Advertisement

IFFI Goa: ಇಫಿ ಚಿತ್ರೋತ್ಸವ-ನಟನೆ ಎಂದರೆ ಏನು? ಈ ಮೂವರ ಮಾತಿನಲ್ಲಿ ಕೇಳಿ…

03:45 PM Nov 24, 2023 | Team Udayavani |

ಪಣಜಿ, ನ. 24: ನಟನೆ ಎಂದರೆ ಏನು? ಯಾರ್ಯಾರು ಏನೇನು ಹೇಳಿಯಾರು? ಎಂಬುದಕ್ಕೆ ಇಲ್ಲಿದೆ ಉತ್ತರ.
ಪ್ರತಿಯೊಬ್ಬ ನಟನೂ ತನ್ನದೇ ನೆಲೆಯಲ್ಲಿ ನಟನೆಯನ್ನು ವ್ಯಾಖ್ಯಾನಿಸುತ್ತಾನೆ. ಮೂಲ ಸ್ತರ ಒಂದೇ. ನಟನೆ ಎಂಬುದು ಒಬ್ಬರಿಂದ ಒಬ್ಬರಿಗೆ ಬದಲಾಗುವುದಿಲ್ಲ, ನಟನೆಯ ವ್ಯಾಖ್ಯಾನವಷ್ಟೇ ಬದಲಾಗಬಹುದು.ಇದು ಹೌದೆನಿಸಿದ್ದು ಇಫಿ ಚಿತ್ರೋತ್ಸವದಲ್ಲಿ. ಪ್ರಮುಖ ಮೂರು ಮಂದಿ ನಟರು ವಿವಿಧ ಸಂದರ್ಭಗಳಲ್ಲಿ ನಟನೆಯ ಕುರಿತು ಮಾತನಾಡಿದರು.

Advertisement

ಖ್ಯಾತ ಹಿಂದಿ ಚಿತ್ರನಟ ಪಂಕಜ್ ಕುಮಾರ್ ತ್ರಿಪಾಠಿ ಹೇಳುವಂತೆ, ನಟನೆ ನಾವು ಮತ್ತಷ್ಟು ಒಳ್ಳೆಯ ಮನುಷ್ಯರಾಗಲು ಸಿಗುವ ಅವಕಾಶ. ಯಾವಾಗ ಮತ್ತೊಬ್ಬರ ಪಾತ್ರವನ್ನು ನಾವು ತೊಡುತ್ತೇವೆಯೋ ಆಗ ಅವರ ಆಲೋಚನೆ, ದೃಷ್ಟಿಕೋನ ಹಾಗೂ ಭಾವನೆಗಳನ್ನು ಆರ್ಥೈಸಿಕೊಳ್ಳಲು ಸಾಧ್ಯ. ಆಗ ನಾವು ಮತ್ತಷ್ಟು ಒಳ್ಳೆಯ ಮನುಷ್ಯರಾಗಬಹುದುʼ ಎನ್ನುತ್ತಾರೆ.

ಒಬ್ಬ ನಟನಿಗೆ ಯಾವುದೇ ಪಾತ್ರಕ್ಕೆ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂಥ ಸ್ವಭಾವ (ಹೊಂದಾಣಿಕೆ) ಇರಬೇಕು. ಜತೆಗೆ ಮುಕ್ತವಾಗಿರಬೇಕು. ಮನಸ್ಸು ಮತ್ತು ದೇಹ ಎರಡರಲ್ಲೂ ಈ ಸ್ವಭಾವ ಇದ್ದರೆ ಯಾವುದೇ ಪಾತ್ರಕ್ಕೂ ಒಗ್ಗಿಸಲು ಸಾಧ್ಯ. ಒಬ್ಬ ಒಳ್ಳೆಯ ನಟನಾಗಬೇಕೆನ್ನುವವನಿಗೆ ಅದು ಅನಿವಾರ್ಯ ಎಂಬುದೂ ತ್ರಿಪಾಠಿಯವರ ಅಭಿಪ್ರಾಯ.

ತ್ರಿಪಾಠಿಯವರ ಪ್ರಕಾರ, ʼಒಬ್ಬ ನಟ ತನ್ನ ಪಾತ್ರದ ಮೂಲಕ ಪ್ರಯೋಗಶೀಲತೆಗೆ ತನ್ನನ್ನು ತಾನು ಒಡ್ಡಿಕೊಳ್ಳಲು ಅವಕಾಶವಿರುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಷ್ಟೇ. ಹಾಗೆಯೇ ಪ್ರತಿ ನಟನೂ ಪ್ರಯೋಗಶೀಲತೆಯ ಅಗತ್ಯ-ಸಾಧ್ಯತೆ ಮತ್ತು ಸ್ಟಾರ್ ಗಳೆಂಬುದು ಜನರಲ್ಲಿ ಹುಟ್ಟಿಸುವ ನಿರೀಕ್ಷೆಗಳು ಹಾಗೂ ಅವುಗಳಿಂದ ಪ್ರಯೋಗಶೀಲತೆಗೆ ಎದುರಾಗುವ ಅಡ್ಡಿಗಳೆರಡನ್ನೂ ಅರಿತಿರಬೇಕು ಎನ್ನುತ್ತಾರೆ.

Advertisement

ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಹೇಳುವ ಪ್ರಕಾರ, ʼನಟನಿಗೆ ತನಗೇನು ಗೊತ್ತಿದೆ, ತನಗೇನು ಗೊತ್ತಿಲ್ಲ ಎಂಬುದರ ಅರಿವಿರಬೇಕು. ಒಂದುವೇಳೆ ಗೊತ್ತಿರುವುದರ ಬಗೆಗಿಂತ ಗೊತ್ತಿಲ್ಲ ಎನ್ನುವುದರ ತಿಳಿವು ಇರಲೇಬೇಕುʼ ಎಂಬುದು.
ʼನಾನು ಆಯಾ ಪಾತ್ರದ ಕುರಿತಾದ ನನ್ನ ಸಿನಿಮಾ ತಂಡದ ಚರ್ಚೆ, ವಾದ-ಪ್ರತಿವಾದ ಇತ್ಯಾದಿಗಳಿಂದ ಭಾಗಿಯಾಗಿ ತಯಾರಿ ನಡೆಸುತ್ತೇನೆ. ಅದರ ಮೂಲಕ ಕಲಿತುಕೊಳ್ಳುತ್ತೇನೆʼ ಎಂಬುದು ವಿಜಯ್ ಸೇತುಪತಿಯವರ ಅಭಿಪ್ರಾಯ. ಜಗತ್ತೇ ರಂಗಶಾಲೆಯಾಗಿರುವಾಗ ಅಲ್ಲಿಂದ ಕಲಿಯುವುದಷ್ಟು ಬಹಳಷ್ಟಿದೆ.

ಕೆ.ಕೆ.ಮೆನನ್

ನಟನೆ ಮಾಡುವುದೆಂದರೆ ನಮ್ಮ ಮನಸ್ಸನ್ನು ಮುಕ್ತವಾಗಿ ಹರಿಯಲು ಬಿಡಬೇಕು. ಅದರಷ್ಟಕ್ಕೆ ಅದು ಹರಿದರೆ ಎಲ್ಲವೂ ಸರಾಗ. ಉಳಿದಂತೆ ನಟನೆಗೆ ಇದಮಿತ್ಥಂ ಎನ್ನುವ ಹಾಗೆ ಯಾವುದೇ ಸೂತ್ರಗಳಿಲ್ಲವಂತೆ. ಜತೆಗೆ ನಾನು ನಿರ್ದಿಷ್ಟ ಪಾತ್ರಗಳಿಗೇ ಅಂಟಿಕುಳಿತುಕೊಳ್ಳುವುದಿಲ್ಲ. ಸಿಕ್ಕ ಪ್ರತಿ ಅವಕಾಶದಲ್ಲೂ ಹೊಸತಿಗೆ ಪ್ರಯತ್ನಿಸುವೆ ಎಂಬುದು ವಿಜಯ್ ಸೇತುಪತಿ ಪ್ರಕಾರ.
ಚಲನಚಿತ್ರರಂಗಕ್ಕೆ ಬಂದು ಮೂರು ದಶಕಗಳು ಕಳೆದರೂ ಪ್ರತಿ ಸಿನಿಮಾ ಹಾಗೂ ಪ್ರತಿ ಪಾತ್ರಗಳನ್ನು ಅಷ್ಟೇ ಕುತೂಹಲದಿಂದ ನೋಡುತ್ತೇನೆ ಎಂದವರು ಮತ್ತೊಬ್ಬ ಖ್ಯಾತ ನಟ ಕೆ. ಕೆ. ಮೆನನ್. ಅವರ ಪ್ರಕಾರ ಒಬ್ಬ ನಟ ಪಾಲಿಸಬೇಕಾದ ಮೂಲ ನಿಯಮಗಳಲ್ಲಿ ಇದೂ ಒಂದು.

Advertisement

Udayavani is now on Telegram. Click here to join our channel and stay updated with the latest news.

Next