ಮೈಸೂರು: ಯಾರಿಗಾದರೂ ಯಾವುದಾದರೂ ಸ್ಥಾನಮಾನ ಬೇಕಿದ್ದರೆ ಅದನ್ನು ಪಕ್ಷದ ವರಿಷ್ಠರ ಬಳಿ ಕೇಳಬೇಕು. ಮಾಧ್ಯಮದವರ ಮುಂದೆ ತಮ್ಮ ಆಸೆ ಹೇಳಿಕೊಂಡರೆ ಏನೂ ಪ್ರಯೋಜನ ಹೇಳಿ? ನಿಮ್ಮ ಮುಂದೆ ಹೇಳಿಕೊಂಡರೆ ನೀವೇನಾದರೂ ಸ್ಥಾನ ಕೊಡಿಸ್ತೀರಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಧ್ಯಮದವರನ್ನು ಪ್ರಶ್ನಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ಕಂದಾಯ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ಥಾನಮಾನದ ವಿಚಾರವನ್ನು ವರಿಷ್ಠರ ಬಳಿ ಮಾತ್ರ ಚರ್ಚೆ ಮಾಡಬೇಕು. ಮಾಧ್ಯಮದ ಬಳಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದರೆ ಅದರಿಂದ ಸರ್ಕಾರಕ್ಕೂ ಒಳ್ಳೆಯದು, ಜನರಿಗೂ ಒಳ್ಳೆಯದು. ಆ ವಿಚಾರ ಬಿಟ್ಟು ವೈಯಕ್ತಿಕ ವಿಚಾರ ಚರ್ಚೆ ಮಾಡಿದರೆ ಅದು ಸರ್ಕಾರಕ್ಕೆ ನಷ್ಟ ಎಂದರು.
ಡಿಸಿಎಂ ಸ್ಥಾನದ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸ್ಥಾನದ ಆಕಾಂಕ್ಷೆ ಇರೋರು ಸರಿಯಾದ ವ್ಯಕ್ತಿಗಳ ಬಳಿ ಹೋಗಿ ವಿಚಾರ ಹೇಳಲಿ. ನಮ್ಮ ನಾಯಕರು ಎಚ್ಚರಿಕೆ ಕೊಟ್ಟ ಮೇಲೂ ಕೆಲವರು ಈ ವಿಚಾರದ ಬಗ್ಗೆ ಮಾತಾಡ್ತಿದ್ದಾರೆ. ನಮ್ಮ ವರಿಷ್ಠರಿಗೆ ತಾಳ್ಮೆ ಹೆಚ್ಚು. ಆದರೆ, ಅವರು ಎಲ್ಲವನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಸ್ವಾಮೀಜಿ ನಡೆಗೆ ಸಚಿವ ಕೃಷ್ಣಬೈರೇಗೌಡ ಬೇಸರ
ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿರುವ ಸ್ವಾಮೀಜಿಗಳು ಕಾರ್ಯಕ್ರಮದ ಕುರಿತು ಮಾತನಾಡುವ ಬದಲು ರಾಜಕೀಯ ಮಾತನಾಡಿದರೆ ಹೇಗೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಡಿಕೆಶಿ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರ ಬಳಿ ಹೇಳಿದ್ದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಯಾವ ವಿಚಾರವನ್ನು ಎಲ್ಲಿ ಮಾತಾಡಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಸರ್ಕಾರಿ ಸಮಾರಂಭಕ್ಕೆ ಬಂದು ರಾಜಕೀಯ ವಿಚಾರ ಮಾತಾಡಿದರೆ ಹೇಗೆ? ಸ್ವಾಮೀಜಿ ತಮ್ಮ ಮಠದಲ್ಲಿ ಆ ವಿಚಾರ ಮಾತಾಡಲಿ. ತಮ್ಮ ಭಕ್ತರ ಮುಂದೆ ಅದನ್ನು ಹೇಳಲಿ. ಯಾರಿಗೆ, ಯಾವ ವಿಚಾರವನ್ನು ಎಲ್ಲಿ ಮಾತಾಡಬೇಕು ಎಂದು ಹೇಳುವ ಸ್ಥಿತಿ ಬಂದಿದೆ. ಇದೇ ಬೇಸರದ ವಿಚಾರ ಎಂದರು.