ಜಾನ್ ಆಬರ್‌ನೆತಿ, 18ನೇ ಶತಮಾನದಲ್ಲಿದ್ದ ಪ್ರಸಿದ್ಧ ಬ್ರಿಟಿಷ್ ವೈದ್ಯ. ಸರ್ಜನ್ ಆಗಿ, ವೈದ್ಯ ಶಿಕ್ಷಕನಾಗಿ ಆಬರ್‌ನೆತಿ ಹೆಸರು ಮಾಡಿದ್ದ. ವೈದ್ಯನಾಗಿ ಅವನದು ಸ್ವಲ್ಪ ಮುಂಗೋಪದ ಸ್ವಭಾವ. ಯಾವ ಕ್ಷಣದಲ್ಲಿ ರೋಗಿಯ ಮೇಲೆ ಹೇಗೆ ಹರಿಹಾಯುತ್ತಾನೆ ಅಂತ ಹೇಳುವಂತಿರಲಿಲ್ಲ. ಒಮ್ಮೆ ಇವನ ಕೆಟ್ಟ ಬಾಯಿಂದ ಕುಪಿತನಾದ ರೋಗಿಯೊಬ್ಬ, “ನೀವು ಹೇಳಿದ ಮಾತನ್ನೆಲ್ಲ ನೀವೇ ನುಂಗುವ ಹಾಗೆ ಮಾಡುತ್ತೇನೆ’ ಎಂದು ಕೂಗಿಹೇಳಿದಾಗ ಆಬರ್‌ನೆತಿ ಹೇಳಿದ್ದು: “ಪ್ರಯೋಜನಲ್ಲ. ನುಂಗಿದ ಮರುಕ್ಷಣದಲ್ಲೇ ಅವು ಬಾಯಿಂದ ಹೊರ ಹಾರುತ್ತವೆ’.
ಇಂಥ ಆಬರ್‌ನೆತಿಗೆ ಒಂದು ದಿನ ಒಬ್ಬ ರೋಗಿ ಸಿಕ್ಕಿದ. “ಏನು ಕಾಯಿಲೆ?’. “ಡಾಕ್ಟರ್, ದೈಹಿಕವಾದ ಕಾಯಿಲೆ ಏನೂ ಇಲ್ಲ. ನನಗೆ ವಿಪರೀತ ಖನ್ನತೆ ಕಾಡುತ್ತಿದೆ. ಜೀವನ ಬೇಸರವಾಗಿದೆ. ಯಾವೊಂದು ಸಂಗತಿಯೂ ರುಚಿಸುತ್ತಿಲ್ಲ. ಬೇಸರದಿಂದ ಬಾಡಿ ಬಳಲಿ ಹೋಗಿದ್ದೇನೆ. ಏನಾದರೂ ಮದ್ದು ಕೊಡಿ’.
ರೋಗಿಯ ಮುಖವನ್ನೂ, ಅವನ ಒಟ್ಟು ಪರಿಸ್ಥಿತಿಯನ್ನೂ ಕಂಡು ಆಬರ್‌ನೆತಿಯಂಥ ಆಬರ್‌ನೆತಿಯ ಮನಸ್ಸು ಕೂಡ ಕರಗಿ ನೀರಾಗಿ ಹರಿಯಿತು! “ನೋಡಿ ಇವರೇ, ನಿಮಗೆ ಸದ್ಯಕ್ಕೆ ಬೇಕಿರುವುದು ಮನಸ್ಸಮಾಧಾನ. ಹೃದಯ ಹಗುರವಾಗಬೇಕಿದೆ. ಒಳಗಿನ ದುಃಖವನ್ನೆಲ್ಲ ಹೊರಹಾಕಬೇಕಿದೆ. ನೀವೊಂದು ಕೆಲಸ ಮಾಡಿ. ಗ್ರಿಮಾಲ್ಡಿ ಅನ್ನೋ ಕಲಾವಿದ ಇದ್ದಾನೆ. ಪ್ರೇಕ್ಷಕರನ್ನು ಭರ್ಜರಿಯಾಗಿ ನಗಿಸುತ್ತಾನೆ. ಅವನ ಒಂದೆರಡು ಶೋಗಳಲ್ಲಿ ಪ್ರೇಕ್ಷಕನಾಗಿ ಕೂತು ಬನ್ನಿ. ಆಮೇಲೂ ನಿಮ್ಮ ಖನ್ನತೆ ಹಾಗೇ ಇದ್ದರೆ ಮದ್ದು ಕೊಡೋಣಂತೆ’ ಎಂದ ಆಬರ್‌ನೆತಿ.
ರೋಗಿ ಮುಖವನ್ನು ಇನ್ನಷ್ಟು ಕುಗ್ಗಿಸಿ ಹೇಳಿದ, “ಡಾಕ್ಟರ್, ನಾನೇ ಆ ಗ್ರಿಮಾಲ್ಡಿ’!