ಶಿವಮೊಗ್ಗ : ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀರುಗೇಟು ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಿಂದಿನ ಸರಕಾರಕ್ಕೆ ನಮ್ಮ ಸರ್ಕಾರ ವನ್ನು ಹೋಲಿಸುವುದಕ್ಕೆ ಹೋಗುವುದಿಲ್ಲ.ಬರ ಬಂದಾಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಸಚಿವರು ಜಿಲ್ಲೆಗಳಿಗೆ ಹೋಗಲಿಲ್ಲ, ರೈತರಿಗೆ ಧೈರ್ಯ ತುಂಬಲಿಲ್ಲ ಎಂದು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು,ಮೈತ್ರಿ ಸರಕಾರ ಬಂದಾಗಲೂ ಬರಪೀಡಿತ ಪ್ರದೇಶಗಳಿಗೆ ಜೊತೆಯಾಗಿ ಹೋಗಲು ಹೇಳಿದ್ದೇ. ಸಿದ್ದರಾಮಯ್ಯ, ದೇವೇಗೌಡರು ಒಟ್ಟಿಗೆ ಹೋಗಿ ರೈತರಿಗೆ ಧೈರ್ಯ ಹೇಳಲಿಲ್ಲ ಕಾಂಗ್ರೆಸ್ ಸರ್ಕಾರ ಯಾಕೆ ಸತ್ತು ಹೋಯಿತು ಅಂದರೆ ರೈತರ ಸಂಕಷ್ಟಗಳಿಗೆ ಸ್ಪಂದಿಸದ ಕಾರಣಕ್ಕೆ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಈಗ ರಾಜ್ಯ ಸರಕಾರ ನಿರೀಕ್ಷೆಗೆ ಮೀರಿ ಕೆಲಸ ಮಾಡುತ್ತಿದೆ..ಜನರ ಆಶೀರ್ವಾದ ಇದೆ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿರುವುದನ್ನು ಈಗ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರಕ್ಕೆ ಮತ್ತೆ ಜೀವ ಬರುವ ಪ್ರಶ್ನೆ ಇಲ್ಲ, ಅವರು ಮತ್ತೆ ಮುಖ್ಯಮಂತ್ರಿ ಆಗುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರಕಾರ ಬೀಳುವುದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದರು.
ಎಚ್ ಡಿಕೆ ಹೇಳಿಕೆ ವಿಚಾರಕ್ಕೆ ಮಾತಾನಾಡಿದ ಅವರು ಕುಮಾರಸ್ವಾಮಿ ಹೇಳಿಕೆಯನ್ನು ಸ್ವಾಗತಿಸುತ್ತೇನೆ.ನಮ್ಮದೇ ಪೂರ್ಣ ಬಹುಮತದ ಸರಕಾರ ಇರುವಾಗ ಅಂತಹ ಅವಕಾಶ ಇರುವುದಿಲ್ಲ. ಅಲ್ಲಿಯವರೆಗೆ ಹೋಗುವ ಪ್ರಶ್ನೆ ಬರುವುದಿಲ್ಲ, ಅವರ ರಕ್ಷಣೆ ನಮಗೆ ಅವಶ್ಯಕತೆ ಇಲ್ಲ ಎಂದರು.
ನಾಳೆ ಉಪಚುನಾವಣೆ ಆದರೆ 15 ಕ್ಕೆ 15 ಸ್ಥಾನ ಬಿಜೆಪಿ ಗಳಿಸಲಿದೆ,ನೆರೆ ಸಂತ್ರಸ್ತರಿಗೆ ಇಡೀ ರಾಜ್ಯದಲ್ಲಿ ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರ ಕೂಡ ಅಗತ್ಯ ನೆರವು ನೀಡುತ್ತಲೇ ಇದೆ ಎಂದು ಹೇಳಿದರು.