ಚಿತ್ರದುರ್ಗ: ರಾಜ್ಯದಲ್ಲಿ 60 ರಿಂದ 80 ಲಕ್ಷ ನೇಕಾರರಿದ್ದರೂ, ವಿಧಾನ ಸೌಧದಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವವರು ಇಲ್ಲದೇ ಸರ್ಕಾರದ ಸೌಲಭ್ಯಗಳಿಂದ ವಂಚಿರಾಗಿದ್ದೇವೆ ಎಂದು ರಾಣಿಬೆನ್ನೂರು ತುಮ್ಮಿನಕಟ್ಟೆ ಪದ್ಮಶಾಲಿ ಗುರುಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಕ್ರೀಡಾ ಭವನದಲ್ಲಿ ಭಾನುವಾರ ಕಲಾ ನೇಕಾರ ಸಂಸ್ಥೆಯ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮದು ಹಿಂದುಳಿದ ಸಮಾಜ. ನಮ್ಮ ಪರವಾಗಿ ಮಾತನಾಡುವವರು ಇಲ್ಲ. ನಮ್ಮಲ್ಲಿ ಜನಸಂಖ್ಯೆ ಹೆಚ್ಚಾಗಿ ಇದ್ದರು ಸಹ ಒಗ್ಗಟು ಇಲ್ಲದೆ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ಹಿಂದೆ ಬಿದ್ದಿದ್ದೇವೆ. ನಮ್ಮ ಪರವಾಗಿ ವಿಧಾನಸೌಧದಲ್ಲಿ ಧ್ವನಿಯನ್ನು ಎತ್ತುವವರು ಇಲ್ಲವಾಗಿದ್ದಾರೆ. ಇದರಿಂದಾಗಿ ನಮ್ಮ ಸಮಾಜದವರು ಹಿಂದೆ ಉಳಿದಿದ್ದಾರೆ. ರಾಜಕೀಯ ಶಕ್ತಿ ಇಲ್ಲವಾದರೆ ಏನು ಪಡೆಯಲು ಸಾಧ್ಯವಿಲ್ಲ ಎಂಬುದು ಈಗ ತಿಳಿಯುತ್ತಿದೆ ಎಂದ ಶ್ರೀಗಳು, ಸರ್ಕಾರವು ಸಹಾ ನಮ್ಮನ್ನು ಕಡೆಗಣಿಸುತ್ತಿದೆ. ಬೇರೆಯವರಿಗೆ ನೀಡಿದ ಸಹಾಯವನ್ನು ನಮ್ಮ ಸಮಾಜಕ್ಕಾಗಲಿ, ಶ್ರೀಮಠಕ್ಕೆ ಆಗಲಿ ನೀಡಿಲ್ಲ. ಈ ಸಾಲಿನ ಆಯವ್ಯಯದಲ್ಲಿ ನೇಕಾರ ಸಮಾಜಕ್ಕೆ ಯಾವ ಸಹಾಯವನ್ನು ಮುಖ್ಯಮಂತ್ರಿಗಳು ಮಾಡಿಲ್ಲ. ಇದರ ಬಗ್ಗೆ ಅತಿ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ವಿವಿಧ ಸಮಾಜದವರು ತಮ್ಮ ಸಮಾಜದ ಮೀಸಲಾತಿಗಾಗಿ ಪಾದಯಾತ್ರೆ ಮಾಡಿದ್ದಾರೆ. ನಮ್ಮ ಸಮಾಜವೂ ಸಹ ಸರ್ಕಾರದ ವಿವಿಧ ರೀತಿಯ ಸೌಲಭ್ಯ ಪಡೆಯುವುದಕ್ಕಾಗಿ ಬಾಗಲಕೋಟೆಯಿಂದ ಪಾದಯಾತ್ರೆ ಪ್ರಾರಂಭಿಸುವ ಬಗ್ಗೆ ಆಲೋಚನೆ ಮಾಡುತ್ತಿದೆ ಎಂದು ತಿಳಿಸಿದ ಶ್ರೀ ಪ್ರಭುಲಿಂಗ ಸ್ವಾಮಿಗಳು, ಸರ್ಕಾರ ಅಧಿಕಾರಕ್ಕೆ ಬರುವಾಗ ಮುಖ್ಯಮಂತ್ರಿಗಳು ನೇಕಾರ ಮತ್ತು ರೈತ ಎರಡು ಕಣ್ಣುಗಳಿದ್ದಂತೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ ಅಧಿಕಾರ ಬಂದ ಮೇಲೆ ನಮ್ಮನ್ನು ಮರೆತ್ತಿದ್ದಾರೆ. ಇವರನ್ನು ಎಚ್ಚರಿಸುವ ಕಾರ್ಯವನ್ನು ಸಮಾಜದ ವತಿಯಿಂದ ಮಾಡಬೇಕಿದೆ ಎಂದು ಹೇಳಿದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.
ಚಿತ್ರ ಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಲಾ ನೇಕಾರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟಿ.ಎನ್. ನಾಗೇಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಪ್ರಾಕಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೇಕಾರ ಕಲಾವಿದರು, ಜಿಲ್ಲೆಯಲ್ಲಿ ನಗರಸಭೆ, ಪುರಸಭೆಗೆ ಮತ್ತು ಗ್ರಾಪಂಗೆ ಆಯ್ಕೆಯಾದ ಜನಪ್ರತಿನಿಧಿಗಳನ್ನು ಅಭಿನಂದಿಸಿದ್ದು, ಜಿಲ್ಲೆಯ ನೇಕಾರ ಸಮುದಾಯಗಳ ಅಧ್ಯಕ್ಷರು ಹಾಗೂ ಮುಖಂಡರನ್ನು ಗೌರವಿಸಲಾಯಿತು. ಕೋಲಂನಳ್ಳಿ ಪೀತಾಂಬರ ರಾಘವೇಂದ್ರ, ಪದ್ಮಶಾಲಿ ಕಾಚಾಪುರ, ರಂಗಪ್ಪ ಪಟ್ಟಸಾನಿ, ಸಮಾಜದ ಮುಖಂಡರಾದ ಎಸ್.ಎನ್. ಶಿವರುದ್ರಪ್ಪ, ಎಸ್. ನರಸಿಂಹಮೂರ್ತಿ, ಪದ್ಮಶಾಲಿ ಸಮಾಜದ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಪೊರಾಳ್ ವೆಂಕಟಸ್ವಾಮಿ, ಎಚ್. ರಾಮಸ್ವಾಮಿ ಹಾಗೂ ಪಟ್ಟಸಾಲೆ ಸಮಾಜದ ಎನ್.ಟಿ. ತಿಪ್ಪೇಸ್ವಾಮಿ, ಎಸ್.ಟಿ. ಮಹಾಂತೇಶ, ಎನ್. ಎಂ. ಮಂಜುನಾಥ ಮತ್ತು ಎನ್.ಎಂ. ಚನ್ನಬಸಪ್ಪ ಉಪಸ್ಥಿತರಿದ್ದರು.