ಪಣಜಿ: ಯಾವುದೋ ರಾಜಕೀಯ ಕಾರಣಗಳಿಗಾಗಿ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಗೆ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲೇ ಅವರ ಸಾಹಸವನ್ನು ಜನರಿಗೆ ತಿಳಿಸುವ ಕಾಲ ಬಂದಿದೆ ಎಂದಿದ್ದಾರೆ ವೀರ ಸಾವರ್ಕರ್ ಸಿನಿಮಾದ ನಿರ್ದೇಶಕ ಹಾಗು ನಟ ರಣದೀಪ್ ಹೂಡಾ.
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ೫೫ ನೇ ಆವೃತ್ತಿಯಲ್ಲಿ ತಮ್ಮ ಚಿತ್ರ ಸ್ವಾತಂತ್ರ್ಯ ವೀರ ಸಾವರ್ಕರ್ ನ ಪ್ರದರ್ಶನದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ವಿವರಿಸುತ್ತಾ, “ಇಂಥ ಹಲವಾರು ಸ್ವಾತಂತ್ರ್ಯ ಯೋಧರ ಕಥೆಗಳು ತೆರೆ ಮರೆಗೆ ಸರಿದಿವೆ. ಅಜ್ಞಾತ ಸ್ಥಿತಿಯಲ್ಲಿರುವ ಹಲವರ ಕಥೆಗಳನ್ನು ಹೇಳಬೇಕಿದೆʼ ಎಂದರು.
ಸಾವರ್ಕರ್ ಕುರಿತ ಸಿನಿಮಾದ ಬಗ್ಗೆ ವಿವರಿಸಿ, ಸಾರ್ವಜನಿಕ ಚರ್ಚೆಯಲ್ಲಿ ಆಗಾಗ್ಗೆ ಪ್ರಸ್ತಾಪವಾಗುತ್ತಿದ್ದ ಸಿನಿಮಾ ಮಾಡಬೇಕೆಂದೆನಿಸಿತ್ತು. ಮೊದಲು ಇದಕ್ಕೆ ನಾನು ಸಾವರ್ಕರ್ ಪಾತ್ರಕ್ಕೆ ಆಯ್ಕೆಯಾಗಿದ್ದೆ. ನಟನೆಗೆ ಪೂರಕವಾಗಿ ಅವರ ಕುರಿತಾದ ಕೃತಿಗಳನ್ನು ಓದುತ್ತಾ ಹೋದಂತೆ, ಹೆಚ್ಚಿನ ಮಾಹಿತಿ ಶೋಧದಲ್ಲಿ ತೊಡಗಿದಂತೆ ವಿಶೇಷ ಎನಿಸಿತು. ನಾನೇ ನಿರ್ದೇಶನ ಮಾಡಲು ನಿರ್ಧರಿಸಿದೆ. ಜನರಿಗೆ ತಿಳಿಯದ ಸಾಕಷ್ಟು ಸಂಗತಿಗಳನ್ನು ಹಾಗೂ ಒಬ್ಬ ತೆರೆ ಮರೆಯಲ್ಲಿರುವ ನಾಯಕನನ್ನು ತಿಳಿಸಲು ಸಿಕ್ಕ ಅವಕಾಶʼ ಎಂದವರು ಹೂಡಾ.
ಅಹಿಂಸೆಯೊಂದೇ ಕಾರಣವಲ್ಲ
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ನಮಗೆ ಅಹಿಂಸಾ ಚಳವಳಿಯ ಮಾರ್ಗವೊಂದೇ ಸಾಧನವಾಗಿರಲಿಲ್ಲ. ಅದರೊಂದಿಗೆ ಕ್ರಾಂತಿಕಾರಿಗಳ ಪ್ರಯತ್ನವೂ ಸಾಕಷ್ಟಿದೆ. ಖುದೀರಾಮ ಬೋಸ್, ಭಗತ್ ಸಿಂಗ್ ರಿಂದ ಹಿಡಿದು ವೀರ ಸಾವರ್ಕರ್ ವರೆಗೂ ಸಾಕಷ್ಟು ಕ್ರಾಂತಿಕಾರಿಗಳು ತಮ್ಮ ಬಲಿದಾನವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬರೀ ಅಹಿಂಸಾ ಮಾರ್ಗದಿಂದಲೇ ನಾವು ಸ್ವಾತಂತ್ರ್ಯವನ್ನು ಪಡೆದೆವು ಎಂದು ಬಿಂಬಿಸುವುದು ಸರಿ ಎನಿಸದು. ಪ್ರಾಕ್ಟಿಕಲ್ ಸಹ ಎನಿಸದು ಎಂದು ಅಭಿಪ್ರಾಯಪಟ್ಟರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ವೀರರ ಬಗ್ಗೆ ಸಿನಿಮಾ ಮಾಡಬೇಕೆಂದಿದೆ. ಆದರೆ ಸದ್ಯಕ್ಕೆ ಈ ಇತಿಹಾಸದ ನೆಲೆಯಿಂದ ಹೊರಬಂದು ಆಕ್ಷನ್ ಚಿತ್ರ ಮಾಡಬೇಕೆಂದಿರುವೆ ಎಂದ ಹೂಡಾ, ನಮ್ಮ ಚರಿತ್ರೆಯ ಬಗ್ಗೆ, ಸ್ವಾತಂತ್ರ್ಯ ಯೋಧರ ಬಗ್ಗೆ ಸಿನಿಮಾಗಳನ್ನು ಮಾಡುವುದಕ್ಕೆ ಸಂಬಂಧಿಸಿ ಇದು ಆರಂಭ. ಅಂತ್ಯ ಎಂದು ತಿಳಿಯಬೇಡಿ ಎಂದರು.
ಸಾವರ್ಕರ್ ಅವರ ಬದುಕಿನ ಕಥೆಯಲ್ಲಿ ಬಹಳ ಪ್ರಮುಖ ಅಧ್ಯಾಯವಾದ ಅಂಡಮಾನ್ ನ ಸೆಲ್ಯುಲಾರ್ ಜೈಲಿನ ಬಗ್ಗೆ ವಿವರಿಸುತ್ತಾ, ಚಿತ್ರದ ಆ ಭಾಗವನ್ನು ಅಲ್ಲಿಯೇ ಚಿತ್ರೀಕರಿಸಿದ್ದೇವೆ ಎಂದರು.
ಚಿತ್ರದಲ್ಲಿ ಮೇಡಂ ಕಾಮಾ ಪಾತ್ರವನ್ನು ನಿರ್ವಹಿಸಿರುವ ನಟಿ ಡಾ.ಅಂಜಲಿ ಹೂಡಾ ಸಾಂಗ್ವಾನ್ ಮಾತನಾಡಿ, ನನ್ನ ಪಾತ್ರವಾದ ಮೇಡಂ ಕಾಮಾರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಪಾತ್ರ ಸಿಕ್ಕಿ ಅದರ ಬಗ್ಗೆ ಅಧ್ಯಯನ ಮಾಡಿದಾಗ ನನಗೇ ನಾಚಿಕೆ ಎನಿಸಿತು. ಒಬ್ಬಳು ವೀರ ಮಹಿಳೆ ಬಗ್ಗೆ ತಿಳಿದೇ ಇಲ್ಲವಲ್ಲ ಎನಿಸಿತು. ಇದಕ್ಕೆ ನಮಗೆ ಇತಿಹಾಸವನ್ನು ಬೋಧಿಸಿದವರನ್ನು ದೂರಬೇಕು. ಎಷ್ಟೋ ನೈಜ ಇತಿಹಾಸ ತಿಳಿದೇ ಇಲ್ಲ ಎಂದು ವಿವರಿಸಿದರು.