ಬೆಂಗಳೂರು: ಪ್ರಧಾನಿ ಮೋದಿ ಮುಖ ನೋಡಿ ಮತ ಹಾಕಿದರೆ ನಿಮ್ಮ (ಕನ್ನಡಿಗರ) ಮತಕ್ಕೆ ಗೌರವ ಇರುತ್ತದಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿ ಹಂತದಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗಿದ ಬಿಜೆಪಿಯನ್ನು ಸೋಲಿಸುವ ಮೂಲಕ ಕನ್ನಡಿಗರ ಸ್ವಾಭಿಮಾನ ಮೆರೆಯಬೇಕು ಎಂದು ಹೇಳಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ದಾಸರಹಳ್ಳಿ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ರವಿವಾರ ಪ್ರತ್ಯೇಕ ಕಾಂಗ್ರೆಸ್ ಬೂತ್ ಮುಖಂಡರು ಮತ್ತು ಬ್ಲಾಕ್ ಮುಖಂಡರು ಹಾಗೂ ಮಹಿಳಾ ಸಮಾವೇಶಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜಧಾನಿ ಬೆಂಗಳೂರಿನ ಜನತೆಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಕೇಂದ್ರದಿಂದ ಬೆಂಬಲ ಸಿಗಲಿಲ್ಲ. ಬರ ಪರಿಹಾರಕ್ಕೆ ಬಿಡಿಗಾಸೂ ಕೊಡಲಿಲ್ಲ. ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಹಂಚುವುದಾಗಿ ಹೇಳಿದ್ದರು. ಆ ಪೈಕಿ 15 ರೂಪಾಯಿಯನ್ನೂ ಹಾಕಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಯಾವುದೂ ಜಾರಿ ಮಾಡಲಿಲ್ಲ. ಹೀಗಾಗಿ ಅವರ ಮುಖ ನೋಡಿ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದೆಯೇ ಎಂದು ಕೇಳಿದರು.
ನಾಡಿನ ಜನತೆಯ ತೆರಿಗೆ ಹಣದ ಪಾಲಿನಲ್ಲಿ ಕೇಂದ್ರವು ರಾಜ್ಯಕ್ಕೆ ವಿಪರೀತ ಅನ್ಯಾಯ ಮಾಡಿತು. ಬರಗಾಲದಿಂದ ನರಳಾಡುವಾಗ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೆಪಕ್ಕೂ ರಾಜ್ಯಕ್ಕೆ ಕಾಲಿಡಲಿಲ್ಲ. ಬರ ಪರಿಹಾರವಾಗಿ ಇವತ್ತಿನವರೆಗೂ ಒಂದೇ ಒಂದು ರೂಪಾಯಿ ನೀಡಲಿಲ್ಲ. ಹೀಗೆ ನಿರಂತರವಾಗಿ ರಾಜ್ಯದ ಜನತೆಗೆ ಮಹಾದ್ರೋಹ ಎಸಗಿದ ಬಿಜೆಪಿಯನ್ನು ಸೋಲಿಸಿ ಏಳು ಕೋಟಿ ಕನ್ನಡಿಗರು ಸ್ವಾಭಿಮಾನ ಮೆರೆಯಬೇಕು ಎಂದರು.
ಕಾಂಗ್ರೆಸ್ ಸರಕಾರ ಭದ್ರವಾಗಿರುವವರೆಗೂ ಈ ಅನುಕೂಲ ಪ್ರತಿ ತಿಂಗಳು 5-6 ಸಾವಿರ ರೂ. ಜನರ ಮನೆ ಬಾಗಿಲಿಗೆ ಬರುತ್ತಲೇ ಇರುತ್ತದೆ. ಕೇಂದ್ರ ಸರಕಾರದ ಬೆಲೆ ಏರಿಕೆ ಕ್ರಮಗಳಿಂದ ಹೈರಾಣಾಗಿದ್ದ ನಾಡಿನ ಜನರ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದಲೇ ಐದು ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 5-6 ಸಾವಿರ ಉಳಿತಾಯ ಆಗುವ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದರು.
ಇದ್ದದ್ದು ಇದ್ದಂಗೆ ಹೇಳಿದರೆ
ದೇವೇಗೌಡರಿಗೆ ಸಿಟ್ಟು: ಸಿಎಂ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದ್ದದ್ದು ಇದ್ದಂತೆ ಹೇಳಿದರೆ, ದೇವೇಗೌಡರಿಗೆ ಸಿಟ್ಟು ಎಂದು ವ್ಯಂಗ್ಯವಾಡಿದರು.
ಮೋದಿಯವರು ಮತ್ತೆ ಪ್ರಧಾನಿಯಾದರೆ ಭಾರತ ತೊರೆಯುವುದಾಗಿ ಹೇಳಿದ್ದ ದೇವೇಗೌಡರು ಈಗ ಮೋದಿಯವರ ಜತೆಗೇ ಸೇರಿದ್ದಾರೆ. ಅವರು ಆಡಿದ್ದ ಮಾತನ್ನೇ ನಾನು ಹೇಳಿದ್ದೇನೆ ಅಷ್ಟೇ ಎಂದರು.
ಮೋದಿ ಮುಖ ನೋಡಿ ಮತ ಹಾಕೋದಾದರೆ ಕೆಲಸವನ್ನೂ ಅವರಿಂದಲೇ ಮಾಡಿಸಿ: ಡಿಕೆಶಿ
ಬೆಂಗಳೂರು: ನರೇಂದ್ರ ಮೋದಿ ಮುಖ ನೋಡಿ ಮತ ಹಾಕುವುದಾದರೆ, ಮೋದಿ ಅವರಿಂದಲೇ ಕೆಲಸ ಮಾಡಿಸಿಕೊಳ್ಳಿ. ನಮ್ಮ ಅಭ್ಯಂತರವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಿಮಗೆ ನೀರು, ರಸ್ತೆ ಇತರ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆಯೇ ಹೊರತು, ದಿಲ್ಲಿಯಿಂದ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟು ನಮ್ಮ ಪರ ನಿಂತರೆ, ನಾವು ಮುಂದೆ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದರು.