Advertisement

ತ್ಯಾಜ್ಯ ವಿಂಗಡಿಸದಿದ್ದರೆ ದಂಡ

06:37 AM Feb 12, 2019 | Team Udayavani |

ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಹೊಸ ಗುತ್ತಿಗೆದಾರರನ್ನು ನೇಮಿಸಿದ ಬಳಿಕ ತ್ಯಾಜ್ಯ ವಿಂಗಡಣೆ ಮಾಡದ ಸಾರ್ವಜನಿಕರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದರು.

Advertisement

ವಾರ್ಡ್‌ವಾರು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆಯಲ್ಲಿನ ಲೋಪಗಳ ನಿವಾರಣೆಗೆ ಮೇಯರ್‌ ಗಂಗಾಂಬಿಕೆ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಪಾಲಿಕೆಯಿಂದ ಹಸಿ ಹಾಗೂ ಸ್ಯಾನಿಟರಿ ತ್ಯಾಜ್ಯ ಸಂಗ್ರಹಕ್ಕೆ ಮಾತ್ರ ಟೆಂಡರ್‌ ಆಹ್ವಾನಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಆಟೋಗಳು ಬಂದಾಗ ಹಸಿ ತ್ಯಾಜ್ಯವನ್ನು ಮಾತ್ರ ನೀಡಬೇಕು ಎಂದು ಹೇಳಿದರು.

ತ್ಯಾಜ್ಯ ವಿಂಗಡಿಸದೆ ಆಟೋಗಳಿಗೆ ನೀಡುವ ಸಾರ್ವಜನಿಕರಿಗೆ ದಂಡ ವಿಧಿಸಲು ಅವಕಾಶವಿದೆ. ಅದಕ್ಕೂ ಮೊದಲು ತ್ಯಾಜ್ಯ ವಿಂಗಡಿಸದೆ ನೀಡುವುದರಿಂದ ಆಗುವ ಅನಾನುಕೂಲಗಳು ಹಾಗೂ ವಿಂಗಡಣೆಯ ಅನುಕೂಲಗಳ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು. ಜತೆಗೆ ಮಾಧ್ಯಮಗಳು, ಸಂಘ-ಸಂಸ್ಥೆಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಭಿತ್ತರಿಸಲಾಗುವುದು. ಆ ನಂತರವೂ ವಿಂಗಡಣೆ ಮಾಡದವರ ವಿರುದ್ಧ ದಂಡ ಪ್ರಯೋಗ ಮಾಡಲಾಗುವುದು ಎಂದು ತಿಳಿಸಿದರು.

ಪಾಲಿಕೆಯಿಂದ ಆಹ್ವಾನಿಸಿರುವ ಹೊಸ ಟೆಂಡರ್‌ನಲ್ಲಿ 198 ವಾರ್ಡ್‌ಗಳಲ್ಲಿ ಪ್ರತಿ 5 ವಾರ್ಡ್‌ಗಳಿಗೆ ಒಬ್ಬರಂತೆ ಗುತ್ತಿಗೆದಾರರನ್ನು ನೇಮಿಸಲಾಗುತ್ತದೆ. ಇದರಿಂದಾಗಿ ಹೊಸ ಗುತ್ತಿಗೆದಾರರು ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತದೆ. ಜತೆಗೆ ಗುತ್ತಿಗೆದಾರರ ಬಳಿ ಆಟೋ ಟಿಪ್ಪರ್‌, ಕಾಂಪ್ಯಾಕ್ಟರ್‌ ವಾಹನಗಳಿರುವ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಕಾರ್ಯಾದೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪಾಲಿಕೆಯಲ್ಲಿರುವ ಸಗಟು ತ್ಯಾಜ್ಯ ಉತ್ಪಾದಕರಾದ ಹೋಟೆಲ್‌, ಅಪಾರ್ಟ್‌ಮೆಂಟ್‌ಗಳಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲು ಖಾಸಗಿ ಏಜೆನ್ಸಿಗಳನ್ನು ನೇಮಿಸಲಾಗುವುದು. ಅವರು ತ್ಯಾಜ್ಯ ಸಂಗ್ರಹಿಸಿದ ಶುಲ್ಕವನ್ನು ತ್ಯಾಜ್ಯ ಉತ್ಪಾದಕರಿಂದಲೇ ಸಂಗ್ರಹಿಸಲಿದ್ದು, ಪಾಲಿಕೆಯ ಸಂಸ್ಕರಣಾ ಘಟಕಗಳಲ್ಲಿ ಅವರು ಸಂಗ್ರಹಿಸಿದ ತ್ಯಾಜ್ಯ ವಿಲೇವಾರಿಗೆ ಅವಕಾಶ ನೀಡಲಾಗುವುದು ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು. 

Advertisement

ಇದರಿಂದಾಗಿ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ನಿಲ್ಲಲಿದೆ. ಜತೆಗೆ ಪಾಲಿಕೆಯ ಸಂಸ್ಕರಣಾ ಘಟಕಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದಕ್ಕೆ ಬದಲಾಗಿ, ಖಾಸಗಿ ಏಜೆನ್ಸಿಗಳಿಂದ ಇಂತಿಷ್ಟು ಶುಲ್ಕ ಸಂಗ್ರಹಿಸಲಾಗುವುದು. ಜತೆಗೆ ಸಗಟು ತ್ಯಾಜ್ಯ ಉತ್ಪಾದಕರಿಗೆ ಘನತ್ಯಾಜ್ಯ ಉಪಕರದಲ್ಲಿ ವಿನಾಯಿತಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಿದರು. 

ವೈದ್ಯಾಧಿಕಾರಿಗಳಿಗೆ ಪ್ಲಾಸ್ಟಿಕ್‌ ನಿಷೇಧ ಹೊಣೆ: ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ಇನ್ನೂ ಪ್ಲಾಸ್ಟಿಕ್‌ ಬಳಕೆಯಾಗುತ್ತಲೇ ಇದೆ. ಆ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವ ಹೊಣೆಯನ್ನು ಪಾಲಿಕೆಯ ಹಿರಿಯ ವೈದ್ಯಾಧಿಕಾರಿಗಳಿಗೆ ವಹಿಸಲಾಗುವುದು. ಸದ್ಯ ವೈದ್ಯಾಧಿಕಾರಿಗಳು ಉದ್ದಿಮೆ ಪರವಾನಗಿ ನೀಡುವ ಕೆಲಸವನ್ನಷ್ಟೇ ಮಾಡುತ್ತಿದ್ದು, ಇನ್ನು ಮುಂದೆ ಸಮರ್ಪಕವಾಗಿ ಪ್ಲಾಸ್ಟಿಕ್‌ ನಿಷೇಧಿಸುವ ಹೊಣೆಯನ್ನೂ ನಿರ್ವಹಿಸಬೇಖು ಎಂದು ಆಯುಕ್ತರು ತಿಳಿಸಿದರು.

ಕಟ್ಟಡ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಟೆಂಡರ್‌: ಹಸಿ ತ್ಯಾಜ್ಯ ವಿಲೇವಾರಿಯಂತೆಯೇ ನಗರದಲ್ಲಿನ ಕಟ್ಟಡ ತ್ಯಾಜ್ಯ ವಿಲೇವಾರಿಗೂ ಹೊಸದಾಗಿ ಟೆಂಡರ್‌ ಆಹ್ವಾನಿಸಲಾಗುವುದು. ಕಟ್ಟಡ ಕೆಡುವುದು ಮತ್ತು ನಿರ್ಮಿಸುವ ವೇಳೆ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಕಟ್ಟಡ ಮಾಲೀಕರಿಗೆ ಶುಲ್ಕ ವಿಧಿಸಲಾಗುವುದು.

ಕಟ್ಟಡ ತ್ಯಾಜ್ಯ ವಿಲೇವಾರಿಗೆ ವಲಯವಾರು ಶುಲ್ಕ ವಿಧಿಸಲು ನಿರ್ಧರಿಸಿದ್ದು, ಶೀಘ್ರವೇ ಟೆಂಡರ್‌ ಆಹ್ವಾನಿಸಲಾಗುವುದು. ಜತೆಗೆ ಈಗಾಗಲೇ ವಿಲೇವಾರಿಗೆ ಕೆಲವೊಂದು ಕ್ವಾರಿಗಳನ್ನು ಗುರುತಿಸಲಾಗಿದ್ದು, ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next