕಾಲೊನಿಯಲ್ಲಿ ಅಕ್ರಮವಾಗಿ ಮಾವ ತಯಾರು ಮಾಡುತ್ತಿದ್ದ ಘಟಕದ ಮೇಲೆ ಆರೋಗ್ಯ ಇಲಾಖೆಯ ಮತ್ತು ಪೊಲೀಸ್ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ರೂ. 8 ಲಕ್ಷ ಮೊತ್ತದ 5.2 ಕ್ವಿಂಟಲ್ ಕಚ್ಚಾ ವಸ್ತುಗಳನ್ನು ವಶ ಪಡಿಸಿಕೊಂಡ ಘಟನೆ ನಡೆದಿದೆ.
ಈ ವೇಳೆ ಜಮಖಂಡಿ ಮೂಲದ ಕರಿಂಖಾನ ಪಠಾಣ ಎಂಬ ವ್ಯಕ್ತಿಯು ಪರಾರಿಯಾಗಿದ್ದಾನೆ. ಇಲ್ಲಿ ತಯಾರಾಗುತ್ತಿದ್ದ ಮಾವಾ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಪ್ರಮುಖ ನಗರಗಳಿಗೆ ಕಳಿಸಲಾಗುತ್ತಿತ್ತು.
ಬನಹಟ್ಟಿಯ ಕಾಡಸಿದ್ಧೇಶ್ವರ ಕಾಲೊನಿಯ ಮನೆಯಲ್ಲಿ ಅಪಾರ ಪ್ರಮಾಣದ ಸುಣ್ಣದ ನೀರು, ಅಡಕೆ ಮತ್ತು ತಂಬಾಕು ಶೇಖರಿಸಿಡಲಾಗಿತ್ತು. ಮಾವಾ ತಯಾರು ಮಾಡುತ್ತಿದ್ದ ಯಂತ್ರೋಪರಣಗಳನ್ನು ಕೂಡಾ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ತೇರದಾಳದ ಡಿಎಸ್‍ಎಸ್ ಮುಖಂಡ ರಾಜು ಸರಿಕರ ಎಂಬವರಿಂದ ಖಚಿತ ಮಾಹಿತಿಯನ್ನು ಪಡೆದುಕೊಂಡ ಅಧಿಕಾರಿಗಳು ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಶಶಿಕಾಂತ ಕುಮಠಳ್ಳಿ ನೇತೃತ್ವದಲ್ಲಿ ದಾಳಿ ನಡೆಸಿದ್ದರು.
ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ : ನಾಯಕ ರಾಹುಲ್ ಗಾಯಾಳಾಗಿ ಹೊರಗೆ
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಅಪ್ಪಾಸಾಬ ಇನಾಮದಾರ, ಆರೋಗ್ಯಾಧಿಕಾರಿಗಳಾದ ಎಂ.ಎಚ್.ಕಡ್ಲಿಮಟ್ಟಿ, ಅಪ್ಪಾಜಿ ಹೂಗಾರ, ಸಾಮಾಜಿಕ ಕಾರ್ಯಕರ್ತ ಶಿವಲಿಂಗೆಗೌಡ, ಪಿಎಸ್ಐ ಸುರೇಶ ಮಂಟೂರ, ಕ್ರೈಂ ಪಿಎಸ್‍ಯ ಪುರಂದರ ಪೂಜಾರಿ ಇದ್ದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಗೊಂಡಿದ್ದು, ಮುಂದಿನ ತನಿಖೆಯನ್ನು ಪೊಲೀಸ್‍ರು ಕೈಗೊಂಡಿದ್ದಾರೆ.