2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ಥಾನದಲ್ಲಿನ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ನಡೆಸಿದ ಸರ್ಜಿಕಲ್ ದಾಳಿಗೆ ಯಾವುದೇ ಸಾಕ್ಷಿ ಅಥವಾ ಪುರಾವೆಯಾಗಲಿ ಇಲ್ಲ ಎಂಬ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆ ದೇಶಾದ್ಯಂತ ಸಾರ್ವತ್ರಿಕ ಟೀಕೆಗೆ ಗುರಿಯಾಗಿದೆ.
ಈ ಹಿಂದೆಯೂ ಕಾಂಗ್ರೆಸ್, ಸರ್ಜಿಕಲ್ ದಾಳಿಯ ಕುರಿತಂತೆ ಇದೇ ತೆರನಾದ ಹೇಳಿಕೆಯನ್ನು ನೀಡುವ ಮೂಲಕ ದೇಶವಾಸಿಗಳ ವ್ಯಾಪಕ ಆಕ್ರೋಶವನ್ನು ಎದುರಿಸುವಂತಾಗಿತ್ತು. ಕೈ ನಾಯಕರ ಈ ಅಪ್ರಬುದ್ಧ ಹೇಳಿಕೆಗಳನ್ನು ಆಡಳಿತಾರೂಢ ಬಿಜೆಪಿ ಚುನಾವಣೆ ವೇಳೆ ಅಸ್ತ್ರವನ್ನಾಗಿ ಪರಿಗಣಿಸಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿತ್ತು. ಸಹಜವಾಗಿಯೇ ಇದು ಕಾಂಗ್ರೆಸ್‌ನ ಘೋರ ವೈಫಲ್ಯಕ್ಕೆ ಕಾರಣವಾಗಿತ್ತು. ಇವೆಲ್ಲದರ ಹೊರತಾಗಿಯೂ ಪಾಠ ಕಲಿಯದ ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ದೇಶದ ಭದ್ರತಾ ಪಡೆಗಳು ಮತ್ತವುಗಳ ಕಾರ್ಯಾಚರಣೆಗಳ ಕುರಿತಾಗಿ ನೀಡುತ್ತಿರುವ ಹೇಳಿಕೆಗಳೇ ಕಾಂಗ್ರೆಸ್ ಪಾಲಿಗೆ ಮುಳುವಾಗಿ ಪರಿಣಮಿಸುತ್ತಿವೆ.
ಏತನ್ಮಧ್ಯೆ ದಿಗ್ವಿಜಯ್ ಸಿಂಗ್ ಅವರ ಈ ಬೇಜವಾಬ್ದಾರಿಯುತ ಹೇಳಿಕೆಗೆ ದೇಶಾದ್ಯಂತ ತೀವ್ರ ಪ್ರತಿರೋಧ ಎದುರಾಗುತ್ತಿರುವಂತೆಯೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಸ್ಪಷ್ಟನೆ ನೀಡಿ, ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆ ಹಾಸ್ಯಾಸ್ಪದವಾಗಿದ್ದು ಇದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯವಲ್ಲ. ದೇಶದ ಸಶಸ್ತ್ರ ಪಡೆಗಳ ಬಗೆಗೆ ಪಕ್ಷಕ್ಕೆ ಅಪಾರ ಗೌರವವಿದ್ದು ತಮ್ಮ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಅಮೋಘವಾಗಿ ನಿರ್ವಹಿಸಿವೆ ಎನ್ನುವ ಮೂಲಕ ವಿವಾದದಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅಷ್ಟು ಮಾತ್ರವಲ್ಲದೆ ಸಶಸ್ತ್ರ ಪಡೆಗಳು ನಡೆಸಿರುವ ಕಾರ್ಯಾಚರಣೆಗಳ ಬಗೆಗೆ ಯಾವುದೇ ಸಾಕ್ಷ್ಯ ಅಥವಾ ಪುರಾವೆ ನೀಡುವ ಅಗತ್ಯವಿಲ್ಲ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವನ್ನೂ ಮಾಡಿದ್ದಾರೆ ರಾಹುಲ್.
ಆದರೆ ಇಂಥ ಸ್ಪಷ್ಟನೆಯಿಂದ ಪಕ್ಷಕ್ಕಾದ ಹಾನಿಯನ್ನು ಸರಿಪಡಿಸುವುದು ಕಷ್ಟಸಾಧ್ಯ. ಕೈ ನಾಯಕರ ಇಂತಹ ಹೇಳಿಕೆಗಳು ಮತ್ತು ಬಾಲಿಶ ವರ್ತನೆಗಳೇ ಪಕ್ಷವನ್ನು ದೇಶದ ರಾಜಕೀಯ ಇತಿಹಾಸದ ಪುಟಗಳನ್ನು ಸೇರುವಂತೆ ಮಾಡುತ್ತಿವೆ ಎಂಬುದನ್ನು ಪಕ್ಷದ ವರಿಷ್ಠರು ಮೊದಲು ಮನಗಾಣಬೇಕಿದೆ. ಬೇಕಾಬಿಟ್ಟಿಯಾಗಿ ನಾಲಗೆ ಹರಿಯ ಬಿಡುವ ನಾಯಕರಿಗೆ ಕಠಿನ ಎಚ್ಚರಿಕೆಯನ್ನು ನೀಡುವ ಮೂಲಕ ಸ್ಪಷ್ಟ ಸಂದೇಶವೊಂದನ್ನು ರವಾನಿಸುವ ಕೆಲಸ ಪಕ್ಷದಿಂದಾಗಬೇಕಿದೆ. ದೇಶದ ಜನತೆ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳಲ್ಲಿನ ಲೋಪದೋಷಗಳು, ಸರಕಾರದ ನಡೆಗಳ ಬಗೆಗೆ ವಿಪಕ್ಷವಾಗಿ ಜನರ ಧ್ವನಿಯಾಗಬೇಕಿರುವ ಕಾಂಗ್ರೆಸ್ ನಾಯಕರು ಇಂತಹ ಅಸಂಬದ್ಧ, ಅಸಮಂಜಸ ಹೇಳಿಕೆಗಳ ಮೂಲಕ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಹಿರಿಯ ನಾಯಕರೆನಿಸಿಕೊಂಡವರು ಪದೇ ಪದೆ ಹಳೆಯ ವಿಷಯಗಳನ್ನು ಕೆದಕಲು ಹೋಗಿ ನಗೆಪಾಟಲಿಗೀಡಾಗುತ್ತಿರುವುದು ವಿಪರ್ಯಾಸವೇ ಸರಿ.
ಪ್ರಸಕ್ತ ವರ್ಷ ದೇಶದ 9 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತಿದ್ದು ಇಂಥ ಸಂದರ್ಭದಲ್ಲಿ ಕೈ ನಾಯಕರು ಒಂದಿಷ್ಟು ಎಚ್ಚರಿಕೆ ಯಿಂದ ಪಕ್ಷ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಬದಲು ಅನಾವಶ್ಯಕವಾಗಿ ಮುಜುಗರಕ್ಕೀಡಾ ಗುತ್ತಿರುವುದು ದುರಂತವೇ ಸರಿ. ಕಾಂಗ್ರೆಸ್‌ನ ಅಧ್ಯಕ್ಷರು ಮತ್ತು ಹಿರಿಯರು ಈ ನಾಯಕರ ನಾಲಗೆಗೆ ಕಡಿವಾಣ ಹಾಕಬೇಕಿರುವುದು ಈಗಿನ ತುರ್ತು.