ಕಂಪ್ಲಿ: ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದಲ್ಲಿ ಬೆಳೆಗಳಿಗೆ ಸಾಕಾಗುವಷ್ಟು ನೀರು ಇಲ್ಲದೆ ಇರುವುದರಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸಲು ಸಾಧ್ಯವಾಗಿಲ್ಲ. ಆದರೆ ಜಲಾಶಯಕ್ಕೆ 75ರಿಂದ 80 ಟಿಎಂಸಿಯಷ್ಟು ನೀರು ಸಂಗ್ರಹವಾದರೆ ರೈತರಿಗೆ ಎರಡನೇ ಬೆಳೆಗೆ ನೀರು ಬಿಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಭರವಸೆ ನೀಡಿದರು.
ಮಂಗಳವಾರ ಗಂಗಾವತಿಗೆ ತೆರಳುವ ಮುನ್ನ ಕಂಪ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ತುಂಗಭದ್ರಾ ಜಲಾಯಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಲಾಶಯದಲ್ಲಿ ನೀರಿಲ್ಲದೇ ಇರುವುದರಿಂದ ಆ.28ರಂದು ನಡೆಯುವ ಸಭೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಬಿಡುವ ಬಗ್ಗೆ ಅಂರ್ತಿಮ ತೀರ್ಮಾನ ಸಭೆ ಕೈಗೊಳ್ಳಲಿದೆ ಎಂದು ತಿಳಿಸಲಾಗಿದೆ. ಈಗ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ನೋಡಿದರೆ ಆ.28ರ ಸಭೆಯಲ್ಲಿ ನೀರು ಬಿಡುವ ಬಗ್ಗೆ ನಿರ್ಣಯಿಸುವುದು ಆಸಾಧ್ಯ ಎಂದು ಹೇಳಬಹುದಾಗಿದೆ ಎಂದು ತಿಳಿಸಿದರು.
ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಪ್ರತಿದಿನ 7500 ಕ್ಯೂಸೆಕ್ಸ್‌ನಂತೆ ನೀರನ್ನು 90 ದಿನಗಳ ಕಾಲ ಬಿಡಬೇಕಾದರೆ ಕನಿಷ್ಠ 75 ಟಿಎಂಸಿ ನೀರು ಬೇಕಾಗುತ್ತದೆ. ಆದ್ದರಿಂದ ಇದಿಗ ಕೃಷಿ ಚಟುವಟಿಕೆಗಳಿಗೆ ನೀರು ಬಿಡುವುದು ಆಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಜಲಾಶಯದಲ್ಲಿ ನೀರಿಲ್ಲದೆ ಇರುವುದರಿಂದ ರೈತರು ಯಾರದೋ ಮಾತು ಕೇಳಿ ಬಿತ್ತನೆ, ನಾಟಿ ಕಾರ್ಯದಲ್ಲಿ ತೊಡಗಬಾರದು. ಏಕೆಂದರೆ ನೀರು ಬಿಡಬಹುದೆಂದು ನಾಟಿ ಮಾಡಿ ನಂತರ ನೀರು ಸಿಗದಿದ್ದರೆ ಹಾಕಿದ ಬಂಡವಾಳವೂ ಬಾರದೇ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ರೈತರು ನಾಟಿ ಮಾಡದಿದ್ದರೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಜಲಾಶಯಕ್ಕೆ ಮುಂದಿನ ದಿನಗಳಲ್ಲಿ ನೀರು ಬಂದರೆ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸಿ ಕೊಡುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಈಗಾಗಲೇ ಸಹಕಾರ ಸಂಘಗಳ 25 ಸಾವಿರ ರೂ.ವರೆಗೆ ಸಾಲ ಮನ್ನಾ ಮಾಡಿದ್ದು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಹೋರಾಟ ಮಾಡಿದರೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಡ ಜನರ ಸೌಲಭ್ಯಗಳನ್ನು ಒಂದೊಂದೆ ಕಸಿದುಕೊಳ್ಳುತ್ತಿದ್ದು, ಕೈಗಾರಿಕೋದ್ಯಮಿಗಳಿಗೆ ನೆರವು ನೀಡುತ್ತಿದೆ. ಉದ್ಯಮಿಗಳಿಗೆ ನೆರವು ನೀಡುವುದನ್ನು ನಿಲ್ಲಿಸಿ ಬಡ ಜನರ ಕಲ್ಯಾಣಕ್ಕೆ ಶ್ರಮಿಸಲಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಂಪ್ಲಿ ಬ್ಲಾಕ್ ಸಮಿತಿ ಅಧ್ಯಕ್ಷ ಸಿ.ಆರ್.ಹನುಮಂತ, ಪುರಸಭೆ ಸದಸ್ಯ ಎಂ.ರಾಜೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ತಿಮ್ಮಯ್ಯ, ಮುಖಂಡರಾದ ಇಟಗಿ ಬಸವರಾಜಗೌಡ, ಪಿ.ಮೂಕಯ್ಯಸ್ವಾಮಿ ಎಚ್.ರಮೇಶಗೌಡ, ಜಾಫರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.