ಇಳಕಲ್ಲ: ಗರ್ಭಾಶಯ ಕ್ಯಾನ್ಸರ್ ರೋಗದ ತೊಂದರೆಯಿಂದ ಬಳಲುತ್ತಿದ್ದ ರೋಗಿಗೆ ಲ್ಯಾಫ್ರೋಸ್ಕೋಪಿ ತಜ್ಞ ಡಾ| ಶ್ರೀಕಾಂತ ಸಾಕಾ ಹಾಗೂ ಪ್ರಸೂತಿ ಹಾಗೂ ಬಂಜೆತನ ನಿವಾರಣಾ ತಜ್ಞೆ ಡಾ| ಆರತಿ ಸಾಕಾ ಚಿಕಿತ್ಸೆ ನೀಡಿ ಯಶಸ್ಸು ಕಂಡಿದ್ದಾರೆ.
ಸಾಮಾನ್ಯವಾಗಿ ಮುಟ್ಟು ನಿಂತು ಹೋದ ಮೇಲೂ ಬಿಳಿ ಹಾಗೂ ಕೆಂಪು ಮುಟ್ಟಿನ ಸಮಸ್ಯೆ ಮರುಕಳಿಸಿದ ಹಿನ್ನೆಲೆಯಲ್ಲಿ ಸದರಿ ರೋಗಿ ಮಹಿಳೆಯನ್ನು ಡಾ| ಆರತಿ ಸಾಕಾ ಪರಿಶೀಲನೆ ನಡೆಸಿದಾಗ ಅಲ್ಲಿ ಗಂಟು ಇರುವುದು ಕಂಡುಬಂದಿತು.ನಂತರ ಅದರ ತುಣುಕನ್ನು ಪರೀಕ್ಷೆಗೆ ಕಳುಹಿಸಿದಾಗ ಅದು ಕ್ಯಾನ್ಸರ್ ಎಂಬುದು ಸಹ ಖಚಿತಪಟ್ಟಿತು.
ಹೆಚ್ಚಿನ ಚಿಕಿತ್ಸೆಗಾಗಿ ರೋಗದ ಹಂತ ಪರಿಶೀಲಿಸಲು ಸಿಟಿ ಸ್ಕ್ಯಾನ್ ಕೈಗೊಳ್ಳಲಾಯಿತು. ಕ್ಯಾನ್ಸರ್ ಮೊದಲ ಹಂತದಲಿರುವುದು ಹಾಗೂ ಅದು ಯಾವುದೇ ಅಂಗಗಳಿಗೆ ಹರಡಿರದಿರುವುದು ತಿಳಿದು ಬಂದಿತು. ಇದನ್ನು ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯ ಎಂಬುದನ್ನು ಖಚಿತ ಪಡಿಸಿಕೊಂಡರು.
ಇಂತಹ ಶಸ್ತ್ರಚಿಕಿತ್ಸೆಯನ್ನು ಓಪನ್ ಸರ್ಜರಿ ಮಾಡದೇ ಪುಣೆ ಟೆಕ್ನಿಕ್ ಎಂದೇ ಹೆಸರಾದ ಲ್ಯಾಪ್ರೋಸ್ಕೋಪಿಕ್
ಲ್ಯಾಫ್ರೋಸ್ಕೋಪಿ ರ್ಯಾಡಿಕಲ್ ಹಿಷ್ಟರೆಕ್ಟಮಿ (ಗರ್ಭಾಶಯದ ಕ್ಯಾನ್ಸರ್) 5 ರಂಧ್ರಗಳ ಮುಖಾಂತರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಒಂದೇ ದಿನದಲ್ಲಿ 52 ವರ್ಷದ ರೋಗಿ ಎದ್ದು ಕುಳಿತರಲ್ಲದೇ ನಾಲ್ಕೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು.
ಶಸ್ತ್ರಚಿಕಿತ್ಸೆಗೆ ಅರವಳಿಕೆ ತಜ್ಞ ಡಾ| ಶರಣ ಬೇವೂರ, ಡಾ| ಮಹಾಂತೇಶ ಎಂ., ಸಹಾಯಕರಾದ ಸೋಮು ಕುಂಬಾರ, ಶಿವು ಸಂಗಮ ಹಾಗೂ ಅನ್ನಪೂರ್ಣ ಹಾಗೂ ಪ್ರಶಾಂತ ಟೆಂಗುಂಟಿ ಅವರ ಸೇವೆಯನ್ನು ಡಾ| ಸಾಕಾ ದಂಪತಿಗಳು ಸ್ಮರಿಸಿದರು.