Advertisement
ಮಂಗಳವಾರ ನಗರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನೀರು ಯೋಜನೆಯ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಕೆಲವೆಡೆ ನಳ ಸಂಪರ್ಕ ಜೋಡಣೆ ಮಾಡಿಲ್ಲ. ಸೋರುವಿಕೆ ಬಂದ್ ಮಾಡಿಸಿಲ್ಲ. 5 ವಾರ್ಡ್‌ಗಳಲ್ಲಿ ಇನ್ನೂ ನೀರು ಪೂರೈಕೆಯಾಗುತ್ತಿಲ್ಲ. ಹೀಗಾದರೆ ನಗರದ ನಾಗರಿಕರಿಗೆ ನಾವು ಏನು ಉತ್ತರಿಸಬೇಕು? ನೀರು ಕೊಡಲಾಗದಿದ್ದರೆ ಹೊರಟು ಹೋಗಿ ಎಂದು ನಗರಸಭಾ ಸದಸ್ಯರು ಅಧಿಕಾರಿಗಳವಿರುದ್ಧ ಕಿಡಿಕಾರಿದರು.
Related Articles
Advertisement
ಡಿಪಿಆರ್‌ನಲ್ಲಿ ಸೂಚಿಸಿದಂತೆ ಮೊದಲು ನಳ ಸಂಪರ್ಕ ಜೋಡಣೆ ಮಾಡಬೇಕು. ಈಗಾಗಲೇ 22 ಸಾವಿರ ನಳ ಸಂಪರ್ಕ ಜೋಡಣೆ ಮಾಡಿದ್ದು, ಉಳಿದವುಗಳ ಜೋಡಣೆಗೆ ಹೊಸ ಡಿಪಿಆರ್ ಮಾಡಬೇಕು. 32, 33, 34, 35 ಹಾಗೂ 27 ನೇ ವಾರ್ಡಿನಲ್ಲಿ ತುರ್ತಾಗಿ ನೀರು ಸರಬರಾಜು ಮಾಡಬೇಕು. ಈ ಹಿಂದಿನ 35 ಜನ ನೀರು ಸರಬರಾಜು ಸಿಬ್ಬಂದಿಯನ್ನು ನೀರು ನಿರ್ವಹಣೆಗಾಗಿ ಬಳಸಿಕೊಳ್ಳಬೇಕು. ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ನಿರಂತರ ನೀರು ಸರಬರಾಜು ಮಾಡದಿದ್ದರೆ ನಗರಸಭೆ ವತಿಯಿಂದಲೇ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ನಗರದಲ್ಲಿ ಇರುವ ವಿದ್ಯುತ್ ದೀಪ ನಿರ್ವಹಣೆ ಮಾಡಲು ಪ್ರತಿ ತಿಂಗಳು 4 ಲಕ್ಷ ರೂ. ಪಾವತಿಸುತ್ತಿದ್ದು, ಪರಿಷ್ಕರಣೆ ಮಾಡಿದರೆ ತಿಂಗಳಿಗೆ 10 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಗುತ್ತಿಗೆದಾರರು ವಿದ್ಯುದ್ದೀಪ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ರಿಪೇರಿ ಮಾಡುತ್ತಿಲ್ಲ. ಹೊಸ ದೀಪಗಳನ್ನು ಅಳವಡಿಸುತ್ತಿಲ್ಲ. ಗುತ್ತಿಗೆದಾರರನ್ನು ಬದಲಾಯಿಸಿ ನಗರಸಭೆ ವತಿಯಿಂದಲೇ ನಿರ್ವಹಣೆ ಮಾಡಬೇಕೆಂದು ಸದಸ್ಯರು ಒತ್ತಾಯಿಸಿದರು.
6.26 ಕೋಟಿ ರೂ. ವೆಚ್ಚದ 92 ಕಾಮಗಾರಿಗಳಿಗೆ ಸಭೆ ಸರ್ವಾನುಮತದಿಂದ ಮಂಜೂರಾತಿ ನೀಡಿತು. ನಗರಸಭೆ ಸದಸ್ಯರಾದ ಪ್ರಕಾಶ ಬುರಡಿಕಟ್ಟಿ, ಪುಟ್ಟಪ್ಪ ಮರಿಯಮ್ಮನವರ, ಮಲ್ಲಿಕಾರ್ಜುನ ಅಂಗಡಿ, ನಿಂಗರಾಜ ಕೋಡಿಹಳ್ಳಿ, ಪ್ರಕಾಶ ಪೂಜಾರ, ಸಿದ್ದಪ್ಪ ಬಾಗಲವರ, ನಾಗರಾಜ ಪವಾರ, ಹುಚ್ಚಪ್ಪ ಮೆಡ್ಲೆರಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಪೌರಾಯುಕ್ತ ಉದಯಕುಮಾರ ಬಿ.ಟಿ. ಸೇರಿದಂತೆ ಅಧಿ ಕಾರಿಗಳು, ಸಿಬ್ಬಂದಿಗಳು ಇದ್ದರು.