Advertisement

ಎಚ್ಚೆತ್ತುಕೊಳ್ಳದಿದ್ದರೆ ನೀರಿಗೆ ಪರದಾಟ ತಪ್ಪಲ್ಲ

12:43 AM Apr 18, 2019 | Lakshmi GovindaRaju |

ಬೆಂಗಳೂರು: ನೀರಿನ ಸಂರಕ್ಷಣೆ ವಿಚಾರದಲ್ಲಿ ಈ ಕೂಡಲೇ ಬೆಂಗಳೂರಿನ ಜನ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಪರದಾಡಬೇಕಾಗುತ್ತದೆ ಎಂದು ಜಲಮಂಡಳಿ ನಿವೃತ್ತ ಮುಖ್ಯ ಇಂಜಿನಿಯರ್‌ ಡಾ.ಪಿ.ಎನ್‌.ರವೀಂದ್ರ ಹೇಳಿದರು.

Advertisement

ಕರ್ನಾಟಕ ಸೀನಿಯರ್‌ ಇಂಜಿನಿಯರ್ ಫೋರಂ ವತಿಯಿಂದ ಬುಧವಾರ ಕಮಲನಗರದ ಕರ್ನಾಟಕ ಇಂಜಿನಿಯರ್‌ ಅಕಾಡೆಮಿಯಲ್ಲಿ ಆಯೋಜಿಸಿದ್ದ “ಬೆಂಗಳೂರು ನೀರು ಪೂರೈಕೆ- ಸಮಸ್ಯೆಗಳು, ಸವಾಲುಗಳು ಮತ್ತು ಪರಿಹಾರಗಳು’ ಕುರಿತ ತಾಂತ್ರಿಕ ಉಪನ್ಯಾಸದಲ್ಲಿ ಮಾತನಾಡಿದ ಅವರು, ಈ ಹಿಂದೆ ಇದ್ದ ಬೆಂಗಳೂರಿನ ಪ್ರಮುಖ ಜಲ ಮೂಲಗಳು ಬರಿದಾಗಿವೆ.

ನಗರದ ಬಹುಪಾಲು ನೀರಿಗೆ ಕಾವೇರಿ ನದಿಯನ್ನೇ ಅವಲಂಬಿಸಲಾಗಿದೆ. ಇನ್ನೊಂದೆಡೆ ಬೆಂಗಳೂರಿಗೆ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಲಕ್ಷ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಅಂತೆಯೇ ಅವರಿಗೂ ನೀರಿನ ಅವಶ್ಯಕತೆ ಇದ್ದು, ನೀರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ.

ಆದರೆ, ಈ ಬೇಡಿಕೆಗೆ ತಕ್ಕಂತೆ ಜಲಮಂಡಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನೀರಿನ ಸಂರಕ್ಷಣೆ ಕುರಿತು ನಗರವಾಸಿಗಳು ಎಚ್ಚೆತ್ತುಕೊಳ್ಳುವುದು ಹಾಗೂ ಸರ್ಕಾರ ಬದಲಿ ಜಲ ಮೂಲಗಳನ್ನು ವ್ಯವಸ್ಥೆ ಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಿದೆ ಎಂದರು.

ಲಭ್ಯವಿರುವ ನೀರನ್ನು ಪ್ರಜ್ಞಾಪೂರ್ವಕ ಬಳಕೆ, ಮನೆಗಳಿಗೆ ಮಳೆನೀರು ಕೊಯ್ಲು ಅಳವಡಿಸಿಕೊಂಡು ಅಂತರ್ಜಲ ಪ್ರಮಾಣ ಹೆಚ್ಚಿಸಿಕೊಳ್ಳುವುದು ಹಾಗೂ ಮಳೆ ನೀರನ್ನು ನಿತ್ಯ ಚಟುವಟಿಕೆಗೆ ಬಳಕೆ ಮಾಡುವುದು. ಶುದ್ಧೀಕರಿಸಿದ ನೀರಿನ ಮರುಬಳಕೆಗೆ ಮುಂದಾಗುವುದು ಪ್ರಮುಖ ನೀರು ಸಂರಕ್ಷಣಾ ಮಾರ್ಗಗಳಾಗಿವಿವೆ ಎಂದು ಸಲಹೆ ನೀಡಿದರು.

Advertisement

ವರ್ಷದಿಂದ ವರ್ಷಕ್ಕೆ ನೀರಿನ ಗುಣಮಟ್ಟದ ಕಡಿಮೆಯಾಗುತ್ತಿದೆ. ಇದಕ್ಕೆ ಪರಿಸರ ಹಾಗೂ ಜೈವಿಕ ಮಾಲಿನ್ಯ ಕಾರಣ. ಅದರಲ್ಲೂ ಬೇಸಿಗೆ ಸಮಯದಲ್ಲಿ ನದಿಗಳು ಹೆಚ್ಚು ಮಲಿನವಾಗುತ್ತಿದ್ದು, ಇದಕ್ಕೆ ಜನರೇ ಕಾರಣರಾಗಿದ್ದಾರೆ. ಹವಾಮಾನ ವೈಪರಿತ್ಯದಿಂದ ಮಳೆ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಅಂತರ್ಜಲ ಕುಸಿಯುತ್ತಿದೆ.

ಜನ ನೀರಿನ ಸಂರಕ್ಷಣೆಗೆ ಒತ್ತು ನೀಡದಿದ್ದರೆ ಭವಿಷ್ಯದಲ್ಲಿ ಎಲ್ಲೆಡೆ ನೀರಿನ ಬವಣೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಕರ್ನಾಟಕ ಸೀನಿಯರ್‌ ಇಂಜಿನಿಯರ್ ಫೋರಂನ ಅಧ್ಯಕ್ಷ ಕ್ಯಾಪ್ಟನ್‌ ರಾಜಾ ರಾವ್‌ ಮಾತನಾಡಿ, ಬೆಂಗಳೂರು ನಗರ ಕಾಂಕ್ರಿಟ್‌ ಕಾಡಾಗಿದ್ದು, ಅಂತರ್ಜಲ ಪ್ರಮಾಣ ಸಾಕಷ್ಟು ಕುಗ್ಗುತ್ತಿದೆ. ಕಳೆದ 4 -5 ವರ್ಷಗಳಿಂದ ಸರ್ಕಾರವು ಟೆಂಡರ್‌ ಶೂರ್‌ ಯೋಜನೆ ಮೂಲಕ ಕಾಂಕ್ರಿಟ್‌ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿದೆ.

ಮಳೆಯ ನೀರು ಇಂಗಲು ಈ ರಸ್ತೆಗಳು ಅಡ್ಡಿಯಾಗಿವೆ. ಹೀಗಾಗಿ, ಮಳೆಯ ನೀರು ರಾಜಕಾಲವೆ, ಚರಂಡಿಗಳ ಮೂಲಕ ಹರಿದು ನಗರದಿಂದ ಆಚೆ ಹೋಗುತ್ತಿದೆ. ಈ ರೀತಿ ಭೂಮಿಗೆ ಬಿದ್ದ ನೀರು ಚರಂಡಿಯಲ್ಲಿ ಹರಿದು ಹೋದರೆ, ಅಂತರ್ಜಲ ಮರುಪೂರಣವಾಗುಲು ಸಾಧ್ಯವಿಲ್ಲ ಎಂದರು. ಬೆಂಗಳೂರು ಜಲಮಂಡಳಿ ನೀರು ಪೂರೈಕೆಗೆ ಮಾತ್ರ ಒಂದಿಷ್ಟು ಆದ್ಯತೆ ನೀಡುತ್ತಿದ್ದು, ಒಳಚರಂಡಿ ವ್ಯವಸ್ಥೆಯನ್ನು ಸುಸಜ್ಜಿತವಾಗಿಸುತ್ತಿಲ್ಲ.

800 ಚದರ ಕಿ.ಮೀ.ವ್ಯಾಪ್ತಿಯಿರುವ ಬೆಂಗಳೂರು ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲ. ಜಲಮಂಡಳಿ ಹಾಗೂ ಸರ್ಕಾರ ಸುಸಜ್ಜಿತ ಒಳಚರಂಡಿ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಮುಖ್ಯವಾಗಿ ಈ ಒಳಚರಂಡಿ ವ್ಯವಸ್ಥೆಯಿಂದ ಕೊಳಚೆ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಬಹುದು ಅಥವಾ ನಗರದ ಕೆರೆಗಳಿಗೆ ಹರಿಸಿ ಅಂತರ್ಜಲ ಮರುಪೂರಣ ಮಾಡಬಹುದು ಎಂದು ಹೇಳಿದರು.

ಇಂಜಿನಿಯರ್ ಫೋರಂನ ಉಪಾಧ್ಯಕ್ಷ ಬಿ.ಶ್ರೀನಿವಾಸ್‌, ಹಣಕಾಸು ನಿರ್ದೇಶಕ ಎಸ್‌.ಮೃತ್ಯುಂಜಯ, ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next