ಪಣಜಿ: ಗೋವಾದಲ್ಲಿ ನಡೆಯುತ್ತಿರುವ 54 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಕನ್ನಡ ಚಲನಚಿತ್ರಕ್ಕಾಗಿ ನಟ ರಿಷಬ್ ಶೆಟ್ಟಿ ರವರಿಗೆ ಸ್ಪೆಶಲ್ ಜ್ಯೂರಿ ಅವಾರ್ಡ ನೀಡಿ ಗೌರವಿಸಲಾಗಿದೆ. ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ರವರು ಗೋವಾ ರಾಜಧಾನಿ ಪಣಜಿ ಸಮೀಪದ ಬಾಂಬೋಲಿಂ ಬಳಿಯ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ನಡೆದ 54 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಮಾತನಾಡಿ-ಗೋವಾದಲ್ಲಿ ಕಳೆದ 9 ದಿನಗಳ ಕಾಲ 54 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 78 ದೇಶಗಳ 270 ಚಲನಚಿತ್ರಗಳು ಪ್ರದರ್ಶನಗೊಂಡಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ವಿವಿಧ ದೇಶಗಳ ಪ್ರತಿನಿಧಿಗಳು ಪ್ರೀತಿ ವಿಶ್ವಾಸ ತೋರಿದ್ದಾರೆ. ಈ ಎಲ್ಲ ದೇಶಗಳ ಪ್ರತಿನಿಧಿಗಳಿಗೆ ಗೋವಾ ರಾಜ್ಯದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. ಗೋವಾ ರಾಜ್ಯವು ಕೇವಲ ಪ್ರವಾಸಿ ತಾಣಗಳಿಗೆ ಮಾತ್ರವಲ್ಲದೆಯೇ ವಿವಿಧ ಮಹೋತ್ಸವಗಳಿಗೂ ಕೂಡ ಪ್ರಸಿದ್ಧಿ ಪಡೆದಿದೆ. ಗೋವಾದ ಸುಂದರ ಪ್ರವಾಸಿ ತಾಣವು ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಗೋವಾದಲ್ಲಿ ನಡೆಯುತ್ತಿರುವ 54 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಕಾಂತಾರ” ಕನ್ನಡ ಚಲನಚಿತ್ರಕ್ಕಾಗಿ ನಟ ರಿಷಬ್ ಶೆಟ್ಟಿಗೆ ಸ್ಪೇಶಲ್ ಜ್ಯೂರಿ ಪುಸ್ಕಾರ ನೀಡಿ ಗೌರವಿಸಲಾಗಿದೆ. ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಟರ್ಕಿಶ್ ನಿರ್ದೇಶಕ ರೆಗರ್ ಆಜಾದ್ ಕಾಯಾ ಅವರ “ವೆನ್ ದಿ ಸೀಡ್ಲಿಂಗ್ಸ್ ಗ್ರೋ” ಚಿತ್ರ ಪಡೆದುಕೊಂಡಿದೆ. ‘ಪಂಚಾಯತ್ ಸೀಸನ್ 2’ ಇಫಿನಲ್ಲಿ ಅತ್ಯುತ್ತಮ ಒಟಿಟಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಡ್ರಿಫ್ಟ ಚಲನಚಿತ್ರಕ್ಕೆ ಐಸಿಎಫ್‍ಟಿ ಗಾಂದಿ ಯುನೆಸ್ಕೊ ಅವಾರ್ಡ,ಎಂಡ್ಲೆಸ್ ಬಾರ್ಡರ್ಸ ಚಲನಚಿತ್ರಕ್ಕೆ ಗೋಲ್ಡನ್ ಪಾಕಾಕ್ ಪ್ರಶಸ್ತಿ, ಅತ್ಯುತ್ತಮ ನಟಿ ಪ್ರಶಸ್ತಿ ಮೆಲಾನಿ ಥಿಯೆರ್ರಿ ಗೆ ಲಭಿಸಿದೆ. ಹಾಲಿವುಡ್ ನಟ ಮೈಕೆಲ್ ಡಗ್ಲಾಸ್ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಬ್ಲಾಗಾಸ್ ಲೆಸನ್ಸ ಚಿತ್ರಕ್ಕಾಗಿ ಉತ್ತಮ ನಟ ಪ್ರಶಸ್ತಿಯನ್ನು ಪೌರಿಯಾ ರಹಿಮಿ ಸ್ಯಾಮ್ ರವರಿಗೆ ನೀಡಿ ಗೌರವಿಸಲಾಗಿದೆ. ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ಟೀಫನ್ ಕೊಮಾಂಡರ್‍ಗೆ ನೀಡಿ ಗೌರವಿಸಲಾಗಿದೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ವಿವಿಧ ದೇಶಗಳ ಚಲನಚಿತ್ರ ಕ್ಷೇತ್ರದ ಕಲಾವಿದರು, ವಿವಿಧ ದೇಶಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.