ಮಹಾಲಿಂಗಪುರ : ಕಳೆದ ವರ್ಷದ ನವೆಂಬರ್ ನಲ್ಲಿ ಕೇಂದ್ರ ಲೋಕಸೇವಾ ಆಯೋಗವು ನಡೆಸಿದ IFS (ಭಾರತೀಯ ಅರಣ್ಯ ಸೇವೆ) ಪರೀಕ್ಷೆಯಲ್ಲಿ ಸಮೀಪದ ಅಕ್ಕಿಮರಡಿ(ಮುಧೋಳ ತಾಲೂಕು) ಗ್ರಾಮದ ಪ್ರಗತಿಪರ ರೈತರಾದ ಸದಾಶಿವ ಮತ್ತು ಸುರೇಖಾ ಕಂಬಳಿ ದಂಪತಿಗಳ ಸುಪುತ್ರನಾದ ಪಾಂಡುರಂಗ ಸದಾಶಿವ ಕಂಬಳಿ ಅವರು ದೇಶಕ್ಕೆ 42ನೇ ರ‌್ಯಾಂಕ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.
ಗ್ರಾಮೀಣ ಭಾಗದ ರೈತನ ಮಗನಾದ ಪಾಂಡುರಂಗ ಅವರು 1 ರಿಂದ 5ನೇ ತರಗತಿ ಶಿಕ್ಷಣವನ್ನು ಸೈದಾಪೂರ ಶಿವಲಿಂಗೇಶ್ವರ ಪ್ರಾಥಮಿಕ ಶಾಲೆಯಲ್ಲಿ, 6 ರಿಂದ 10ನೇ ತರಗತಿವರೆಗೆ ಕುಳಗೇರಿಯ ನವೋದಯ ಶಾಲೆಯಲ್ಲಿ ಕಲಿತಿದ್ದಾರೆ. ಪಿಯುಸಿ ಶಿಕ್ಷಣವನ್ನು ಯಲ್ಲಟ್ಟಿಯ ಕೊಣ್ಣೂರ ಪಿಯು ಕಾಲೇಜಿನಲ್ಲಿ, ಪದವಿ ಮತ್ತು ಇಂಜಿನಿಯರಿಂಗ್ ಶಿಕ್ಷಣವನ್ನು ಬೆಂಗಳೂರಿನ ಆರ್.ವ್ಹೀ.ಕಾಲೇಜಿನಲ್ಲಿ ಮುಗಿಸಿದ್ದಾರೆ. ಎರಡು ವರ್ಷ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ನೌಕರಿ ಮಾಡಿದ್ದಾರೆ. ನಂತರ ನೌಕರಿ ಬಿಟ್ಟು ದೇಶದ ಅತ್ಯುನ್ನತ ಯುಪಿಎಸ್ ಸಿ ಪರೀಕ್ಷೆ ಎದುರಿಸುವ ನಿರ್ಧಾರ ಕೈಗೊಂಡು, ಯಾವುದೇ ಕೋಚಿಂಗ್ ಇಲ್ಲದೇ ಸ್ವಸಾಮರ್ಥ್ಯದಿಂದ ಕಠಿಣ ಅಭ್ಯಾಸ ಮಾಡಿದ ಪಾಂಡುರಂಗ ಅವರು ಕಳೆದ ವರ್ಷದ ನವೆಂಬರ್ ನಲ್ಲಿ ಜರುಗಿದ ಯುಪಿಎಸ್ ಸಿಯ (IFS-ಭಾರತೀಯ ಅರಣ್ಯ ಸೇವೆ) ಪರೀಕ್ಷೆಯನ್ನು ಬರೆದಿದ್ದರು.
ಇಂದು (ಮೇ 8) IFS ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು. ಗ್ರಾಮೀಣ ಭಾಗದ ರೈತನ ಮಗನಾದ ಪಾಂಡುರಂಗ ಸದಾಶಿವ ಕಂಬಳಿ ಅವರು ಭಾರತ ದೇಶಕ್ಕೆ 42ನೇ ರ‌್ಯಾಂಕ್ ಪಡೆಯುವ ಮೂಲಕ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಕೀರ್ತಿ ಯನ್ನು ದೇಶಾದ್ಯಂತ ಬೆಳಗಿಸಿದ್ದಾರೆ. ಬಾಕ್ಸ : ಯಾವುದೇ ಕೋಚಿಂಗ್ ಇಲ್ಲದೇ ಎರಡು ವರ್ಷಗಳ ಕಾಲ ಸ್ವ ಅಧ್ಯಯನ ಮಾಡಿ ಪರೀಕ್ಷೆ ಎದುರಿಸಿದ್ದೆನೆ. ಯುಪಿಎಸ್ ಸಿಯ IFS ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೆ ದೇಶಕ್ಕೆ 42 ನೇ ರ‌್ಯಾಂಕ್ ಪಡೆದಿರುವದಕ್ಕೆ ಬಹಳ ಸಂತೋಷವಾಗಿದೆ.
ರೈತನಾಗಿದ್ದರು ಸಹ ನಮ್ಮ ತಂದೆ ಹಾಗೂ ಮನೆಯ ಸದಸ್ಯರು ಮೊದಲಿನಿಂದಲೂ ನನ್ನ ಶಿಕ್ಷಣಕ್ಕೆ ನೀಡಿದ ಸಹಾಯ ಸಹಕಾರದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ.
– ಪಾಂಡುರಂಗ ಸದಾಶಿವ ಕಂಬಳಿ. ಯುಪಿಎಸ್ ಸಿಯ IFS ಪರೀಕ್ಷೆಯಲ್ಲಿ ದೇಶಕ್ಕೆ 42ನೇ ರ್ಯಾಂಕ್ ಪಡೆದ ಅಕ್ಕಿಮರಡಿ ಗ್ರಾಮದ ಯುವಕ.