ಕಲಬುರಗಿ: ನಂಬಿಕೆ ಹಾಗೂ ಆತ್ಮ ವಿಶ್ವಾಸ- ದೃಢ ನಿರ್ಧಾರದೊಂದಿಗೆ ಮುನ್ನುಗ್ಗಿದರೆ ಎಂತಹ ಕೆಲಸಗಳಾದರೂ ಒಂದೊಂದಾಗಿ ತಾನೆ ಕಾರ್ಯಸಿದ್ಧಿಯಾಗುತ್ತವೆ ಎಂದು ಹಿರಿಯ ಪತ್ರಕರ್ತ ಹಾಗೂ ಶರಣಬಸವ ವಿಶ್ವವಿದ್ಯಾಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್) ಶಾಲೆ ಸುವರ್ಣ ಮಹೋತ್ಸವ ಹಾಗೂ ಶಾಲೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ಮೂರನೇ ದಿನದ ಪ್ರೇರಣಾತ್ಮಕ ಉಪನ್ಯಾಸ ನೀಡಿದ ಅವರು, ನಂಬಿಕೆ ಮತ್ತು ಆತ್ಮಸ್ಥೈರ್ಯ ಮೈಗೂಡಿಸಿಕೊಂಡರೆ ಮಾತ್ರ ಸಾಧನೆ ಮಾಡುವುದು ಸುಲಭವಾಗಲಿದೆ.
ಸಕಾರಾತ್ಮಕವಾಗಿ ಸಂವಹನ ನಡೆಸಬೇಕು. ಆಗ ಮಾತ್ರ ಜೀವನದಲ್ಲಿ ಹೀಗಾಯಿತಲ್ಲ ಎಂದು ಪರಿತಪಿಸುವ ಪ್ರಮೇಯವೇ ಬರಲ್ಲ. ಜೀವನದಲ್ಲಿ ಹಿಂದೆ ನಡೆದುಕೊಂಡ ದಾರಿಯನ್ನು ಹಿಂದುರುಗಿ ನೋಡುವ ಮೂಲಕ ಮುಂದಿನ ಗುರಿಗೆ ಶಕ್ತಿ ಎಂಬ ಇಂಧನ ತುಂಬಿಸಿಕೊಳ್ಳಬೇಕು. ಆಗಲೇ ಯಶಸ್ವಿನ ಮೆಟ್ಟಲು ಹತ್ತಲು ಸಾಧ್ಯವಾಗುತ್ತದೆ.
ಬಹು ಮುಖ್ಯವಾಗಿ ಕಠಿಣ ಪರಿಶ್ರಮದಿಂದ ಯಶೋಗಾಥೆಗಳಾಗಬಹುದು ಎಂದು ಹೇಳುವ ಮೂಲಕ ತಮ್ಮ ತಂದೆ ಅಗಲಿಕೆ ಬಳಿಕ ತಾಯಿ-ಸಹೋದರಿ ಜತೆಗೆ ಬೆಳೆದಿರುವುದು ಹಾಗೂ ಜೀವನದಲ್ಲಿ ಎದುರಾದ ಬಂಡೆಗಲ್ಲಿನಂತ ಸವಾಲುಗಳನ್ನು ಎದುರಿಸಿದ್ದನ್ನು ಶಿವಾನಂದನ್ ಎಳೆ-ಎಳೆಯಾಗಿ ವಿವರಿಸಿದರು.
ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಸ್ಯೆ ಮತ್ತು ಸವಾಲುಗಳು ನಮಗೆ ಬೆಳೆಯಲು ಸ್ಫೂರ್ತಿ ನೀಡುತ್ತವೆ. ಮಾಡುವ ಕಾಯಕದಲ್ಲಿ ನಿಷ್ಠೆ, ಶ್ರದ್ಧೆಯಿಂದ ಕಠಿಣ ಪರಿಶ್ರಮದಿಂದ, ಬದ್ಧತೆಯಿಂದ ಕೆಲಸವನ್ನು ಮಾಡಿದರೆ ಯಶಸ್ಸಿ ವ್ಯಕ್ತಿಗಳಾಗಬಹುದು ಎಂಬುದನ್ನು ಶಿವಾನಂದನ್ ನೋಬೆಲ್ ಸಾಧಕರ ಹೆಸರುಗಳನ್ನು ಉಲ್ಲೇಖೀಸಿ ಉದಾಹರಣೆ ನೀಡಿದರು. ಎಸ್‌ಬಿಆರ್ ಪ್ರಾಚಾರ್ಯ ಪ್ರೊ| ಎನ್.ಎಸ್. ದೇವರಕಲ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಖ್ಯಾತ ನರರೋಗ ತಜ್ಞ ಡಾ| ಭರತ ಕೋಣಿನ್, ಉಪಾಧ್ಯಕ್ಷ ಬಸವರಾಜ ಖಂಡೇರಾವ್, ದಿನೇಶ ಪಾಟೀಲ, ಗುರುಬಸಪ್ಪ ಕಣಕಿ, ಪ್ರಶಾಂತ ಮಾನಕರ್, ಡಾ| ಸುಧಾ ಹಾಲಕಾಯಿ, ಉದಯಕುಮಾರ ನವಣಿ, ಶ್ರೀಕೃಷ್ಣ ಸತಾಳಕರ್, ಸಿದ್ದು ಪಾಟೀಲ ತೆಗನೂರ, ಸಂತೋಷ ಬಿಲಗುಂದಿ ಇದ್ದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿರುವ ಅಪ್ಪ ಪಬ್ಲಿಕ್ ಶಾಲೆ ಪ್ರಾಚಾರ್ಯ ಶಂಕರಗೌಡ ಹೊಸಮನಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.