ವರದಿ: ಭೈರೋಬಾ ಕಾಂಬಳೆ
ಬೆಳಗಾವಿ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ಜಮಾನಾದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಶಾಲೆಯ ಶಿಕ್ಷಕಿಯೊಬ್ಬರು ಪ್ರವೇಶ ಪಡೆಯುವ ಪ್ರತಿಯೊಬ್ಬರ ಅಕೌಂಟಿಗೂ ತಮ್ಮ ಸ್ವಂತ ವೇತನದಿಂದಲೇ ಒಂದು ಸಾವಿರ ರೂ. ನಗದು, ನೋಟ್ ಬುಕ್, ಶಾಲಾ ಬ್ಯಾಗ್ ನೀಡುವ ಆಫರ್ ಇಟ್ಟಿದ್ದಾರೆ.
ಬೆಳಗಾವಿ ನಗರದ ಮಾರ್ಕೆಟ್ ನಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 1ರ ಶಿಕ್ಷಕಿ ವನಿತಾ ಹಾಲಪ್ಪನವರ ಅವರು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕು ಎಂಬ ಉದ್ದೇಶದಿಂದ ಇಂಥ ವಿಶೇಷ ಅವಕಾಶ ನೀಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಸರ್ಕಾರಿ ಶಾಲೆಗಳ ಬದಲು ಖಾಸಗಿ ಶಾಲೆಗಳೇ ಇಂದಿನ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು ಆಗುತ್ತಿವೆ. ಹೀಗಾಗಿ ಗಡಿ ಜಿಲ್ಲೆಯ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕು. ಇದರಿಂದ ಕನ್ನಡ ಶಾಲೆಗಳು ಮತ್ತಷ್ಟು ಸಬಲವಾಗಲು ಸಾಧ್ಯವಾಗುತ್ತದೆ ಎಂಬ ಉದ್ದೇಶ ಇಟ್ಟುಕೊಂಡಿರುವ ಶಿಕ್ಷಕಿ ವನಿತಾ ಹಾಲಪ್ಪನವರ ಅವರು ಮಕ್ಕಳನ್ನು ಆಕರ್ಷಿಸಲು ಈ ವಿನೂತನ ಯೋಜನೆಗೆ ಕೈ ಹಾಕಿದ್ದಾರೆ.
ಈ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಮೊದಲನೇ ತರಗತಿಗೆ ದಾಖಲಾತಿ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಕಿ ವನಿತಾ ಹಾಲಪ್ಪನವರ ಒಂದು ಸಾವಿರ ರೂ. ಠೇವಣಿ ಇಡಲು ನಿರ್ಧರಿಸಿದ್ದಾರೆ. ಜತೆಗೆ ಶಾಲಾ ಬ್ಯಾಗ್ ಹಾಗೂ ನೋಟ್ ಬುಕ್‌ಗಳನ್ನು ನೀಡಲಿದ್ದಾರೆ. ಇನ್ನುಳಿದ ಬೇರೆ ಶಾಲೆಯಿಂದ ಎರಡರಿಂದ ಏಳನೇ ತರಗತಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗೂ ಶಾಲಾ ಬ್ಯಾಗ್ ಹಾಗೂ ನೋಟ್ ಬುಕ್ ನೀಡಲಿದ್ದಾರೆ.
ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆ ಇರುವುದರಿಂದ ಇದನ್ನು ಹೆಚ್ಚಿಸುವ ಬಗ್ಗೆ ಶಿಕ್ಷಕಿ ವನಿತಾ ಹಾಲಪ್ಪನವರ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಶಾಲೆಯ ದಾಖಲಾತಿ ಹೆಚ್ಚಿಸಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂಬುದೇ ಇವರ ದೂರದೃಷ್ಟಿ ಆಗಿದೆ. ಕಳೆದ ವರ್ಷ ಈ ಶಾಲೆಯ ಮೊದಲನೇ ತರಗತಿಯಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದನು. ಈ ವರ್ಷ ಮೊದಲ ತರಗತಿಯ ಸಂಖ್ಯೆ ಏರಿಸಲು ಪಣ ತೊಟ್ಟಿರುವ ಶಿಕ್ಷಕಿ ವನಿತಾ ಈಗಾಗಲೇ ನಗರದ ಅನೇಕ ಕಡೆಗೆ ಲಾಕ್ ಡೌನ್ ವೇಳೆ ಹಾಗೂ ರಜೆ ದಿನದಂದು ತಮ್ಮ ವಾಹನದಲ್ಲಿ ಓಡಾಡಿದ್ದಾರೆ. ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸ್ಲಂ ಪ್ರದೇಶದ ಜನರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಶಿಕ್ಷಕಿಯ ಉತ್ಸಾಹ ನೋಡಿ ಮಕ್ಕಳ ಪಾಲಕರೂ ಶಾಲೆಗೆ ಕಳುಹಿಸಲು ಆಸಕ್ತಿ ಹೊಂದಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಇಂಥ ವಿನೂತನ ಯೋಜನೆಗಳ ಮೂಲಕ ಈ ಶಿಕ್ಷಕಿ ಮಕ್ಕಳ ಮೆಚ್ಚಿನ ಶಿಕ್ಷಕಿಯಾಗಿದ್ದಾರೆ. ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಹಾಗೂ ನೋಟ್ ಬುಕ್ ಹಂಚಿದ್ದಾರೆ. ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು ಪಾಠ ಕಲಿಸುತ್ತಾರೆ. ಹಾಡು-ನೃತ್ಯ ಮಾಡುತ್ತ ಮಕ್ಕಳಿಗೆ ಪಾಠ ಹೇಳುವ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಶಿಕ್ಷಕಿಯ ಕಾರ್ಯಕ್ಕೆ ಡಿಡಿಪಿಐ, ಬಿಇಒ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.