Advertisement

ಅಕ್ರಮ ಖಾತೆ: ತಪ್ಪಿತಸ್ಥರ ವಿರುದ್ಧ ಕ್ರಮ

09:24 PM Oct 19, 2019 | Lakshmi GovindaRaju |

ಶಿಡ್ಲಘಟ್ಟ: ತಾಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿಯ ಅಂಕತಟ್ಟಿ ಗ್ರಾಮದಲ್ಲಿ ಗ್ರಾಮಠಾಣೆಯ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿದರೆನ್ನಲಾದ ಪ್ರಕರಣವನ್ನು ಜಿಲ್ಲಾ ಮಟ್ಟದ ವಿಶೇಷ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಜಿಪಂ ಸಿಇಒ ಫೌಝೀಯಾ ತರುನ್ನುಮ್‌ ತಿಳಿಸಿದರು.

Advertisement

ತಾಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ಮುಂದೆ ಧರಣಿ ನಡೆಸುತ್ತಿದ್ದ ಅಂಕತಟ್ಟಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ ಅವರು, ಯಾವುದೇ ಒಂದು ಸಮಸ್ಯೆ ಅಥವಾ ಪ್ರಕರಣವನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಿಲ್ಲ. ಗ್ರಾಮಠಾಣೆಯ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕೆಂದು ತಾಪಂ ಇಒ ಶಿವಕುಮಾರ್‌ ಅವರಿಗೆ ಸ್ಥಳದಲ್ಲೇ ಆದೇಶಿಸಿದರು.

ಕಠಿಣ ಕ್ರಮ ಭರವಸೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಮೀನಿನ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒಳಗೊಂಡ ಕಡತವನ್ನು ಕೂಡಲೇ ತಾಪಂ ಇಒ ಸುಪರ್ದಿಗೆ ನೀಡಲು ಪಿಡಿಒಗೆ ಸೂಚಿಸಿ ಗ್ರಾಮದಲ್ಲಿ ಗ್ರಾಮಠಾಣೆಯ ಜಾಗ ಎಷ್ಟಿದೆ? ಎಂಬುದರ ಕುರಿತು ಮರು ಸರ್ವೆ ನಡೆಸಿ ಸರ್ಕಾರಿ ಜಮೀನು ಕಬಳಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಮೀಲಾಗಿದ್ದರೆ ಅವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಜಿಪಂ ಸಿಇಒ ಭರವಸೆ ನೀಡಿದರು.

ಮೊಕದ್ದಮೆ ದಾಖಲಿಸಲು ಸೂಚನೆ: ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ವಾದಿ-ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ತೀವ್ರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ತಾಪಂ ಇಒಗೆ ಸೂಚಿಸಿದರು. ಪ್ರಕರಣ ಸಂಬಂಧ ಈಗಾಗಲೇ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ಮಾಹಿತಿ ನೀಡಬೇಕೆಂದು ಎಎಸ್‌ಐ ಅವರಿಗೆ ಸೂಚಿಸಿದರು.

ಭಯದ ವಾತಾವರಣ: ಪ್ರತಿಭಟನಾಕಾರರೊಂದಿಗೆ ಮುಕ್ತವಾಗಿ ಮಾತನಾಡಿದ ಜಿಪಂ ಸಿಇಒ, ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿದರಲ್ಲದೇ ಗ್ರಾಮದಲ್ಲಿ ಮಹಿಳೆಯರಿಗೆ ಆಗುತ್ತಿರುವ ತೊಂದರಗಳೇನು? ಕಾರಣಕರ್ತರು ಯಾರು ಎಂದು ತಿಳಿದುಕೊಂಡರು. ಇದೇ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು ಗ್ರಾಪಂ ಸದಸ್ಯ ಚಂದ್ರಶೇಖರ್‌ ಅವರ ದೌರ್ಜನ್ಯ ಮತ್ತು ದಬ್ಟಾಳಿಕೆ ಹೆಚ್ಚಾಗಿದೆ. ಭಯದ ವಾತಾವರಣದಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲುತೋಡಿಕೊಂಡರು.

Advertisement

ಪ್ರಾಂತ ರೈತ ಸಂಘದ ಮುಖಂಡ ಮಳ್ಳೂರು ಶಿವಣ್ಣ, ಗ್ರಾಪಂ ಅಧ್ಯಕ್ಷೆ ರಾಧಾ, ಕಾರ್ಯದರ್ಶಿ ಕೃಷ್ಣಪ್ಪ, ಪಿಡಿಒ ಮಮತಾ, ಮಳ್ಳೂರು ಗಿರೀಶ್‌, ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ವೆಂಕಟಸ್ವಾಮಿ, ಚೌಡಸಂದ್ರ ಶ್ರೀನಿವಾಸ್‌, ದೇವರಾಜ್‌, ಜಗನ್ನಾಥ್‌, ಬಾಬು, ನಾರಾಯಣಸ್ವಾಮಿ, ಅನಿತಾ, ಅಮೃತ, ರತ್ನಮ್ಮ, ಗೌರಮ್ಮ, ರಾಧ ಉಪಸ್ಥಿತರಿದ್ದರು.

ಜಿಪಂ ಸಿಇಒ ಭರವಸೆ – ಧರಣಿ ಅಂತ್ಯ: ಅಂಕತಟ್ಟಿ ಗ್ರಾಮದಲ್ಲಿ ಗ್ರಾಮಠಾಣಾ ಜಾಗದ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಜಿಪಂ ಸಿಇಓ ಫೌಝೀಯಾ ತರುನ್ನುಮ್‌ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳ್ಳೂರು ಗ್ರಾಪಂ ಮುಂದೆ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಗ್ರಾಮಸ್ಥರು ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next