Advertisement

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

09:31 PM Nov 25, 2024 | Team Udayavani |

ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ [IFFI ] ಯ 55 ನೇ ಆವೃತ್ತಿಯ ಭಾಗವಾಗಿ ಎನ್‌ ಎಫ್‌ ಡಿಸಿ ಆಯೋಜಿಸಿದ್ದ ಫಿಲ್ಮ್ ಬಜಾರ್ 2024 ಹೊಸ ನಿರೀಕ್ಷೆಯೊಂದಿಗೆ ಸಮಾರೋಪಗೊಂಡಿದೆ.

Advertisement

ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದಲ್ಲೇ ಸಿನಿಮೋದ್ಯಮದ ಪ್ರಮುಖ ತಾಣವಾಗಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಈ ಬಾರಿಯೂ ಹಲವಾರು ಮಂದಿ ಸಿನಿಮಾ ರಂಗದ ಗಣ್ಯರು, ಉದ್ಯಮಿಗಳು, ಸಿನಿಮಾ ತಂತ್ರಜ್ನಾನ ಸಂಬಂಧಿ ಕಂಪೆನಿಗಳು, ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ಹೊರ ದೇಶಗಳ ಇಲಾಖೆಗಳು ಫಿಲ್ಮ್ ಬಜಾರ್ ಮೇಳದಲ್ಲಿ ಭಾಗವಹಿಸಿದ್ದವು.

ನವೆಂಬರ್ 20 ರಿಂದ 24 ರವರೆಗೆ ನಡೆದ ಈ ಬಾರಿಯ ಬಜಾರ್ ನಲ್ಲಿ ಸಿನಿಮಾ ಕಂಪೆನಿಗಳಲ್ಲದೇ14 ರಾಜ್ಯಗಳು ಹಾಗೂ 10 ವಿದೇಶಗಳ ಪೆವಿಲಿಯನ್ ಗಳು ಸ್ಥಾಪಿತವಾಗಿದ್ದವು. ಮಹಾರಾಷ್ಟ್ರ, ಛತ್ತೀಸ್ ಗಡ, ಉತ್ತರಾಖಂಡ್, ಅಸ್ಸಾಂ ಮತ್ತಿತರ ರಾಜ್ಯಗಳ ಪೆವಿಲಿಯನ್ ಗಳಿದ್ದರೆ, ಯುಎಈ, ಯುಕೆ ಸೇರಿದಂತೆ ಹತ್ತು ದೇಶಗಳು ಭಾಗವಹಿಸಿದ್ದವು.

ಹೊಸ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ವಿತರಕರೆಲ್ಲರಿಗೂ ಇದೊಂದು ಒಳ್ಳೆಯ ವೇದಿಕೆಯಾಗಿ ರೂಪುಗೊಂಡಿದೆ.

ಈ ಬಾರಿ ಮುಖೇಶ್ ಚಾಬ್ರಾ ಕಂಪೆನಿಯು ಫಿಲ್ಮ್ ಬಜಾರ್ ರ ಎರಡು ಕೋ ಪ್ರೊಡಕ್ಷನ್ ಮಾರ್ಕೆಟ್‌ [ಸಿಪಿಎಂ] ಯೋಜನೆಗಳಿಗೆ ಸಹಭಾಗಿತ್ವ ಘೋಷಿಸಿದೆ. ಬಾಘಿ ಬೆಚಾರೆ ಚಲನಚಿತ್ರ ಹಾಗೂ ಪೊಂಡಿ ಚೆರಿ ವೆಬ್ ಸೕರಿಸ್ ಗೆ ಸೂಕ್ತವಾದ ನಟರನ್ನು ಶೋಧಿಸಿ ಒದಗಿಸುವ ಹೊಣೆಯನ್ನು ಕಂಪೆನಿ ವಹಿಸಿಕೊಂಡಿದೆ. ಈ ಮೂಲಕ ಉದ್ಯಮದ ಸಹಭಾಗಿತ್ವ ಈ ಯೋಜನೆಗಳಿಗೆ ದೊರಕಲಿದೆ.

Advertisement

ಇದಲ್ಲದೇ ವರ್ಕ್ ಇನ್ ಪ್ರೊಗ್ರೆಸ್‌ ಪ್ರಶಸ್ತಿಗಳನ್ನೂ ಘೋಷಿಸಲಾಗಿದೆ. ರಿಧಮ್ ಜಾನ್ವೆಯವರ ಹಂಟರ್ಸ್ ಮೂನ್ ಗೆ ಪ್ರಸಾದ್ ಲ್ಯಾಬ್ಸ್ ಪ್ರಶಸ್ತಿ ಲಭಿಸಿದ್ದು,50 ಗಂಟೆಗಳ ಉಚಿತ 4ಕೆ ಡಿಐ ಸೌಲಭ್ಯ ಸಿಗಲಿದೆ.

ಟ್ರಿಬೆನಿ ರಾಯ್ ಆವರ ಶೇಪ್ ಆಫ್ ಮೊಮೊ ಚಿತ್ರಕ್ಕೆ ನ್ಯೂಬ್ ಸ್ಟುಡಿಯೋದವರು ಡಿಐ ಪ್ಯಾಕೇಜ್ ನ್ನು ಘೋಷಿಸಿದ್ದಾರೆ. ವಿಶೇಷ ಮೆಚ್ಚುಗೆ ಗಳಿಸಿರುವ ದಿ ಗುಡ್, ದಿ ಬ್ಯಾಡ್ ಅಂಡ್ ದಿ ಹಂಗ್ರಿ ಹಾಗೂ ದಿ ರೆಡ್ ಹಿಬಿಸ್ಕಸ್ ಗೆ ಪ್ರಸಾದ್ ಲ್ಯಾಬ್ಸ್ ಅವರ ಡಿಐ ಪ್ಯಾಕೇಜ್ ನಲ್ಲಿ ರಿಯಾಯಿತಿ ಪ್ರಕಟಿಸಿದೆ.

ಮತ್ತೊಂದು ವಿಭಾಗದಡಿ ವಿಪಿನ್ ರಾಧಾಕೃಷ್ಣನ್ ರ ಅಂಗಮ್ಮಾಲ್, ಪಿನಾಕಿ ಜನಾರ್ದನ್ ಅವರ ಹೌಸ್ ಆಫ್ ಮಣಿಕಂಠ ಹಾಗೂ ರವಿಶಂಕರ್ ಕೌಶಿಕ್ ಅವರ ಫ್ಲೇಮ್ಸ್ ಚಿತ್ರಕ್ಕೆ ಪುರಸ್ಕಾರಗಳನ್ನು ಪ್ರಕಟಿಸಿದ್ದು ತಲಾ 3 ಲಕ್ಷ ರೂ. ಗಳ ಸಹಯೋಗ ಲಭ್ಯವಾಗಲಿದೆ. ಇದಲ್ಲದೇ ಸುಮಾರು ೩೦೦ ಕ್ಯೂಬ್ ಥಿಯೇಟರ್ ಗಳಲ್ಲಿ ಟ್ರೇಲರ್ ಪ್ರೊಮೋಷನ್ ಸೇರಿದಂತೆ ವಿವಿಧ ಪ್ರೊಮೋಷನ್ ಚಟುವಟಿಕೆಗಳಿಗೆ ನೆರವು ಸಿಗಲಿದೆ.

ಸ್ಟುಡೆಂಟ್‌ ಪ್ರೊಡ್ಯೂಸರ್ ವರ್ಕ್ ಶಾಪ್ ನ ಪ್ರಶಸ್ತಿಗೆ ಅನುಶ್ರೕ ಕೆಳತ್ ಆವರ ಡೆಡ್ಲಿ ದೋಸಾಸ್ ಆಯ್ಕೆಯಾಗಿದ್ದರೆ, ರನ್ನರ್ ಅಪ್ ಪ್ರಶಸ್ತಿಗೆ ಪುಂಜಾಲ್‌ ಜೈನ್ ಅವರ ವೆಂಟು ಟು ಲಕಡ್ ಹಾರಾ ಆಯ್ಕೆಯಾಗಿದೆ.

ಮೊದಲ ಬಾರಿಗೆ ಫಿಲ್ಮ್ ಬಜಾರ್, ಸಿಪಿಎಂ ಫೀಚರ್ ಕ್ಯಾಶ್ ಗ್ರ್ಯಾಂಟ್ಸ್ ವಿಭಾಗವನ್ನು ಆರಂಭಿಸಿದೆ. ಇದರಡಿ ತನಿಕಾಚಲಂ ಎಸ್ ಎ ನಿರ್ಿಸಿ ಪಾಯಲ್ ಸೇಥಿ ನಿರ್ದೇಶಿಸಿದ ಕುರಿಂಜಿ ಮೊದಲ ಬಹುಮಾನ ಪಡೆದಿದೆ. ಎರಡನೆಯ ಬಹುಮಾನವನ್ನು ಪ್ರಮೋದ್ ಶಂಕರ್ ನಿರ್ಮಿಸಿ ಸಂಜು ಸುರೇಂದ್ರನ್ ನಿರ್ದೇಶಿಸಿದ ಕೊಥಿಯಾನ್ – ಫಿಶರ್ಸ್ ಆಫ್ ಮೆನ್ ಗಳಿಸಿದೆ. ಮೂರನೇ ಸ್ಥಾನಕ್ಕೆ ಬಿಚ್ ಖ್ಯೂನ್ ಟ್ರಾನ್ ನಿರ್ಮಿಸಿ ಪ್ರಾಂಜಲ್ ದುವಾ ನಿರ್ದೇಶಿಸಿದ ಆಲ್ ಟೆನ್ ಹೆಡ್ಸ್ ಆಫ್ ರಾವಣ ಆಯ್ಕೆಯಾಗಿದೆ. ಇವುಗಳೊಂದಿಗೆ ಚಿಪ್ಪಿ ಬಾಬು ಮತ್ತು ಅಭಿಷೇಕ್ ಶರ್ಮ ನಿರ್ಮಿಸಿ ಸುಮಿತ್ ಪುರೋಹಿತ್ ನಿರ್ದೇಶಿಸಿದ ಬಾಘಿ ಬೆಚಾರೆ ಸಿನಿಮಾ ವಿಶೇಷ ಮೆಚ್ಚುಗೆ ಪುರಸ್ಕಾರ ಗಳಿಸಿದೆ.

ಇದೇ ಸಂದರ್ಭದಲ್ಲಿ ಫಿಲ್ಮ್ ಬಜಾರ್ ನಲ್ಲಿ ನಿರಂತರವಾಗಿ ತನ್ನ ಪ್ರತಿನಿಧಿಗಳು ಭಾಗವಹಿಸುವಂತೆ ಮಾಡುತ್ತಿರುವ ಫ್ರೆಂಚ್‌ ಇನ್ ಸ್ಟಿಟ್ಯೂಟ್‌ ಆಫ್ ಇಂಡಿಯಾವನ್ನು ಅಭಿನಂದಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಎನ್ ಎಫ್ ಡಿ ಸಿ ಅಧ್ಯಕ್ಷ ಹಾಗೂ ಐಬಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಥೂಲ್ ಕುಮಾರ್, ಐಬಿ ಸಚಿವಾಲಯದ ಸಿನಿಮಾ ವಿಭಾಗದ ಜಂಟಿ ಕಾರ್ಯದರ್ಶಿ ವೃಂದಾ ಮನೋಹರ್ ದೇಸಾಯಿ ಮಾತನಾಡಿದರು. ನಟ ಅವಿನಾಶ್ ತಿವಾರಿ, ಕ್ಯಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಾಬ್ರಾ, ಫಿಲ್ಮ್ ಬಜಾರ್ ನ ಸಲಹೆಗಾರ ಜೆರೊಮ್ ಪಲ್ಲರ್ಡ್ ಮತ್ತಿತರರು ಉಪಸ್ಥಿತರಿದ್ದರು.

ನ.20 ರಂದು ಫಿಲ್ಮ್ ಬಜಾರ್ ಅನ್ನು ಐಬಿ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಹೈ ಕಮೀಷನರ್ ನಿಕೋಲಾಸ್ ಮೆಕ್ರೆಫೆ, ಇಫಿ ಉತ್ಸವದ ನಿರ್ದೇಶಕ ಶೇಖರ್ ಕಪೂರ್, ಐಬಿ ಸಚಿವಾಲಯದ ಪ್ರಿಥೂಲ್ ಕುಮಾರ್, ವೃಂದಾ ದೇಸಾಯಿ ಭಾಗವಹಿಸಿದ್ದರು.

ಸಂಜಯ್ ಜಾಜು ಮಾತನಾಡಿ, ಫಿಲ್ಮ್ ಬಜಾರ್ ದಕ್ಷಿಣ ಏಷ್ಯಾದ ಪ್ರಮುಖ ಸಿನಿಮಾ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ. ಸಿನಿಮಾ ರಂಗದ ಎಲ್ಲ ವಲಯದವರನ್ನೂ ಒಟ್ಟಿಗೆ ಸೇರಿಸುವುದು ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ಒದಗಿಸುವುದು, ವೇದಿಕೆ ಕಲ್ಪಿಸುವುದು ಬಜಾರ್ ನ ಉದ್ದೇಶ ಎಂದು ವಿವರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next