ಇಫಿ ಚಿತ್ರೋತ್ಸವ ಎಂದು ಪ್ರಸಿದ್ಧವಾಗಿರುವ ಭಾರತೀಯ ಆಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಸ್ತುತ ಜಗತ್ತಿನ ಪ್ರತಿಷ್ಠಿತ ಉತ್ಸವಗಳಲ್ಲಿ ಒಂದು. ಐವತ್ತನಾಲ್ಕು ವರ್ಷಗಳ ಪಯಣದಲ್ಲಿ ಸಾಕಷ್ಟು ಅಚ್ಚರಿಗಳು, ವಿಶಿಷ್ಟ ಸಂಗತಿಗಳನ್ನು ಹುದುಗಿಸಿಕೊಂಡಿವೆ. ಅವುಗಳಲ್ಲಿ ಕೆಲವದ್ದರ ಹಿಂದೆ ಬೆಳಕು ಚೆಲ್ಲುವಂಥ ಪ್ರಯತ್ನ.
ಇನ್ನು ಇಪ್ಪತ್ತು ದಿನಗಳಲ್ಲಿ ಗೋವಾದ ಪಣಜಿಯಲ್ಲಿ ಮತ್ತೂಂದು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಆರಂಭವಾಗುತ್ತದೆ. ಮತ್ತೆ ಚಿತ್ರನಗರಿಯಲ್ಲಿ ನವಿಲು ಕುಣಿಯತೊಡಗುತ್ತದೆ. ಇದು 54 ನೇ ಚಲನಚಿತ್ರೋತ್ಸವ.
ನ. 20 ರಿಂದ 28 ರವರೆಗೆ ನಡೆಯುವ ಉತ್ಸವದಲ್ಲಿ ದೇಶ ವಿದೇಶಗಳ 300 ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇವುಗಳಲ್ಲಿ ಬಹುತೇಕ ಇತ್ತೀಚಿನ ಫಸಲೇ. ಕೆಲವು ವಿಭಾಗಗಳಲ್ಲಿ ಹಳೆಯ ಕ್ಲಾಸಿಕ್ ಸಿನಿಮಾಗಳೂ ಪ್ರದರ್ಶನಗೊಳ್ಳಲಿವೆ. ಮಾಸ್ಟರ್ ಕ್ಲಾಸ್‌ನಂಥ ವಿಭಾಗದಲ್ಲಿ ಸಿನಿ ಪರಿಣಿತರು ತಮ್ಮ ತಂತ್ರಗಳನ್ನು, ಕೌಶಲವನ್ನು ಸಿನಿಮೋಹಿಗಳಿಗೆ ವಿವರಿಸುತ್ತಾರೆ. ಇವೆಲ್ಲದರ ಮ«ಲು ಒಂದಿಷ್ಟು ಭಾರತೀಯ ಹಾಗೂ ವಿದೇಶಿ ಸಿನಿಮಾಗಳ ನಟರು, ನಿರ್ದೇಶಕರು, ಸಿನಿ ಕ್ಷೇತ್ರದ ಗಣ್ಯರ ಭೇಟಿ ನಡೆಯುತ್ತದೆ. ಪ್ರಮುಖ ಸಿನಿಮಾಗಳ ನಟರು, ನಿರ್ದೇಶಕರಿಗೆ ಹಾಕುವ ಕೆಂಪುಹಾಸು ವಿಶೇಷವಾದದ್ದೇ.
ಇವೆಲ್ಲದರ ಮಧ್ಯೆ ಇಂಥದೊಂದು ಭಾರತೀಯ ಸಿನಿಮೋತ್ಸವಕ್ಕೇ ಕೆಂಪು ಹಾಸು ಹಾಕಿದ್ದು ಯಾವಾಗ ಮತ್ತು ಯಾರು ಎಂಬುದೇ ಕುತೂಹಲದ ಪ್ರಶ್ನೆ. ಅಷ್ಟೇ ಅಲ್ಲ. ಮೊದಲ ಚಿತ್ರೋತ್ಸವವನ್ನು ಉದ್ಘಾಟಿಸುವ ನೈಜ ಭಾಗ್ಯ ಕನ್ನಡಿಗನದ್ದಾಗಿತ್ತು ಎಂಬುದು ಮತ್ತೂ ಕುತೂಹಲದ ಸಂಗತಿ.
1951 ರ ಸಂದರ್ಭ. ಪ್ರಧಾನಿ ನೆಹರೂ ಆಗಲೇ ಭಾರತೀಯ ಸಿನಿಮಾಗಳನ್ನು ವಿಶ್ವ ವೇದಿಕೆಯಲ್ಲಿ ಬಿಂಬಿಸುವ ಬಗೆ ಕುರಿತು ಆಲೋಚಿಸುತ್ತಿದ್ದರಂತೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಚುನಾವಣೆಗೆ ವೇದಿಕೆ ಸಜ್ಜಾಗಿತ್ತು. ದೇಶದ ಮೊದಲ ಪ್ರಧಾನಿ ಪಂ. ಜವಾಹರಲಾಲ್ ನೆಹರೂ ಮತ್ತು ವಾರ್ತಾ ಮತ್ತು ಸಚಿವ ಆರ್. ಆರ್. ದಿವಾಕರ್ ನ್ಯಾಷನಲ್ ಕಾನ್ಸರೆನ್ಸ್‌ನ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲೆಂದು ಶ್ರೀನಗರಕ್ಕೆ ಬಂದರು. ಅದೇ ಸಂದರ್ಭದಲ್ಲಿ ಆಗಿನ ಫಿಲ್ಮ್ ಡಿವಿಷನ್ ನ ಚೀಫ್ ಪ್ರೊಡ್ನೂಸರ್ ಆಗಿದ್ದ ಮೋಹನ್ ಭವನಾನಿಯ ವರು ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ಶ್ರೀನಗರಕ್ಕೆ ಬಂದಿದ್ದರು. ಪ್ರಧಾನಿಯನ್ನು ಭೇಟಿಯಾಗುವಂತೆ ಸೂಚನೆ ಬಂದಿತು. ಆ ಸಂದರ್ಭದಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನದ ಬಗ್ಗೆ ಚರ್ಚಿಸಿದಾಗ ಮೋಹನ್ ತಮ್ಮ ಚಿತ್ರೋತ್ಸವದ ಆಲೋಚನೆಯನ್ನು ಮುಂದಿಟ್ಟರಂತೆ. ಮೋಹನ್ ಭವನಾನಿ ಅವರು ಜರ್ಮನಿಯಲ್ಲಿ ಸಿನಿಮಾ ಕಲೆ ಕಲಿತು ಭಾರತಕ್ಕೆ ವಾಪಸಾಗಿ ಹಲವಾರು ಸಿನಿಮಾಗಳನ್ನು ರೂಪಿಸಿದವರು.
ಅಂತೂ ಒಂದು ವರ್ಷದಲ್ಲಿ ಆಲೋಚನೆ ದೊಡ್ಡದಾಗಿ ಬೆಳೆದು ವಾಸ್ತವಕ್ಕೆ ಬರುವಷ್ಟರಲ್ಲಿ ಜನವರಿ 1952 ಬಂದಿತ್ತು. ಮುಂಬಯಿಯಲ್ಲಿ ಮೊದಲ ಚಿತ್ರೋತ್ಸವವನ್ನು ಸಂಘಟಿಸಲಾಯಿತು. ಜನವರಿ 24 ರಿಂದ ಫೆಬ್ರವರಿ 1 ರವರೆಗೆ ಮೊದಲ ಚಿತ್ರೋತ್ಸವ ನಡೆಯಿತು. ಇಷ್ಟಕ್ಕೂ ಭಾರತೀಯ ಸಿನಿಮಾದ ಹೊಸ ಅಧ್ಯಾಯವನ್ನು ಆರಂಭಿಸುವ ಸಂದರ್ಭಕ್ಕೆ ಸಾಕ್ಷಿಯಾಗಲು ಪ್ರಧಾನಿಗೆ ಅದೃಷ್ಟವಿರಲಿಲ್ಲ. ಆ ಅದೃಷ್ಟ ದೊರಕಿದ್ದು ಕನ್ನಡಿಗರಾದ ಆಗಿನ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಆರ್.ಆರ್. ದಿವಾಕರ್ ಅವರಿಗೆ. ಆರ್. ಆರ್. ದಿವಾಕರ್ ಅವರು ಧಾರವಾಡದವರು. ಸ್ವಾತಂತ್ರ್ಯ ಹೋರಾಟಕ್ಕೂ ಇಳಿದಿದ್ದ ಅವರು, ದೇಶದ ಮೊದಲ ಸರಕಾರದ (1949-52) ಭಾಗವಾಗಿದ್ದರು. 1952 ರ ಜನವರಿಯಲ್ಲಿ ಚಿತ್ರೋತ್ಸವ ಉದ್ಘಾಟಿಸಿದರು. ಆದರೆ ಅದಾದ ಕೆಲವೇ ತಿಂಗಳಲ್ಲಿ ಸಚಿವ ಪದವಿಗೆ ರಾಜೀನಾಮೆ ಇತ್ತರು. ಆ ಬಳಿಕ ಅವರು ಬಿಹಾರದ ರಾಜ್ಯಪಾಲರೂ ಆದರು.
ಇಂದು ಗರಿಬಿಚ್ಚಿ ಕುಣಿಯುತ್ತಿರುವ ನವಿಲಿಗೆ ಅಂದು ಹಸಿರುನಿಶಾನೆ ತೋರಿದ್ದು ಕನ್ನಡಿಗರೆಂದರೆ ಹೆಮ್ಮೆಯ ಸಂಗತಿಯಲ್ಲವೇ?
ಇಷ್ಟಕ್ಕೂ ಇಂಥದೊಂದು ನವಿಲು ಎಲ್ಲೆಲ್ಲಿ ಎಷ್ಟೆಷ್ಟು ಬಾರಿ ಕುಣಿದಿದೆ ಗೊತ್ತೇ? ಅದೂ ವಿಶೇಷವೇ.
*ಅರವಿಂದ ನಾವಡ