ಅಗಾಥಾ ಕ್ರಿಸ್ಟಿ, ಜಗತ್ಪ್ರಸಿದ್ಧ ಪತ್ತೇದಾರಿ ಕಾದಂಬರಿಗಾರ್ತಿ. ಎಲ್ಲ ಮಹಾತ್ಮರ ದುರಂತ ಕಥನಗಳಂತೆ ಆಕೆಯದ್ದೂ – ಖಾಸಗಿ ಬದುಕು ವೈಲಕ್ಷಣ್ಯಗಳ ಮೂಟೆ. ಆಕೆಯ ಮೊದಲ ಪತಿ ಆರ್ಚಿಬಾಲ್ಡ್ ಕ್ರಿಸ್ಟಿ ಆಗ ಅಖಂಡ ಭಾರತಕ್ಕೆ ಸೇರಿದ್ದ ಪೇಶಾವರದಲ್ಲಿ ಹುಟ್ಟಿದ್ದವನು. ಬ್ರಿಟಿಷ್ ಸರಕಾರದಲ್ಲಿ ಕೆಲಸ ಮಾಡಿದವನು. ಜೊತೆಯಾದ ಮೊದಲ ಒಂದಷ್ಟು ವರ್ಷ ಅವರಿಬ್ಬರ ದಾಂಪತ್ಯ ಸುಖಮಯವಾಗಿಯೇ ಇತ್ತು.
ಆದರೆ, ಬರಬರುತ್ತ ಆತ ನ್ಯಾನ್ಸಿ ಎಂಬ ಇನ್ನೊಬ್ಟಾಕೆಯ ಜೊತೆ ಸಂಬಂಧ ಕುದುರಿಸಿಕೊಂಡ. ಸ್ವತಃ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದ ಅಗಾಥಾ ಪತಿಯ ಅಕ್ರಮ ಸಂಬಂಧವನ್ನು ಪತ್ತೆ ಹಚ್ಚದೆ ಇರುತ್ತಾಳೆಯೇ? ಅವನ ಗುಟ್ಟುಗಳು ಬಯಲಾದವು. ಇಬ್ಬರ ನಡುವೆ ಜ್ವಾಲಾಮುಖೀ ಸ್ಫೋಟಿಸಿತು. ರಂಪಾರೂಢಿಯಾಯಿತು. ಕೊನೆಗದು ವಿಚ್ಛೇದನದಲ್ಲಿ ಕೊನೆಯಾಯಿತು.
ಆಕೆಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಷರಾ ಬರೆದು ಬೇರೆಯಾದ ಆರ್ಚಿಬಾಲ್ಡ್ ಮುಂದೆ ತನ್ನ ಪ್ರೇಯಸಿ ನ್ಯಾನ್ಸಿಯನ್ನು ಮದುವೆಯಾದ; ಜೀವನಪೂರ್ತಿ ಆಕೆಯೊಂದಿಗೆ ನೆಮ್ಮದಿಯಿಂದ ಬದುಕಿದ! ಇತ್ತ ಅಗಾಥಾ ಒಂದಷ್ಟು ದಿನ ಡೋಲಾಯಮಾನ ಮನಸ್ಥಿತಿಯಲ್ಲಿದ್ದು ನರಳಿದರೂ ಮುಂದೆ ಗಟ್ಟಿಮನಸ್ಸು ಮಾಡಿ ಮತ್ತೂಂದು ಮದುವೆಯಾದಳು. ಆಕೆಯ ಎರಡನೇ ಪತಿ ಮ್ಯಾಕ್ಸ್ ಮಾಲೊವನ್ ಒಬ್ಬ ಆರ್ಕಿಯಾಲಜಿಸ್ಟ್ (ಪುರಾತಣ್ತೀಶಾಸ್ತ್ರಜ್ಞ).
ಮೆಸಪೊಟೋಮಿಯದ ಉತ್ಖನನದಲ್ಲಿ ತೊಡಗಿಸಿ ಕೊಂಡಿದ್ದವನು. ಆ ಪ್ರಾಚೀನ ನಾಗರಿಕತೆಯ ವಿಷಯದಲ್ಲಿ ಬಹಳಷ್ಟನ್ನು ಹೊರಗೆಳೆದು ದೊಡ್ಡ ಹೆಸರು ಮಾಡಿದವನು ಕೂಡ. ಆತನೊಂದಿಗೆ ಅಗಾಥಾ ಸಾರ್ಥಕವೆಂಬಂಥ ಜೀವನ ಕಳೆದಳು. “ಪ್ರಾಚ್ಯವಸ್ತುಗಳನ್ನು ಪ್ರೀತಿಸುವ ವ್ಯಕ್ತಿಯ ಜೊತೆ ವೈವಾಹಿಕ ಜೀವನ ಹೇಗನಿಸುತ್ತದೆ?’ ಎಂದು ಪತ್ರಕರ್ತನೊಬ್ಬ ಕೇಳಿದಾಗ ಅಗಾಥಾ ಹೇಳಿದ್ದು: “ಅತ್ಯಂತ ನೆಮ್ಮದಿ ಕೊಡುತ್ತದೆ. ಸಂಗಾತಿಗೆ ಪ್ರಾಯವಾದಂತೆಲ್ಲ ಅವನು ಹೆಚ್ಚು ಹೆಚ್ಚು ಪ್ರೀತಿಸುತ್ತಾನೆ…’
* ರೋಹಿತ್ ಚಕ್ರತೀರ್ಥ