ಬೆಂಗಳೂರು: ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳಲು ಮುಂದಾಗಿರುವ ಬಿಬಿಎಂಪಿ, ಪ್ರಾಯೋಗಿಕವಾಗಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ನಾಲ್ಕು ವಾರ್ಡ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಟೆಂಡರ್ ಆಹ್ವಾನಿಸಿದೆ.
ಮೂಲದಲ್ಲಿಯೇ ಕಸ ವಿಂಗಡಣೆ ಮಾಡದ ಸಾರ್ವಜನಿಕರಿಂದ ಪೌರಕಾರ್ಮಿಕರು ಕಸ ಸ್ವೀಕರಿವುದನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಕೆಲ ಸಾರ್ವಜನಿಕರು ರಸ್ತೆ ಬದಿ ಹಾಗೂ ಖಾಲಿ ಜಾಗದಲ್ಲಿ ತ್ಯಾಜ್ಯ ಎಸೆದು “ಬ್ಲಾಕ್ ಸ್ಪಾಟ್’ ಸೃಷ್ಟಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕಸ ಹಾಕುವವರನ್ನು ಪತ್ತೆ ಮಾಡಿ ದಂಡ ವಿಧಿಸಲು ಬಿಬಿಎಂಪಿಯು ಈ ಕ್ರಮಕ್ಕೆ ಮುಂದಾಗಿದೆ.
ಮೊದಲ ಹಂತವಾಗಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರಮನೆ ನಗರ ವಾರ್ಡ್ (35), ಮತ್ತಿಕೆರೆ ವಾರ್ಡ್ (36), ರಾಜಮಹಲ್ ವಾರ್ಡ್ (64), ಗಾಯತ್ರಿ ನಗರ ವಾರ್ಡ್ (74) ವ್ಯಾಪ್ತಿಯಲ್ಲಿ ತಲಾ 10 ಲಕ್ಷ ವೆಚ್ಚದಲ್ಲಿ ಸಿಸಿಟಿವಿ ಅಳವಡಿಕೆಗೆ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್‌ಗೆ ಅರ್ಜಿ ಸಲ್ಲಿಸಲು ಆಗಸ್ಟ್ 18 ಕೊನೆಯ ದಿನಾಂಕವಾಗಿದ್ದು, ಆಗಸ್ಟ್ 22 ರಂದು ಟೆಂಡರ್ ಅಂತಿಮಗೊಳ್ಳಲಿದೆ.
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ವಿಯಾದ ಬಳಿಕ ನಗರದ 1 ಸಾವಿರ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಬಿಬಿಎಂಪಿ ಮುಂದಾಗಲಿದೆ. ಈಗಾಗಲೇ ಕಸ ಹೆಚ್ಚಾಗಿ ಬೀಳುವ 450 ಸ್ಥಳಗಳನ್ನು ಬಿಬಿಎಂಪಿ ಪತ್ತೆ ಹಚ್ಚಿದ್ದು, ಇದಲ್ಲದೆ ಸಣ್ಣ ಆಟೋಗಳಿಂದ ದೊಡ್ಡ ದೊಡ್ಡ ಟಿಪ್ಪರುಗಳಿಗೆ ಕಸ ವರ್ಗಾವಣೆ ಮಾಡುವ 600 ಕೇಂದ್ರಗಳಲ್ಲಿಯೂ ಸಿಸಿಟಿವಿ ಅಳವಡಿಸಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಕೆಲ ವಾರ್ಡ್‌ಗಳಲ್ಲಿ ಟಿಪ್ಪರ್ ವ್ಯವಸ್ಥೆ ಇದ್ದರೂ, ಜನರು ಬೀದಿ ಬದಿ ಕಸ ಎಸೆದು ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡುತ್ತಿದ್ದೇವೆ. ಡಾಲರ್ಸ್ ಕಾಲೋನಿಯಲ್ಲಿ ಇಂತಹ ಘಟನೆಗಳು ನಡೆದಿವೆ. ಕ್ಯಾಮೆರಾ ಅಳವಡಿಕೆ ಬಳಿಕ ಅಲ್ಲಿ ಕಸ ಹಾಕುವುದು ನಿಂತಿದೆ. ಹೀಗಾಗಿ ಪ್ರತಿ ವಾರ್ಡ್‌ಗಳಲ್ಲಿ ಎರಡು ಕ್ಯಾಮರಾ ಅಳವಡಿಸಲು ತೀರ್ಮಾನಿಸಲಾಗಿದೆ”.
-ಜಿ.ಪದ್ಮಾವತಿ, ಮೇಯರ್