ನನ್ನ ವಿಚಿತ್ರ ಆಸೆಗಳಿಗೆಲ್ಲ ನಿನ್ನ ಸಮ್ಮತಿಯ ಮುದ್ರೆ ಬಿದ್ದರೆ ನನಗದೇ ಸ್ವರ್ಗ. ಇವೆಲ್ಲ ಅತಿಯಾಯಿತೆನ್ನಿಸಿದರೆ ನಿನ್ನೊಂದು ಮುಗುಳ್ನಗೆಯನ್ನಾದರೂ ನನ್ನತ್ತ ಹರಿಸಿಬಿಡು. ಹಾಗಾದರೂ ನನ್ನೆಲ್ಲ ಕನಸುಗಳು ಹಸಿಯಾಗಿರಲಿ, ಹಸಿರಾಗಿರಲಿ.
ಎತ್ತಲಿಂದೆತ್ತಲೋ ಬೀಸುವ ಈ ತಂಗಾಳಿಯ ಮೃದುವಾಣಿ ನಿನ್ನ ನೆನಪಿನ ಗರಿ ಬಿಚ್ಚುತ್ತಲೇ, ಸುತ್ತೆಲ್ಲ ಘಮ ಸೂಸುತ್ತದೆ. ಕಳೆಗಟ್ಟುವ ಮೋಡದಲ್ಲಿ ನಿನ್ನ ಮುನಿಸು ಮನದ ಮೂಲೆಯಲ್ಲಿ ವ್ಯಾಕುಲತೆಯನ್ನು ಹಬ್ಬಿಸುತ್ತದೆ. ಹನಿಯುವ ಸೋನೆಮಳೆ, ಮುಂಗುರುಳ ಹೊರಳಾಟದ ಉತ್ಸಾಹ ಹೆಚ್ಚಿಸುತ್ತದೆ. ಈ ನಡುವೆ ಹುಟ್ಟುವ ಸಣ್ಣಗಿನ ಚಳಿ, ದೀರ್ಘಕಾಲದ ಆಲಿಂಗನದ ಹೆಬ್ಟಾಸೆಯನ್ನು ಮೂಡಿಸಿ, ಮನದೊಳಗೆ ಬಿರುಗಾಳಿ ಏಳಿಸುತ್ತದೆ.
ನಿನ್ನ ಸಾಮೀಪ್ಯ ನನ್ನೀ ಹೃದಯಕ್ಕೆ ಬೃಹತ್ ಜಾತ್ರೆ. ಅಲ್ಲೆಲ್ಲ ಓಡಾಡುವ ನೀ ಬಿಟ್ಟ ಉಸಿರನ್ನು ಕದ್ದು ಹಿಡಿಯುವ ವಿಚಿತ್ರ ಯತ್ನ ನನ್ನದು. ನಿನ್ನೊಂದು ರೆಪ್ಪೆ ಬಡಿತಕ್ಕೂ ನನ್ನೆದೆ ಹೆಜ್ಜೆ ಹಾಕುವ ನರ್ತಕ. ಹುಣ್ಣಿಮೆಯಂತೆ ಅಪರೂಪಕ್ಕೆ ಸೂಸುವ ನಿನ್ನ ಬೆಳ್ನಗು, ಬೃಂದಾವನದಲ್ಲಿನ ಪುಷ್ಪಗಳನ್ನೆಲ್ಲ ಅರಳಿಸುವ ಸುಂದರ ಮಾಯಾಕಲೆ. ನಿನ್ನ ಕುಡಿಕಣ್ಣೋಟ ಒಮ್ಮೆ ಸೆಳೆದರೆ ಮತ್ತೆತ್ತಲೂ ನೋಡದಂತೆ ಕಟ್ಟಿಹಾಕುವ ಮಾಯಾಜಾಲ. ನಿನ್ನ ಆಗಮನದಿಂದ ಬದುಕಿನಲ್ಲಾದ ಬದಲಾವಣೆಗಳ್ಳೋ ಪಟ್ಟಿಗೂ ನಿಲುಕದ್ದು! ನಿನ್ನ ಆಗಮನದ ಪಿಸುಮಾತು ನನ್ನೆದೆಯ ಬಡಿತಕ್ಕೆ ಮೀಟಿದಾಗಲೇ ಪ್ರೇಮ ಕಣೆªರೆದದ್ದು ಸತ್ಯ. ಆ ಪ್ರೇಮ ಸಮ್ಮತಿಯ ಕಣ್ಣಾಮುಚ್ಚಾಲೆ ಆಟದಲ್ಲೇ ಸಿಹಿಸಂಕಟದ ಸಂಭ್ರಮವನ್ನು ಶಾಶ್ವತವಾಗಿ ಅನುಭವಿಸುವ ಆಸೆ ಮೂಡಿದ್ದು ಸಹಜವೇ.
ನನ್ನ ಕೆಲ ಆಸೆಗಳನ್ನು ನಿನ್ನೆದುರು ಹರವಿಡುವೆ. ನೀ ಹೋದ ಜಾಗದಲ್ಲೆಲ್ಲ, ನೀ ಕಾಣುವ ವಸ್ತುವಲ್ಲೆಲ್ಲ ನನ್ನ ಬಿಂಬವೇ ಮೂಡಬೇಕು. ನಿನ್ನ ಗೆಜ್ಜೆದನಿಯ ಸಂಗೀತದಲ್ಲಿ ನನ್ನೆದೆ ಬಡಿತದ ನಾದವಿರಬೇಕು. ನಿನ್ನುಸಿರೂ ಕೂಡ ನನ್ಹೆಸರ ಕನವರಿಸಬೇಕು. ನಿನ್ನ ಆ ಕೇಶರಾಶಿಗೆ ನನ್ನ ಗಲ್ಲ ಸವರುವ ಹೆಬ್ಬಯಕೆ ಸುಳಿಯಬೇಕು. ನಿನ್ನ ಕಣ್ಣೋಟ ನನ್ನೊಳಗೆ ಕ್ಷಣಮಾತ್ರಕ್ಕಾದರೂ ಬಂಧಿಯಾಗಬೇಕು. ನಿನ್ನೊಂದು ಬಿಸಿಯಪ್ಪುಗೆಯ ಬಂಧನದೊಳಕ್ಕೆ ಸಿಕ್ಕಿ ಬಂಧಿಯಾಗುವ ಅದೃಷ್ಟಶಾಲಿ ನಾನಾಗಬೇಕು. ಆ ನನ್ನ ವಿಚಿತ್ರ ಆಸೆಗಳಿಗೆಲ್ಲ ನಿನ್ನ ಸಮ್ಮತಿಯ ಮುದ್ರೆ ಬಿದ್ದರೆ ನನಗದೇ ಸ್ವರ್ಗ. ಇವೆಲ್ಲ ಅತಿಯಾಯಿತೆನ್ನಿಸಿದರೆ ನಿನ್ನೊಂದು ಮುಗುಳ್ನಗೆಯನ್ನಾದರೂ ನನ್ನತ್ತ ಹರಿಸಿಬಿಡು. ಹಾಗಾದರೂ ನನ್ನೆಲ್ಲ ಕನಸುಗಳು ಹಸಿಯಾಗಿರಲಿ, ಹಸಿರಾಗಿರಲಿ. ನೀ ಜೊತೆಗಿದ್ದರೆ ಕತ್ತಲೂ ಬೆಳಗು, ಬೆಳಗೂ ನಲ್ಮೆಯ ಬೆಳದಿಂಗಳು!
ಅರ್ಜುನ್ ಶೆಣೈ