Advertisement

ದೇಶದೊಳಗೆ ದ್ರೋಹಿಗಳಾದರೆ ಸಹಿಸಲಾಗದು: ವಾಲ್ಮೀಕಿ

11:40 AM Jan 27, 2018 | Team Udayavani |

ವಾಡಿ: ಭಾರತದ ನೆಲದಲ್ಲಿ ಬದುಕಿ ಪರರಾಷ್ಟ್ರ ವ್ಯಾಮೋಹ ಹೊಂದುವುದು ದೇಶದ್ರೋಹವಾಗುತ್ತದೆ. ದೇಶದೊಳಗಿದ್ದು
ದ್ರೋಹಿಗಳಾದರೆ ಸಹಿಸುವುದಿಲ್ಲ ಎಂದು ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ವಾಲ್ಮೀಕಿ ನಾಯಕ
ಎಚ್ಚರಿಸಿದರು.

Advertisement

ಗಣರಾಜ್ಯೋತ್ಸವ ನಿಮಿತ್ತ ಬಿಜೆಪಿ ಸ್ಥಳೀಯ ಶಕ್ತಿಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಹಿರಿಯ ನಾಗರಿಕರ ವಿಶೇಷ
ಸನ್ಮಾನ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತದಲ್ಲಿ ನೂರಾರು ಧರ್ಮ ಜಾತಿಗಳಿರುವುದನ್ನು ಗಮನಿಸಿದ ಬಾಬಾಸಾಹೇಬ ಅಂಬೇಡ್ಕರ್‌ ಅವರು ಎಲ್ಲರಿಗೂ ಸಮನಾದ ಹಕ್ಕು, ಕರ್ತವ್ಯ ನೀಡುವ ಮೂಲಕ ಶಾಂತಿಯಿಂದ ಬದುಕಲು ಅವಕಾಶ ಕಲ್ಪಿಸಿದ್ದಾರೆ. ಇಷ್ಟಾದರೂ ದೇಶದೊಳಗೆ ದ್ರೋಹಿಗಳು ಹುಟ್ಟಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ನಂತರ ಬಲಿಷ್ಟ ದೇಶಭಕ್ತ ಪ್ರಧಾನಿಯೊಬ್ಬರು ಭಾರತಕ್ಕೆ ಸಿಕ್ಕಿದ್ದಾರೆ. ದೇಶದ ರಕ್ಷಣೆಯಲ್ಲಿ ನಿಂತಿರುವ ಸೈನಿಕರಿಗೆ ಶಕ್ತಿಯಾಗಿ ಶತ್ರುಗಳನ್ನು ಎದುರಿಸುವ ತಾಕತ್ತು ಬೆಳೆಸಿದ್ದಾರೆ. ಸೈನ್ಯ ಬಲಿಷ್ಟವಾಗಿರಬೇಕು. ಸೈನಿಕರಿಗೆ ಇರುವ ಕೊರತೆಗಳನ್ನು ನೀಗಿಸಿದ್ದಾರೆ. ವಿಶ್ವದಲ್ಲಿಯೇ ಭಾರತವನ್ನು ಬಲಶಾಲಿ ರಾಷ್ಟ್ರವನ್ನಾಗಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೈಜ ದೇಶಭಕ್ತ ರಾಜಕಾರಣಿ ಎಂದು ಬಣ್ಣಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ತುಕಾರಾಮ ಶೆಟ್ಟಿ ಮಾತನಾಡಿ, ಭಾರತ ವಿಶ್ವಕ್ಕೆ ಮಾದರಿ ರಾಷ್ಟ್ರವನ್ನಾಗಿ
ನಿರ್ಮಿಸುವ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು. ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಶ್ರವಣಕುಮಾರ ಮೌಸಲಗಿ, ನಿವೃತ್ತ ಶಿಕ್ಷಕ ಕೊಳ್ಳಪ್ಪ ಸಿಂಧಗೀಕರ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಕುಲಕರ್ಣಿ, ಸ್ಥಳೀಯ ಅಧ್ಯಕ್ಷ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಯುವ ಮೋರ್ಚಾ ಅಧ್ಯಕ್ಷ ರವಿ ಕಾರಬಾರಿ, ಪರುತಪ್ಪ ಕರದಳ್ಳಿ, ರಾಮಚಂದ್ರ ರೆಡ್ಡಿ, ಯಮನಪ್ಪ ನವನಳ್ಳಿ ಪಾಲ್ಗೊಂಡಿದ್ದರು.

ಹಿರಿಯ ನಾಗರಿಕರಾದ ಡಾ| ರಾಮು ಪವಾರ, ನಿವೃತ್ತ ಎಎಸ್‌ಐ ನಂದಕುಮಾರ, ನೀಲಯ್ಯಸ್ವಾಮಿ ಮಠಪತಿ, ಖಂಡೇರಾವ್‌ ಸೂರ್ಯವಂಶಿ, ಕೊಳ್ಳಪ್ಪ ಸಿಂಧಗೀಕರ, ಜಹಾಂಗೀರ್‌ ಸೇಠ, ವನಮಾಲಾ ದಹಿಹಂಡೆ, ಮಲ್ಲಮ್ಮ, ಕಿಶನರಾವ ಖಾನಕುರ್ತೆ, ಜೈರಾಮ ಅವರನ್ನು ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next