ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಾಜಿ ಸಲಹೆಗಾರರೊಬ್ಬರು ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಮಂಗಳವಾರ ಆನ್‌ಲೈನ್‌ನಲ್ಲಿ ಹೊರಹೊಮ್ಮಿದ ವಿಡಿಯೋಗಳಲ್ಲಿ ಕಂಡುಬಂದಂತೆ ನ್ಯೂಯಾರ್ಕ್ ನಗರದ ಆಹಾರ ಮಾರಾಟಗಾರರಿಗೆ ಕಿರುಕುಳ ನೀಡುತ್ತಿರುವುದು ಕೆಮರಾದಲ್ಲಿ ಸೆರೆಯಾಗಿದೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋ ದಲ್ಲಿ ಅಮೆರಿಕದ ಮಾಜಿ ಅಧಿಕಾರಿ ಸ್ಟುವರ್ಟ್ ಸೆಲ್ಡೋವಿಟ್ಜ್, ಪ್ರವಾದಿ ಮತ್ತು ಕುರಾನ್ ಬಗ್ಗೆ ಪ್ರಚೋದನಕಾರಿ ಟೀಕೆಗಳನ್ನು ಮಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ನಡೆಯುತ್ತಿರುವ ಸಂಘರ್ಷದಲ್ಲಿ 4,000 ಪ್ಯಾಲೇಸ್ತೀನಿಯನ್ ಮಕ್ಕಳನ್ನು ಕೊಂದಿರುವುದು ಸಾಕಾಗಿಲ್ಲ ಎಂದು ಅವರು ಹೇಳುವುದನ್ನು ಕೇಳಬಹುದು.
ಸೆಲ್ಡೋವಿಟ್ಜ್ ವ್ಯಾಪಾರಸ್ಥರೊಬ್ಬರನ್ನು “ಭಯೋತ್ಪಾದಕ” ಎಂದು ಕರೆದು ಹಮಾಸ್ ಅನ್ನು ಬೆಂಬಲಿಸುತ್ತಿದ್ದೀರಿ ಎಂದು ಆರೋಪಿಸಿದರು. ಮತ್ತೊಂದು ವಿಡಿಯೋದಲ್ಲಿ, “ವಲಸೆ ಬಂದಿರುವ ಸ್ನೇಹಿತರು” ಎಂದು ಉಲ್ಲೇಖಿಸಿದ್ದಾರೆ. “ಮುಖಬಾರತ್” ಎಂದು ಉಲ್ಲೇಖಿಸಲಾಗಿದ್ದು ಅದು ಈಜಿಪ್ಟಿನ ಗುಪ್ತಚರ ಸಂಸ್ಥೆಯನ್ನು ಸೂಚಿಸುತ್ತದೆ.
ಈ ವೇಳೆ ವ್ಯಾಪಾರಿ ಪದೇ ಪದೇ ವಿಚಾರ ಮಾತನಾಡದಿರಲು ಕೇಳುತ್ತಾನೆ, ಇಂಗ್ಲಿಷ್ ಮಾತನಾಡುವುದಿಲ್ಲ ಎಂದೂ ಹೇಳುತ್ತಾನೆ. ಈ ವೇಳೆ ಸೆಲ್ಡೋವಿಟ್ಜ್, “ನಾನೇಕೆ ಹೋಗಬೇಕು ಹೇಳಿ? ನಾನು ಇಲ್ಲಿ ನಿಂತಿದ್ದೇನೆ. ನಾನು ಅಮೆರಿಕನ್. ಇದು ಸ್ವತಂತ್ರ ದೇಶ. ಇದು ಈಜಿಪ್ಟ್‌ನಂತಲ್ಲ,” ಎಂದು ವ್ಯಾಪಾರಸ್ಥ ನನ್ನ ಇಂಗ್ಲಿಷ್ ಮಾತನಾಡದಿದ್ದಕ್ಕಾಗಿ ಟೀಕಿಸಿ, ಯುಎಸ್‌ನಲ್ಲಿ ಪರವಾನಗಿ ಮತ್ತು ವೀಸಾ ಇಲ್ಲದೆ ಕೆಲಸ ಮಾಡುತ್ತಿದ್ದೀರಿ ಎಂದು ಆರೋಪಿಸುತ್ತಾರೆ.
ಈ ಕುರಿತು ಸೆಲ್ಡೋವಿಟ್ಜ್ ಅವರು ಪ್ರತಿಕ್ರಿಯಿಸಿದ್ದು ”ಹಮಾಸ್‌ಗೆ ಬೆಂಬಲ ವ್ಯಕ್ತಪಡಿಸಿದ ನಂತರ ವ್ಯಾಪಾರಿಯೊಂದಿಗೆ ಭಿನ್ನಾಭಿಪ್ರಾಯಕ್ಕೆ ಸಿಲುಕಿದೆ ಎಂದು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ. ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ವಿಷಾದಿಸುವುದಾಗಿ ಹೇಳಿದರು, ಆದರೆ ತಾನು ಇಸ್ಲಾಮೋಫೋಬಿಕ್ ಎನ್ನುವುದನ್ನು ತೀವ್ರವಾಗಿ ನಿರಾಕರಿಸಿದರು.
ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಕ್ತಾರರು ಘಟನೆಯ ಬಗ್ಗೆ ತಿಳಿದಿದೆ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.