Advertisement

ಪತ್ನಿ ಶವದ ಜತೆ ವಾರ ಕಳೆದ ಅನಾರೋಗ್ಯ ಪತಿ!

11:20 AM Jul 16, 2018 | |

ಕಾರವಾರ : ಪತ್ನಿ ಕುಳಿತಲ್ಲೇ ಜೀವ ಬಿಟ್ಟಿದ್ದರೂ ಹಾಸಿಗೆಯಲ್ಲಿ ಮಲಗಿದ್ದ ಪತಿಗೆ ಮೇಲೇಳಲಾಗಲಿಲ್ಲ. ಹೊರ ಜಗತ್ತಿಗೆ ಪತ್ನಿ ಸಾವಿನ ಸುದ್ದಿ ಕೂಗಿ ಹೇಳುವಷ್ಟು ಶಕ್ತಿಯೂ ಆತನಲ್ಲಿರಲಿಲ್ಲ. ವಾರದಿಂದ ಅನ್ನವಿಲ್ಲ, ನೀರಿಲ್ಲ. ಸುತ್ತಮುತ್ತಲ ಜನವೂ ಏನಾಯಿತೆಂದು ಕುತೂಹಲಕ್ಕೂ ಮಾತನಾಡಿಸಲಿಲ್ಲ.

Advertisement

ಅಕ್ಕಪಕ್ಕದವರಿಗೆ, ಕೊನೆಯ ಪಕ್ಷ ನಾಲ್ಕು ಜನ ನಿಲ್ಲುವ ಅಂಗಡಿಯವರಿಗೆ ವಾರದಿಂದ ಮನೆಯೊಂದರ ಬಾಗಿಲು ತೆರಿದಿಲ್ಲ ಎಂದೂ ಗಮನಿಸಲಿಲ್ಲ! ಇಂತಹ ಹೃದಯವಿದ್ರಾವಕ ಘಟನೆ ನಡೆದದ್ದು ಕಾರವಾರ ನಗರದ ನ್ಯೂ ಕೆಎಚ್‌ಬಿ ಕಾಲೋನಿಯಲ್ಲಿ. ಸದಾ ದುಡಿದು ಬದುಕುತ್ತಿದ್ದ ಗಿರಿಜಾ ಮಡಿವಾಳ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಪತಿ ಆನಂದು ಅವರನ್ನು ಸಹ ಸಾಕಿ ಸಲಹುತ್ತಿದ್ದರು. ಮಕ್ಕಳಿಲ್ಲದ ಈ ದಂಪತಿ ಸ್ವಾಭಿಮಾನದಿಂದ ಬದುಕುತ್ತಿದ್ದರು.

ಆದರೆ ಈಚೆಗೆ ಪತಿ ಆನಂದು ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಕಾಯಿಲೆಯ ಸಂಬಂಧ ಹಾಸಿಗೆ
ಹಿಡಿದಿದ್ದರು. ಮನೆಗೆಲಸ ಮಾಡಿ ಪತಿಯನ್ನು ಗಿರಿಜಾ ಸಾಕುತ್ತಿದ್ದರು. ಅದೇನಾಯಿತೋ ಗೊತ್ತಿಲ್ಲ ವಾರದಿಂದ ಗಿರಿಜಾ ಸಹ ಮನೆಯಿಂದ ಹೊರ ಬಂದಿರಲಿಲ್ಲ. ಮನೆ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಮನೆ ಮಾಲಕರು ಕರೆ ಮಾಡಿದರೂ ದೂರವಾಣಿ ರಿಂಗಾಗುತ್ತಿದ್ದುದು ಬಿಟ್ಟರೆ ಅದನ್ನು ಎತ್ತಲು ಗಿರಿಜಾ ಮಡಿವಾಳ ಬದುಕಿರಲಿಲ್ಲ. ಪತಿ ಆನಂದು ಅವರಿಗೆ ಮೊಬೈಲ್‌ ಕರೆಗೆ ಪ್ರತಿಕ್ರಿಯಿಸುವಷ್ಟು ಶಕ್ತಿಯೂ ಇರಲಿಲ್ಲ. ಹಾಗಾಗಿ ಹೊರ ಜಗತ್ತಿಗೆ ಆ ಮನೆಯಲ್ಲಿನ ಸಂಗತಿಗಳು ಗೊತ್ತೇ ಆಗಲಿಲ್ಲ.

ಮೃತಪಟ್ಟು ವಾರವಾದ ಆನಂತರ ಸಹೋದರ ಸುಬ್ರಮಣ್ಯ ಮಡಿವಾಳ ಹೊನ್ನಾವರದ ನಗರೆ ಗ್ರಾಮದಿಂದ ಕಾರವಾರಕ್ಕೆ ರವಿವಾರ ಆಗಮಿಸಿ ಮನೆಯ ಕದ ಬಡಿದಾಗ ಮನೆಯ ಬಾಗಿಲು ತೆರೆಯಲಿಲ್ಲ. ಮನೆಯ ಮೇಲಿನ ತಗಡನ್ನು ಸರಿಸಿ ನೋಡಿದಾಗ ಮನೆಯಲ್ಲಿ ಸಾವಾಗಿದೆ ಎಂಬ ಅನುಮಾನ ಬಂದಿದೆ. 

ಪೊಲೀಸರಿಗೆ ಸುದ್ದಿ ತಿಳಿಸಿ ಮನೆಯ ಬಾಗಿಲನ್ನು ಅವರಿಂದಲೇ ತೆಗೆಸಿದಾಗ ಸಹೋದರಿ ಗಿರಿಜಾ ಮೃತಪಟ್ಟು ವಾರ ಮೀರಿತ್ತು. ಹಾಸಿಗೆ ಹಿಡಿದಿದ್ದ ಪತಿಯ ಪಕ್ಕದಲ್ಲೇ ಆಕೆ ಶವವಾಗಿದ್ದಳು. ಪತಿ ಆನಂದು ಅರೆಪ್ರಜ್ಞಾವಸ್ಥೆಯಲ್ಲಿದ್ದ. ಗಿರಿಜಾ ಅವರ ಮೃತದೇಹ ಕೊಳೆತು ಹೋಗಿತ್ತು. ಆಹಾರ-ನೀರು ಇಲ್ಲದೇ ಹಾಸಿಗೆಯಲ್ಲೇ ಮಲಗಿದ್ದ ಆನಂದು ಕಣಜಗೇರಿ ಅವರನ್ನು ಕಾರವಾರ ಮೆಡಿಕಲ್‌ ಕಾಲೇಜು ಅಧೀನದ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next