ಪಣಜಿ: ಡಾ. ಶ್ಯಾಮಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ 50ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಉತ್ಸವವನ್ನು ಉದ್ಘಾಟಿಸಿದರು. ಆದರೆ ಇಡೀ ಉತ್ಸವಕ್ಕೆ ಖದರ್ ತುಂಬಿದ್ದು ಶಂಕರ್ ಮಹದೇವನ್ ತಂಡದ ಪ್ಯೂಷನ್ ಸಂಗೀತ.
ಮರಾಠಿ ಚಲನ ಚಿತ್ರ ‘ಕತ್ಯಾರ್ ಕಲ್ಜತ್ ಘುಸ್ಲೀ’ಯ ಗಣಪತಿ ಪ್ರಾರ್ಥನಾ ಗೀತೆ ‘ಸೂರ ನಿರಾಗ ಸಹೋ’ದಿಂದ ಆರಂಭಿಸಿದಾಗ ಕರತಾಡನ. ಬಳಿಕ ತಮ್ಮ ಅಮೋಘ ಸಂಗೀತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಖುಷಿ ಪಡಿಸಿದರು.
ಈ ಸಂಗೀತ ರಸಸ್ವಾದದ ಬಳಿಕ ಸಚಿವರಾದಿಯಾಗಿ ಮಾತನಾಡಿದರೂ ಮತ್ತೆ ಅಮೋಘ ಕರತಾಡನ, ಸೀಟಿ ಕೇಳಿ ಬಂದಿದ್ದು ಹಿರಿಯ ನಟ ರಜನೀಕಾಂತ್ ಅವರನ್ನು ಸಮ್ಮಾನಿಸಿದ ಸಂದರ್ಭದಲ್ಲಿ. ಸುವರ್ಣ ಮಹೋತ್ಸವದ ಅಂಗವಾಗಿ ರಜನೀಕಾಂತ್ ಅವರನ್ನು ಸಮ್ಮಾನಿಸಲಾಯಿತು. ಆಗ ಜನರೆಲ್ಲಾ ಎದ್ದು ನಿಂತು ಅಭಿನಂದಿಸಿದರು.
ಈ ಗೌರವ ಸ್ವೀಕರಿಸಿ ಉತ್ತರಿಸಿದ ರಜನೀಕಾಂತ್, ಈ ಗೌರವ ನನ್ನ ಚಿತ್ರಗಳ ನಿರ್ಮಾಪಕರಿಗೆ, ನಿರ್ದೆಶಕರಿಗೆ, ತಂತ್ರಜ್ಞರಿಗೆ ಸಲ್ಲಬೇಕು. ಹಾಗೆಯೇ ನನ್ನ ಅಭಿಮಾನಿಗಳನ್ನು ಮರೆಯಲಾರೆ ಎಂದು ವಂದನೆ ಸಲ್ಲಿಸಿದರು. ಜೀವಮಾನ ಸಾಧನೆಗಾಗಿ ಪ್ರಶಸ್ತಿ ಸ್ವೀಕರಿಸಿ ಧನ್ಯವಾದ ಸಲ್ಲಿಸಿದವರು ನಟಿ ಹೆಸ್ಬುಲ್ಲ, ‘ಸಿನಿಮಾ ನನ್ನ ಬದುಕಿನ ಭಾಗ’ ಎಂದರು.