Advertisement

40 ಸ್ಥಾನ ಗೆದ್ದರೆ ಕೇರಳದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆಯೇ? ಏನಿದು ಲೆಕ್ಕಾಚಾರ

09:21 AM Mar 16, 2021 | ನಾಗೇಂದ್ರ ತ್ರಾಸಿ |

ಮಣಿಪಾಲ: ದೇವರನಾಡು ಕೇರಳದಲ್ಲಿ ಚುನಾವಣಾ ಪ್ರಚಾರದ ಕಾವು ಜೋರಾಗತೊಡಗಿದೆ. ಆಡಳಿತಾರೂಢ ಎಲ್ ಡಿಎಫ್, ಪ್ರತಿಪಕ್ಷ ಯುಡಿಎಫ್ ಹಾಗೂ ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಏತನ್ಮಧ್ಯೆ ಕೇರಳದ ಹಿರಿಯ ಬಿಜೆಪಿ ಮುಖಂಡ ಕುಮ್ಮನಮ್ ರಾಜಶೇಖರನ್(68) ನೇಮೊಮ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.

Advertisement

ಕುಮ್ಮನಮ್ ರಾಜಶೇಖರನ್ ಅವರು 2015 ಮತ್ತು 2018ರಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ನಂತರ 2018ರಲ್ಲಿ ಮಿಜೋರಾಂನ ರಾಜ್ಯಪಾಲರನ್ನಾಗಿ ರಾಜಶೇಖರನ್ ಅವರು ನೇಮಕ ಮಾಡಲಾಗಿತ್ತು. ಇದೀಗ ಮತ್ತೆ ನೇಮೊಮ್ ನಿಂದ ಅಖಾಡಕ್ಕಿಳಿಯುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮರಳಿದ್ದು, ಈ ಸಂದರ್ಭದಲ್ಲಿ ದ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ…

ಕೇರಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಯಾವ ಸಂದೇಶ ನೀಡಲಿದೆ?

ಕುಮ್ಮನಮ್:  ನಾವು ರಾಜ್ಯದಲ್ಲಿ ಅಭಿವೃದ್ದಿ ಕುರಿತು ಚರ್ಚಿಸುವುದು ನಮ್ಮ ಅಜೆಂಡವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಯುಡಿಎಫ್ ಮತ್ತು ಎಲ್ ಡಿಎಫ್ ಸರ್ಕಾರಗಳ ವೈಫಲ್ಯತೆಗಳ ಮೇಲೆ ಬೆಳಕು ಚೆಲ್ಲುತ್ತೇವೆ.  ಈ ಬಾರಿಯ ಚುನಾವಣೆಯಲ್ಲಿ “ ಹೊಸ ಕೇರಳದ ಜತೆ ಮೋದಿ” ಎಂಬುದು ಪಕ್ಷದ ಟ್ಯಾಗ್ ಲೈನ್ ಆಗಿದೆ. ನಾವು ನೂತನ ಕೇರಳವನ್ನು ನಿರ್ಮಾಣ ಮಾಡಲಿದ್ದೇವೆ. ಕೇರಳದಲ್ಲಿ ಶ್ರೀಮಂತವಾದ ಪ್ರಕೃತಿ ಸೌಂದರ್ಯ, ಸಾಂಪ್ರದಾಯಿಕ ಕೈಗಾರಿಕೆಗಳು, ಭೂಮಿ, ನೀರು, ಕೆಲಸದಿಂದ ವಂಚಿತವಾಗಿದ್ದು, ಇವೆಲ್ಲವೂ ಜನರ ಪ್ರಮುಖ ಬೇಡಿಕೆಯಾಗಿದೆ. ಕಳೆದ 64 ವರ್ಷಗಳ ಕಾಲ ಈ ಎರಡು (ಎಲ್ ಡಿಎಫ್, ಯುಡಿಎಫ್) ಪಕ್ಷಗಳು ಆಡಳಿತ ನಡೆಸಿದ್ದು, ಎಲ್ಲಾ ಕ್ಷೇತ್ರಗಳೂ ಅಭಿವೃದ್ದಿ ಇಲ್ಲದೇ ಬಿದ್ದು ಹೋಗಿದ್ದು, ರಾಜ್ಯದ ಸಾಲ ಮಾತ್ರ ಗಗನಕ್ಕೇರುವಂತಾಗಿದೆ. ಕೇರಳದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.

ಸರ್ಕಾರದ ಸಮಾಜ ಕಲ್ಯಾಣ ಪಿಂಚಣಿ ಮತ್ತು ಪಿಡಿಎಸ್ ಅಂಗಡಿಗಳ ಮೂಲಕ ಆಹಾರ ಕಿಟ್ ವಿತರಿಸುವ ಯೋಜನೆಯಿಂದ ಎಲ್ ಡಿಎಫ್ ಜನರ ವಿಶ್ವಾಸ ಗಳಿಸಿದೆ ಎಂಬ ಹೇಳಿಕೆಗೆ ಏನೆನ್ನುತ್ತೀರಿ?

Advertisement

ಕುಮ್ಮನಮ್: ಕೇಂದ್ರ ಸರ್ಕಾರ ನೀಡುವ ಆಹಾರ ಪದಾರ್ಥವನ್ನೇ ಅವರು(ಎಲ್ ಡಿಎಫ್) ಬ್ಯಾಗ್ ನಲ್ಲಿ ಹಾಕಿ ವಿತರಿಸುತ್ತಿದ್ದಾರೆ ಅಷ್ಟೇ. ಕೇಂದ್ರ ಸರ್ಕಾರ ಬರೋಬ್ಬರಿ 15.5 ಲಕ್ಷ ಟನ್ ಗಳನ್ನು ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿದೆ. ಆದರೆ ಎಲ್ ಡಿಎಫ್ ಎಷ್ಟು ವರ್ಷಗಳ ಕಾಲ ಉಚಿತವಾಗಿ ಆಹಾರ ಪದಾರ್ಥಗಳನ್ನು ನೀಡುತ್ತದೆ? ರಾಜ್ಯದ ಜನರಿಗೆ ಅಗತ್ಯವಿರುವುದು ಕೆಲಸ, ಮನೆ, ನೀರು ಮತ್ತು ವಿದ್ಯುತ್.

ಈ ಎರಡು ಪಕ್ಷಗಳು ರಾಜ್ಯದಲ್ಲಿ ಏನು ಸಾಧನೆ ಮಾಡಿದೆ. ನೀವು ಕೇಂದ್ರ ಸರ್ಕಾರದ ನರೇಗಾ ಯೋಜನೆಯನ್ನೇ ತೆಗೆದುಕೊಳ್ಳಿ, ಕೇಂದ್ರ ಸರ್ಕಾರ 2,100 ಕೋಟಿ ರೂಪಾಯಿ ಮತ್ತು ಜನರಿಗೆ ಉದ್ಯೋಗವನ್ನು ನೀಡಿದೆ. ಕೇಂದ್ರದ ಗ್ರಾಮ್ ಸಡಕ್ ಯೋಜನೆಯಡಿಯಲ್ಲಿ ರಾಜ್ಯದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆಯಡಿ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ತ್ರಿವೇಂಡ್ರಂ ಕೊಲ್ಲಂ, ಅಳಪ್ಪುಝಾ ಬೈಪಾಸ್ ಗಳ ಅಭಿವೃದ್ದಿಯಾಗಿದೆ. ರಾಜ್ಯ ಸರ್ಕಾರ ಕೇವಲ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ನಾವು(ಬಿಜೆಪಿ) ಹಿಂದಿನ ಎಲ್ ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳ ಚಾರ್ಜ್ ಶೀಟ್ ಅನ್ನು ಜನರ ಮುಂದೆ ಇಡಲಿದ್ದೇವೆ.

ಕೇರಳದಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಮತದಾರರನ್ನು ಸೆಳೆಯಲು ಬಿಜೆಪಿ ಯಶಸ್ವಿಯಾಗುತ್ತಾ?

ಕುಮ್ಮನಮ್: ಕೇರಳದಲ್ಲಿರುವ ಕ್ರಿಶ್ಚಿಯನ್ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದು ವೇಳೆ ನೀವು ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಯೋಜನೆಗಳನ್ನು ಗಮನಿಸಿದರೆ ಅಲ್ಲಿ ನಿಮಗೆ ತಾರತಮ್ಯ ಕಣ್ಣಿಗೆ ರಾಚುತ್ತದೆ. ಇದಕ್ಕೆ ಮೊದಲು ಕಡಿವಾಣ ಬೀಳಬೇಕಾಗಿದೆ. ಲವ್ ಜಿಹಾದ್ ವಿಚಾರದಲ್ಲಿ ತಮ್ಮ ಸಮುದಾಯ ಬಲಿಪಶುವಾಗುತ್ತಿದೆ ಎಂದು ಕ್ರಿಶ್ಚಿಯನ್ನರು ಆರೋಪಿಸುತ್ತಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಸಮಸ್ಯೆಯನ್ನು ಬಿಜೆಪಿ ಮಾತ್ರ ಬಗೆಹರಿಸಬಲ್ಲದು ವಿನಃ ಸಿಪಿಎಂ ಮತ್ತು ಕಾಂಗ್ರೆಸ್ ನಿಂದ ಸಾಧ್ಯವಿಲ್ಲ.

ಕೇರಳದಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಯಾವುದು?

ಕುಮ್ಮನಮ್: ನಮಗೆ ಕೇರಳದಲ್ಲಿ ಎಲ್ ಡಿಎಫ್ ಮತ್ತು ಯುಡಿಎಫ್ ಒಂದೇಯಾಗಿದೆ. ಎರಡು ಪಕ್ಷಗಳು ದುರ್ಬಲವಾಗಿದ್ದು, ಈಗ ಒಟ್ಟಾಗಿ ಬಿಜೆಪಿಯನ್ನು ವಿರೋಧಿಸುತ್ತಿದೆ. ಬಿಜೆಪಿಯನ್ನು ಸೋಲಿಸಲು ಎರಡು ಪಕ್ಷಗಳು ಎಲ್ಲವನ್ನೂ ಮಾಡುತ್ತಿದೆ. ಎರಡು ಪಕ್ಷಗಳ ಗೆಲುವು ಕಠಿಣವಾಗಿದ್ದು, ಕೇರಳದಲ್ಲಿ ಬಿಜೆಪಿಗೆ ಈ ಬಾರಿ ಜನತೆ ಆಶೀರ್ವಾದ ನೀಡಲಿದ್ದಾರೆ.

ಒಂದು ವೇಳೆ 30ರಿಂದ 40 ಸ್ಥಾನ ಬಿಜೆಪಿ ಗೆದ್ದರೆ ಸರ್ಕಾರ ರಚಿಸುತ್ತೀರಾ? ಇದು ಹೇಗೆ ಸಾಧ್ಯ?

ಹೌದು ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಈ ಹೇಳಿಕೆ ಕೊಟ್ಟಿದ್ದಾರೆ. ನಿಜವಾಗಿಯೂ ಒಂದು ವೇಳೆ ನಮಗೆ 40 ಸ್ಥಾನ ಸಿಕ್ಕಿದರೆ, ಕೇರಳದಲ್ಲಿ ಮೈತ್ರಿಕೂಟ ಬಿದ್ದುಹೋಗಲಿದೆ. ಯಾವ ಪಕ್ಷಕ್ಕೂ ಬಹುಮತ ದೊರಕುವುದಿಲ್ಲ. ಇದು ರಾಜ್ಯದಲ್ಲಿನ ಮೈತ್ರಿ ಕೂಟದ ಮಾದರಿಯನ್ನೇ ಬದಲಾಯಿಸಿಬಿಡಲಿದೆ. ಹೀಗೆ ಹೊಸ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಲ್ಲಿ ಎನ್ ಡಿಎ ಕೂಡಾ ಅಧಿಕಾರದ ಗದ್ದುಗೆ ಏರಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next