ಹಣೆಗೆ ಬೊಟ್ಟು ಚಂದ,
ಸರೋವರಕ್ಕೆ ತಾವರೆ ಚಂದ
ನನಗೆ ನೀನೇ ಚಂದ …..
ಮಕರ ಸಂಕ್ರಾಂತಿಯ ಶುಭಾಶಯಗಳು
Advertisement
ಅಂತ ಬರೆದಿದ್ದ ಗ್ರೀಟಿಂಗ್ ಕಾರ್ಡ್ ನನ್ನ ಡೆಸ್ಕಿನ ಒಳಗೆ ಸಿಕ್ಕಿದಾಗ ಮನದೊಳಗೆ ನೂರಾರು ಭಾವ. ಇದನ್ನು ಯಾರು ಬರೆದಿರಬಹುದು? ಎಷ್ಟು ದಿನದಿಂದ ನನ್ನ ಗಮನಿಸುತ್ತಿದ್ದವೋ ಆ ಕಣ್ಣುಗಳು? ಪೆದ್ದಿಯಾದ ನನಗ್ಯಾಕೆ ಅದು ಕಾಣಿಸಲಿಲ್ಲ? ಯಾರಿರಬಹುದು ಈ ಹುಡುಗ? ಅಂತೆಲ್ಲಾ ಯೋಚಿಸಿ ಕುತೂಹಲ ಹೆಚ್ಚಿತು.ಇಷ್ಟು ದಿನ ಹತೋಟಿಯಲ್ಲಿದ್ದ ಮನಸ್ಸು ಕೈ ತಪ್ಪುತ್ತಿದೆಯಾ ಅಂತ ದಿಗಿಲೂ ಆಯ್ತು.
Related Articles
Advertisement
ನನ್ನ ಹೆಸರ ಹೇಳದೇ, ಮೀನಿನ ಕಣ್ಣವಳೇ ಅಂತ ಕರೆವ ಪರಿಯಿಂದ ಹಿಡಿದು, ನೀನು ಕೊಟ್ಟ ಮೊದಲ ಗ್ರೀಟಿಂಗ್ ಕಾರ್ಡ್, ಆ ನವಿಲುಗರಿ, ಕಿವಿಯ ಝುಮುಕಿ, ಅಷ್ಟೇ ಅಲ್ಲ; ನೀ ಕೊಡಿಸಿದ ಸಣ್ಣ ಚಾಕಲೇಟ್‌ನ ಕವರ್ ಕೂಡಾ ಬೀರುವಿನಲ್ಲಿ ಭದ್ರವಾಗಿ ಎತ್ತಿಟ್ಟಿದ್ದೇನೆ. ಆದರೆ, ಮೊನ್ನೆ ನನಗೊಂದು ಆಘಾತಕಾರಿ ವಿಷಯ ಗೊತ್ತಾಯಿತು. ಸ್ನೇಹಿತೆಗೆ ಕೊಟ್ಟ ನೋಟ್‌ಬುಕ್‌ನಲ್ಲಿ ನೀನು ಕೊಟ್ಟಿದ್ದ ಆ ಗ್ರೀಟಿಂಗ್ಸ್ ಇಟ್ಟಿದ್ದೆ. ಇಷ್ಟು ದಿನ ಮುಚ್ಚಿಟ್ಟ ಪ್ರೀತಿ ಅವಳಿಗೂ ಗೊತ್ತಾಗಿಬಿಟ್ಟಿತು.
ಅವಳು ಹೇಳಿದ್ದನ್ನು ಕೇಳಿ, ನಿಂತ ನೆಲ ಕುಸಿದಂತಾಯ್ತು. “ಓಹೋ ಇವನಾ ನಿನ್ನ ಹೀರೋ? ಲೇ ಪೆದ್ದಿ, ನಿನ್ನ ಥರಾ ಅದೆಷ್ಟು ಜನರನ್ನು ಬಕರಾ ಮಾಡಿದ್ದಾನೋ ಅವನು. ನನಗೂ ಹೀಗೆ ಬರೆದು ಕೊಟ್ಟಿದ್ದ. ಅವನಿಗೆ ವರ್ಷವಿಡೀ ಮತ್ತೇನು ಕೆಲಸ. ಒಂದೇ ಕವನವನ್ನು ಎಲ್ಲರಿಗೂ ಬರೀತಾನೆ. ನಾನು ಆ ಕಾರ್ಡ್‌ನ ವಾಪಸ್ ಅವನ ಮುಖದ ಮೇಲೆ ಎಸೆದಿದ್ದೆ. ಅದನ್ನೇ ಎತ್ತಿ ಜೂನಿಯರ್ ಒಬ್ಬಳಿಗೆ ಕೊಟ್ಟಿದ್ದಾನಂತೆ. ನೀನಿನ್ನೂ ಅದನ್ನು ಇಟ್ಕೊಂಡು ಪೂಜೆ ಮಾಡ್ತಿದ್ದೀಯಲ್ಲ?’ ಅಂದಾಗ ಕುಸಿದುಬಿದ್ದಿದ್ದೆ.
ಹೋಗಿ ಹೋಗಿ, ಕೃಷ್ಣನ ತುಳಸಿಯಾದೆನಾ ನಾನು? ನಿನ್ನಿಂದ ಮೋಸಕ್ಕಿಂತ ನನಗೆ ಅಪಮಾನವಾಗಿದೆ. ನನ್ನನ್ನು ಅಪಮಾನಿಸಿದವರನ್ನು ನಾನು ಸುಮ್ಮನೆ ಬಿಡೋದಿಲ್ಲ. ಏನ್ ಮಾಡ್ತೀನಿ ಅಂತ ನೋಡ್ತಾ ಇರು. “ಪ್ಲೀಸ್, ಬದಲಾಗು’ ಅಂತ ಬೇಡಿಕೊಳ್ಳೋದಿಕ್ಕೆ ನಾನು ಪತ್ರ ಬರೆದಿದ್ದೇನೆ ಅಂತ ಒಕ್ಕಣೆ ನೋಡಿ ಭಾವಿಸಬೇಡ. ಯಾವುದನ್ನೂ ನಾನು ಮರೆತಿಲ್ಲ ಅಂತ ಹೇಳ್ಳೋದಿಕ್ಕೆ ಅಷ್ಟೆಲ್ಲಾ ಬರೆದಿದ್ದು. ಇನ್ಯಾವತ್ತೂ ನನ್ನ ಮುಖ ನೋಡಬೇಡ.
ಇಂತಿಅಂಜನಾ ಗಾಂವ್ಕರ್, ದಬ್ಬೆಸಾಲ್